ಕಡಬಗೆರೆ ಮೆಟ್ರೋ ಕಾಮಗಾರಿ ವರ್ಷಾಂತ್ಯಕ್ಕೆ ಶುರು?

KannadaprabhaNewsNetwork |  
Published : Apr 04, 2024, 02:02 AM ISTUpdated : Apr 04, 2024, 06:20 AM IST
ಮೆಟ್ರೋ | Kannada Prabha

ಸಾರಾಂಶ

ಕೇಂದ್ರ ಸರ್ಕಾರದ ಅನುಮತಿ ಸಿಕ್ಕಿ ತಕ್ಷಣವೇ ಕಡಬಗೆರೆ ಮೆಟ್ರೋ ಯೋಜನೆಗೆ ಅನುಷ್ಠಾನಕ್ಕೆ ಬರಲಿದೆ. ಈಗಾಗಲೇ ಕೇಂದ್ರಕ್ಕೆ ನಮ್ಮ ಮೆಟ್ರೋ ನಿಗಮ ಡಿಪಿಆರ್‌ ಸಲ್ಲಿಸಿದೆ.

  ಬೆಂಗಳೂರು :  ಕೇಂದ್ರ ಸರ್ಕಾರದ ಅನುಮೋದನೆ ದೊರೆತಲ್ಲಿ ಬಹುನಿರೀಕ್ಷೆಯ ನಮ್ಮ ಮೆಟ್ರೋ ಮೂರನೇ ಹಂತದ ಸುಮಾರು 44.65 ಕಿ.ಮೀ. ಯೋಜನೆ ಕಾಮಗಾರಿ ವರ್ಷಾಂತ್ಯಕ್ಕೆ ಆರಂಭವಾಗುವ ನಿರೀಕ್ಷೆಯಿದೆ.

ಲೋಕಸಭಾ ಚುನಾವಣೆ ಘೋಷಣೆಗೆ ಮುನ್ನವೇ ₹15611 ಕೋಟಿ ಮೊತ್ತದ ಈ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡುವ ನಿರೀಕ್ಷೆ ಇತ್ತಾದರೂ ಅದು ಹುಸಿಯಾಗಿದೆ. ರಾಜ್ಯ ಸರ್ಕಾರ ಈಗಾಗಲೇ ಒಪ್ಪಿಗೆ ನೀಡಿದ್ದು, ಈಗ ಯೋಜನೆ ಒಪ್ಪಿಗೆಗೆ ಕೇಂದ್ರದ ಅಂತಿಮ ಮುದ್ರೆ ಬಾಕಿ ಇದೆ.

ಕಳೆದ ಡಿಸೆಂಬರ್‌ನಿಂದಲೇ ಯೋಜನೆಗಾಗಿ ಭೂಸ್ವಾಧೀನ ಸೇರಿ ಇತರೆ ಪ್ರಾಥಮಿಕ ಹಂತದ ಕಾರ್ಯಗಳನ್ನು ಬಿಎಂಆರ್‌ಸಿಎಲ್‌ ಕೈಗೊಂಡಿದೆ. ಯೋಜನೆ ಕಾಮಗಾರಿಯನ್ನು ಹಂತ ಹಂತವಾಗಿ ಆರಂಭಿಸಲು ಸಿದ್ಧತೆ ನಡೆಸಿಕೊಂಡಿದೆ. ಮೂರನೇ ಹಂತಕ್ಕೆ ನೂರು ಎಕರೆ ಜಾಗ ಗುರುತಿಸಿದ್ದು, ಈ ಪೈಕಿ ಬ್ಯಾಡರಹಳ್ಳಿ ಪೊಲೀಸ್ ಠಾಣೆ ಬಳಿಯ ಮಾಗಡಿ ರಸ್ತೆಯಲ್ಲಿ ಡಿಪೋ ನಿರ್ಮಾಣಕ್ಕೆ 75 ಎಕರೆ ಮೀಸಲಿಡಲಾಗಿದೆ. ಇದಲ್ಲದೇ 25 ಎಕರೆ ಜಾಗವನ್ನು ಮೇಲ್ಸೇತುವೆ ನಿರ್ಮಾಣಕ್ಕೆ ಮೀಸಲಿಡಲಾಗಿದೆ. ಬಿಎಂಆರ್​ಸಿಎಲ್​​ನ ಯೋಜನಾ ವಿಭಾಗವು ಪ್ರಸ್ತಾವಿತ ನಮ್ಮ ಮೆಟ್ರೋ ಲೈನ್‌ಗಳ ಪ್ರತಿ 10 ಕಿಮೀ ವಿಭಾಗಕ್ಕೆ ಭೂಸ್ವಾಧೀನ ಅಗತ್ಯತೆಗಳನ್ನು ಸಲ್ಲಿಸಬೇಕಿದ್ದು, ಪ್ರಕ್ರಿಯೆ ನಡೆಯುತ್ತಿದೆ.

