ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಸೋಮವಾರಪೇಟೆ ಅಭಿವೃದ್ಧಿ ಪ್ರಾಧಿಕಾರದ ಪ್ರಥಮ ಅಧ್ಯಕ್ಷರಾಗಿ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಹಾಗು ಹಿರಿಯ ಕಾಂಗ್ರೆಸ್ ಮುಖಂಡ ಕೆ.ಎ.ಆದಂ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದೀಗ ನೂತನ ಸಮಿತಿಯ ಅಧ್ಯಕ್ಷ ಆದಂ ಅವರೊಂದಿಗೆ ಬೇಳೂರು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎನ್.ಬಸವರಾಜು, ಪಟ್ಟಣದ ಕಾಂಗ್ರೆಸ್ ಕಾರ್ಯಕರ್ತ ಲೋಹಿತಾಶ್ವ ಹಾಗೂ ಚೌಡ್ಲು ಗ್ರಾಮದ ದರ್ಶನ್ ಅವರನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಿ ಪ್ರಾಧಿಕಾರ ಹಾಗೂ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಲತಾ ಮಾ.೧೪ರಂದು ಆದೇಶ ನೀಡಿದ್ದಾರೆ.ಇವರೊಂದಿಗೆ ಸದಸ್ಯ ಕಾರ್ಯದರ್ಶಿಯಾಗಿ ಜಿಲ್ಲಾ ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರು, ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ಚುನಾಯಿತ ಸದಸ್ಯರೊಬ್ಬರು, ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ.
ಕಳೆದ ಮೂರು ವರ್ಷಗಳ ಹಿಂದೆ ೨೦೨೦ ನವೆಂಬರ್‌ನಲ್ಲಿ ಬಿಜೆಪಿ ಸರ್ಕಾರದ ಆಡಳಿತವಿದ್ದ ಸಂದರ್ಭ ಅಂದಿನ ಶಾಸಕ ಅಪ್ಪಚ್ಚುರಂಜನ್ ಅವರ ವಿಶೇಷ ಪ್ರಯತ್ನದಿಂದಾಗಿ ರಾಜ್ಯ ಸರ್ಕಾರ ಸೋಮವಾರಪೇಟೆ ಅಭಿವೃದ್ಧಿ ಪ್ರಾಧಿಕಾರ ರಚಿಸಿತ್ತು. ಆದರೆ ಮೂರು ವರ್ಷಗಳ ಸುದೀರ್ಘ ಅವಧಿಯವರೆಗೆ ಸಮಿತಿ ಅಸ್ತಿತ್ವಕ್ಕೆ ಬಂದಿರಲಿಲ್ಲ. ನೂತನ ಸಮಿತಿ ರಚನೆಯಿಂದಾಗಿ ಸೋಮವಾರಪೇಟೆ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನಾಗರಿಕರು ಕುಶಾಲನಗರ ಹಾಗೂ ಮಡಿಕೇರಿಗೆ ಅಲೆದಾಡುವುದು ತಪ್ಪಿಂದಾಗಿದೆ. ನೂತನ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಚೌಡ್ಲು ಗ್ರಾಮ ಪಂಚಾಯಿತಿ, ಹಾನಗಲ್ ಗ್ರಾಮ ಪಂಚಾಯಿತಿ ಭಾಗಶಃ, ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಳೂರು ಗ್ರಾಮ ಹಾಗೂ ನೇಗಳ್ಳೆ-ಕರ್ಕಳ್ಳಿ ಗ್ರಾಮದ ಕೆಲವು ಸ್ಥಳಗಳ ನಾಗರಿಕರಿಗೆ ಅನುಕೂಲವಾಗಲಿದೆ.ಅಭಿವೃದ್ಧಿ ಪ್ರಾಧಿಕಾರದ ನೂತನ ಸಮಿತಿಯು ಕಾರ್ಯಾರಂಭ ಮಾಡಿದ ನಂತರ ನಗರ ಮತ್ತು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಾಗಲಿದೆ. ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸರ್ಕಾರದ ವತಿಯಿಂದ ನಿವೇಶನಗಳನ್ನು ಖರೀದಿಸಿ ಅರ್ಹ ಫಲಾನುಭವಿಗಳಿಗೆ ಹಂಚುವುದು ಸೇರಿದಂತೆ ಹತ್ತು ಹಲವು ಪ್ರಯೋಜನಗಳು ಜನತೆಗೆ ಸಿಗಲಿವೆ. ಪ್ರಥಮ ಅಧ್ಯಕ್ಷರಾಗಿ ಅದೃಷ್ಟ!
ಅಭಿವೃದ್ಧಿ ಪ್ರಾಧಿಕಾರದ ಪ್ರಥಮ ಅಧ್ಯಕ್ಷರಾಗಿ ನೇಮಕಗೊಂಡಿರುವ ಹಿರಿಯ ಕಾಂಗ್ರೆಸ್ ಮುಖಂಡ ಕೆ.ಎ.ಆದಂ ಅವರು ೧೯೯೬ರಿಂದ ಈವರೆಗೆ ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ಸದಸ್ಯರಾಗಿ ಮೂರು ಬಾರಿ ಆಯ್ಕೆಗೊಂಡಿದ್ದಾರೆ. ಪಟ್ಟಣ ಪಂಚಾಯಿತಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿಯಾಗಿ ನಾಲ್ಕು ವರ್ಷ ಸೇವೆ, ಜಿಲ್ಲಾ ಯೋಜನಾ ಸಮಿತಿ ಸದಸ್ಯ, ಆರ್‌ಎಂಸಿಯ ಚುನಾಯಿತ ಪ್ರತಿನಿಧಿಯಾಗಿ ಆಯ್ಕೆ, ಕಾಂಗ್ರೆಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷರಾಗಿ ಒಂದು ಅವಧಿಯಲ್ಲಿ ಕೆಲಸ ಮಾಡಿರುತ್ತಾರೆ. ಸೋಮವಾರಪೇಟೆ ಜಲಾಲೀಯ ಮಸೀದಿಯ ಅಧ್ಯಕ್ಷರಾಗಿ ೨೫ ವರ್ಷ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಕಾಂಗ್ರೆಸ್ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಸದಸ್ಯರಾಗಿ ನೇಮಕವಾಗಿರುವ ಬೇಳೂರು ಗ್ರಾಮ ಪಂಚಾಯಿತಿಯ ಬಿ.ಎನ್.ಬಸವರಾಜು ಅವರು ಕಾಂಗ್ರೆಸ್ ಪಕ್ಷದ ಹಿರಿಯ ಕಾರ್ಯಕರ್ತರಾಗಿ ಸೇವೆ , ಅಲ್ಲದೇ ಬೇಳೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿಯೂ ಉತ್ತಮ ಕೆಲಸ ನಿರ್ವಹಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿರುವ ಪಟ್ಟಣದ ಲೋಹಿತಾಶ್ವ ಹಾಗೂ ಚೌಡ್ಲು ಗ್ರಾಮ ಪಂಚಾಯಿತಿಯ ದರ್ಶನ್ ಕರ್ತವ್ಯ ನಿರ್ವಹಿಸಲಿರುವರು.