ಎಸ್‌.ಬಿದರೆ - ಜಾವಗಲ್‌ಗೆ ಬಸ್‌ ಸೌಕರ್ಯ ಕಲ್ಪಿಸಲು ಕರವೇ ಆಗ್ರಹ

KannadaprabhaNewsNetwork | Published : Oct 22, 2024 12:06 AM

ಸಾರಾಂಶ

ಚಿಕ್ಕಮಗಳೂರು, ಕಡೂರು ತಾಲೂಕಿನ ಎಸ್.ಬಿದರೆ ಗ್ರಾಮದ ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿ ಕರವೇ (ಪ್ರವೀಣ್‌ಶೆಟ್ಟಿ ಬಣ) ಮುಖಂಡರು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್‌ಕುಮಾರ್‌ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಕರವೇ (ಪ್ರವೀಣ್‌ಶೆಟ್ಟಿ ಬಣ) ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗೆ ಮನವಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕಡೂರು ತಾಲೂಕಿನ ಎಸ್.ಬಿದರೆ ಗ್ರಾಮದ ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿ ಕರವೇ (ಪ್ರವೀಣ್‌ಶೆಟ್ಟಿ ಬಣ) ಮುಖಂಡರು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್‌ಕುಮಾರ್‌ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.ಬಳಿಕ ಮಾತನಾಡಿದ ಕರವೇ ಜಿಲ್ಲಾ ಉಸ್ತುವಾರಿ ಅಧ್ಯಕ್ಷ ದಿನೇಶ್ ಶಿವಪುರ ಅವರು, ಎಸ್.ಬಿದರೆ, ಧರ್ಮಪುರ, ಲಿಂಗದಹಳ್ಳಿ ಗ್ರಾಮಗಳ ಅನೇಕ ಮಕ್ಕಳು ವಿದ್ಯಾಭ್ಯಾಸಕ್ಕೆ ಜಾವಗಲ್‌ಗೆ ತೆರಳಬೇಕಿದೆ. ಅವರುಗಳು ವಾಪಸ್ ಬರಲು ಬಸ್ ಸೌಕರ್ಯವಿಲ್ಲದೇ ಪರದಾಡುವಂತಾಗಿದೆ ಎಂದು ಹೇಳಿದರು.ವಿವಿಧ ಗ್ರಾಮಗಳಿಂದ ಜಾವಗಲ್‌ಗೆ ಸುಮಾರು 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೆರಳುತ್ತಿದ್ದಾರೆ. ಬೆಳಿಗ್ಗೆ ಸಮಯಕ್ಕೆ ಬಸ್ಸಿದೆ. ಆದರೆ, ಶಾಲಾವಧಿ ಮುಗಿದ ಬಳಿಕ ಸಂಜೆ 4 ಕ್ಕೆ ವಾಪಸ್ ತೆರಳಲು ಯಾವುದೇ ಸರ್ಕಾರಿ ಬಸ್‌ಗಳಿಲ್ಲ. ಇದರಿಂದ ಬೇಸತ್ತಿರುವ ವಿದ್ಯಾರ್ಥಿಗಳು ಸಮಯಕ್ಕೆ ಮನೆಗೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದರು.ಸಂಜೆ ವೇಳೆ ಬಸ್‌ ಇಲ್ಲದ ಕಾರಣ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ತಮ್ಮ ಗ್ರಾಮಕ್ಕೆ ನಡೆದುಕೊಂಡೇ ತೆರಳುವ ಸ್ಥಿತಿಯಿದೆ. ಕೆ ಎಸ್ ಆರ್ ಟಿ ಸಿ ಅಧಿಕಾರಿಗಳು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಜಾವಗಲ್‌ನಿಂದ ಎಸ್.ಬಿದರೆ ಗ್ರಾಮಕ್ಕೆ ತೆರಳಲು ಸಂಜೆ 4 ಕ್ಕೆ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ಅತ್ತಿಗುಂಡಿ, ದತ್ತಪೀಠ, ಮಹಲ್, ಬಿಸಗ್ನಿಮಠ ಹಾಗೂ ಕೆಸವಿನಮನೆಗೆ ಕೆ ಎಸ್ ಆರ್ ಟಿ ಸಿ ಬಸ್ ಸಮಯಕ್ಕೆ ಬರುತ್ತಿಲ್ಲ. ಬಸ್‌ನ ಚಾಲಕ ಸ್ಥಳೀಯ ನಿವಾಸಿಗಳಿಗೆ ಸ್ಪಂದಿಸುತ್ತಿಲ್ಲ ಹಾಗೂ ಸಮಯಕ್ಕೆ ಸಂಚರಿಸುತ್ತಿಲ್ಲ. ಈ ಬಗ್ಗೆ ವಿಚಾರಿಸಿದರೆ ಚಾಲಕ ಖಾಸಗಿ ಬಸ್‌ನಲ್ಲಿ ತೆರಳಿ ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ದೂರಿದರು.ಚಾಲಕನ ವರ್ತನೆ ಗಮನಿಸಿದರೆ ಚಾಲಕ ಮತ್ತು ಡಿಪೋ ಮ್ಯಾನೇಜರ್ ಖಾಸಗಿ ಬಸ್ ಮಾಲೀಕರ ಜೊತೆ ಹೊಂದಾಣಿಕೆ ಮಾಡಿಕೊಂಡಂತಿದೆ ಎಂಬ ಅನುಮಾನ ಮೂಡುತ್ತಿದೆ. ಹೀಗಾಗಿ ಪ್ರಸ್ತುತ ದತ್ತಪೀಠ ಭಾಗದಲ್ಲಿ ಸಂಚರಿಸುವ ಸರ್ಕಾರಿ ಬಸ್ ಚಾಲಕನ ಬದಲಾಗಿ ಬೇರೆ ಚಾಲಕನನ್ನು ನೇಮಿಸುವ ಮೂಲಕ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಎನ್.ಜಗದೀಶ್, ತಾಲೂಕು ಅಧ್ಯಕ್ಷ ಎಸ್.ಡಿ.ಜೀವನ್, ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಹರ್ಷ, ಗೌರವಾಧ್ಯಕ್ಷ ರಾಜಣ್ಣ, ಉಪಾಧ್ಯಕ್ಷರಾದ ಕುಮಾರ್, ಕಿರಣ್, ಗಿರಿ ಭಾಗದ ಗ್ರಾಮಸ್ಥರಾದ ಸುರೇಂದ್ರ, ಕುಮಾರ್, ಸುಂದರೇಶ್, ಅವಿನಾಶ್ ಹಾಜರಿದ್ದರು. 21 ಕೆಸಿಕೆಎಂ 4ಕಡೂರು ತಾಲೂಕಿನ ಎಸ್.ಬಿದರೆ ಗ್ರಾಮದ ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿ ಕರವೇ (ಪ್ರವೀಣ್‌ಶೆಟ್ಟಿ ಬಣ) ಮುಖಂಡರು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್‌ಕುಮಾರ್‌ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

Share this article