ಕಾಂಗ್ರೆಸ್‌ನಿಂದ ಕೆ.ಟಿ.ಚಕ್ರಪಾಣಿ, ಕೆ.ಬಿ.ಮಹೇಶ್‌ ಅಮಾನತ್ತು: ಸಿ.ಡಿ.ಗಂಗಾಧರ್

KannadaprabhaNewsNetwork |  
Published : Nov 28, 2025, 01:45 AM IST
26ಕೆಎಂಎನ್ ಡಿ28 | Kannada Prabha

ಸಾರಾಂಶ

ಎಂಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ವಿರುದ್ಧ ಮತ ಚಲಾಯಿಸಿದ ಮತ್ತು ಅದಕ್ಕೆ ಪರೋಕ್ಷ ಸಹಕಾರ ನೀಡಿದ ಆರೋಪದ ಮೇರೆಗೆ ಕೃಷ್ಣರಾಜಪೇಟೆ ವ್ಯವಸಾಯೋತ್ಪನ್ನ ಪತ್ತಿನ ಸಹಕಾರ ಸಂಘದ ನಿರ್ದೇಶಕ ಕೆ.ಟಿ.ಚಕ್ರಪಾಣಿ ಮತ್ತು ಪುರಸಭೆ ಸದಸ್ಯ ಕೆ.ಬಿ.ಮಹೇಶ್ ಅವರನ್ನು ಮುಂದಿನ ಆದೇಶದವರೆಗೆ ಕಾಂಗ್ರೆಸ್ ಪಕ್ಷದಿಂದ ಅಮಾನತ್ತು ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ(ಎಂಡಿಸಿಸಿ ಬ್ಯಾಂಕ್) ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ವಿರುದ್ಧ ಮತ ಚಲಾಯಿಸಿದ ಮತ್ತು ಅದಕ್ಕೆ ಪರೋಕ್ಷ ಸಹಕಾರ ನೀಡಿದ ಆರೋಪದ ಮೇರೆಗೆ ಕೃಷ್ಣರಾಜಪೇಟೆ ವ್ಯವಸಾಯೋತ್ಪನ್ನ ಪತ್ತಿನ ಸಹಕಾರ ಸಂಘದ ನಿರ್ದೇಶಕ ಕೆ.ಟಿ.ಚಕ್ರಪಾಣಿ ಮತ್ತು ಪುರಸಭೆ ಸದಸ್ಯ ಕೆ.ಬಿ.ಮಹೇಶ್ ಅವರನ್ನು ಮುಂದಿನ ಆದೇಶದವರೆಗೆ ಕಾಂಗ್ರೆಸ್ ಪಕ್ಷದಿಂದ ಅಮಾನತ್ತು ಮಾಡಿರುವುದಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಅಮಾನತ್ತು ಆದೇಶದ ಪ್ರತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಎಂಡಿಸಿಸಿ ಬ್ಯಾಂಕ್ ಚುನಾವಣೆಗೆ ಕೆ.ಟಿ.ಚಕ್ರಪಾಣಿ ಅವರು ಕೆ.ಆರ್.ಪೇಟೆ ವ್ಯವಸಾಯೋತ್ಪನ್ನ ಪತ್ತಿನ ಸಹಕಾರ ಸಂಘದ ಪ್ರತಿನಿಧಿಯಾಗಿ ಮತದಾನ ಮಾಡುವ ಹಕ್ಕು ಪಡೆದಿದ್ದರು. ಚುನಾವಣೆಯಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿ ಎಸ್.ಅಂಬರೀಶ್ ಅವರಿಗೆ ಮತ ಹಾಕುವಂತೆ ಕಾಂಗ್ರೆಸ್ ಅಧ್ಯಕ್ಷರು, ಮುಖಂಡರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರು ವಿನಂತಿಸಿದ್ದರು. ಆದರೆ, ಪಕ್ಷದ ವಿನಂತಿಯನ್ನು ಉಲ್ಲಂಘಿಸಿ ಕೆ.ಟಿ.ಚಕ್ರಪಾಣಿಯವರು ಜೆಡಿಎಸ್ ಬೆಂಬಲಿತ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸಿದ್ದಾರೆ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕೆ.ಬಿ.ಮಹೇಶ್ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕುವಂತೆ ಕೆ.ಟಿ.ಚಕ್ರಪಾಣಿ ಸೇರಿದಂತೆ ಕೆಲವು ಪ್ರತಿನಿಧಿಗಳಿಗೆ ಒತ್ತಡ ಹಾಕಿರುವುದು ಧೃಡಪಟ್ಟಿದೆ. ಆದಕಾರಣ ಕಾಂಗ್ರೆಸ್ ಪಕ್ಷದ ನಿಯಮಾವಳಿ ಪ್ರಕಾರ ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಕೆ.ಟಿ.ಚಕ್ರಪಾಣಿ ಮತ್ತು ಕೆ.ಬಿ.ಮಹೇಶ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯ ಚಟುವಟಿಕೆಗಳಿಂದ ಮುಂದಿನ ಆದೇಶದವರೆಗೆ ಅಮಾನತ್ತು ಮಾಡಿರುವುದಾಗಿ ತಿಳಿಸಿದರು.

ಕ್ಷೇತ್ರದಲ್ಲಿ ಪಕ್ಷದ ಬಲವರ್ಧನೆಗಾಗಿ ಕಾರ್ಯಕರ್ತರಿಗೆ ಶಕ್ತಿ ತುಂಬವ ಕಾರ್ಯಕ್ಕೆ ಆದ್ಯತೆ ನೀಡಲಾಗಿದೆ. ತಾಲೂಕು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್ ಅವರಿಗೆ ಸಚಿವ ದರ್ಜೆ ಸ್ಥಾನಮಾನ ನೀಡಿ ರಾಜ್ಯ ಕೈಮಗ್ಗ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಶೀಳನೆರೆ ಎಸ್.ಅಂಬರೀಶ್ ಅವರನ್ನು ಎಂ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರನ್ನಾಗಿ ಗೆಲ್ಲಿಸಿಕೊಳ್ಳಲಾಗಿದೆ, ಇವರಿಗೆ ಅಭಿನಂದನೆ ಸಲ್ಲಿಸಲಾಗುವುದು. ಪಿ.ಎಲ್.ಡಿ ಬ್ಯಾಂಕ್ ಸೇರಿದಂತೆ ತಾಲೂಕಿನ ಸುಮಾರು 15 ಸಹಕಾರ ಕೃಷಿ ಪತ್ತಿನ ಸಹಕಾರ ಸಂಘಗಳು ಕಾಂಗ್ರೆಸ್ ಬೆಂಬಲಿತರ ಆಡಳಿತದಲ್ಲಿವೆ. ಜೆಡಿಎಸ್ ಪಕ್ಷ ಅಕ್ರಮ ಮತದಾನ ಮಾಡಿಸಿದ ಪರಿಣಾಮ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ. ಮುಂಬರುವ ಪುರಸಭೆ ಸೇರಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸುವುದಕ್ಕಾಗಿ ಡಿಸೆಂಬರ್ ತಿಂಗಳ 2ನೇ ವಾರದಲ್ಲಿ ಕಾರ್ಯಕರ್ತರ ಬೃಹತ್ ಸಭೆ ನಡೆಸಲಾಗುವುದು ಎಂದು ಹೇಳಿದರು.

ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅವರ ಸಹೋದರ ಕೆ.ಬಿ.ಮಹೇಶ್, ಕೆ.ಟಿ.ಚಕ್ರಪಾಣಿ ಸಹೋದರಿಯ ಮಗ. ಕೆಬಿಸಿ ಕುಟುಂಬದ ಇಬ್ಬರು ವ್ಯಕ್ತಿಗಳನ್ನು ಅಮಾನತ್ತು ಮಾಡಿರುವುದು ಪಕ್ಷದ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಈ ವೇಳೆ ರಾಜ್ಯ ಕೈಮಗ್ಗ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಶೀಳನೆರೆ ಎಸ್.ಅಂಬರೀಶ್, ತಾಲೂಕು ಕಾಂಗ್ರೆಸ್ ಉಸ್ತುವಾರಿ ಚಿನಕುರಳಿ ರಮೇಶ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎ.ಬಿ.ಕುಮಾರ್, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಕಬ್ಬಲಗೆರೆಪುರ ಪುಟ್ಟಸ್ವಾಮಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಟಿ.ಎನ್.ದಿವಾಕರ್, ಇಲ್ಯಾಸ್ ಪಾಷ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

10 ಪ್ಯಾರಾದಲ್ಲಿ ಕೇಂದ್ರ ವಿರುದ್ಧ ಟೀಕಾ ಪ್ರಹಾರ
ಬೇಡಿಕೆಗೆ ತಕ್ಕಷ್ಟು ಬರುತ್ತಿಲ್ಲ ಮೈಸೂರು ರೇಷ್ಮೆ ಸೀರೆ