ಇದರ ಜೊತೆಗೆ ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ಸೂಚನೆಯಂತೆ ಯೋಜನಾ ವೆಚ್ಚ ಕಡಿತಗೊಳಿಸುವ ಉದ್ದೇಶದಿಂದ ರೈಲಿನ ಬೋಗಿಗಳ ಸಂಖ್ಯೆಯನ್ನು ಆರರಿಂದ ಮೂರಕ್ಕಿಳಿಸಿ ಮರು ಪ್ರಸ್ತಾವನೆ ಸಲ್ಲಿಸಿದೆ.

ಆದರೆ, ಇತ್ತೀಚೆಗೆ ಇದೇ ಮಾರ್ಗದಲ್ಲಿ ಜೆ.ಪಿ.ನಗರ 4ನೇ ಹಂತದಿಂದ ಹೆಬ್ಬಾಳದವರೆಗೆ (29.2 ಕಿಮೀ), ಹೊಸಹಳ್ಳಿಯಿಂದ ಕಡಬಗೆರೆ (11.45 ಕಿಮೀ), ಸರ್ಜಾಪುರ-ಇಬ್ಬಲೂರು, ಹೊರವರ್ತುಲ ರಸ್ತೆಗುಂಟ (14.5 ಕಿಮೀ) ಹಾಗೂ ಕೋರಮಂಗಲ-ಅಗರ (2.4 ಕಿಮೀ) ಉದ್ದದ ಡಬಲ್‌ ಡೆಕ್ಕರ್‌ (ಮೆಟ್ರೋ ಕಂ ರಸ್ತೆ) ರೂಪಿಸಿಕೊಳ್ಳಲು ಕಾರ್ಯಸಾಧ್ಯತಾ ವರದಿ ಪಡೆಯಲು ಮುಂದಾಗಿದೆ.

2022ರ ನವೆಂಬರ್‌ನಲ್ಲಿಯೇ ರಾಜ್ಯ ಸರ್ಕಾರ ನಮ್ಮ ಮೆಟ್ರೋವನ್ನು ಎರಡು ಹಂತದಲ್ಲಿ 3 ಕಾರಿಡಾರ್‌ 44.6 ಕಿಮೀ ಅಂದರೆ, ಮೊದಲನೆಯದಾಗಿ ಜೆ.ಪಿ.ನಗರ 4ನೇ ಹಂತ-ಕೆಂಪಾಪುರ ಹೊರ ವರ್ತುಲ ರಸ್ತೆ (32.1 ಕಿಮೀ) ಮತ್ತು ಹೊಸಹಳ್ಳಿ- ಮಾಗಡಿ ರಸ್ತೆಯಲ್ಲಿ ಕಡಬಗೆರೆ ಮಾರ್ಗ (12.5 ಕಿ.ಮೀ) ಯೋಜನೆಗೆ ಡಿಪಿಆರ್‌ ರೂಪಿಸಿತ್ತು. ಆದರೆ, ಕೇಂದ್ರ ಈ ಡಿಪಿಆರ್‌ ಬದಲಾವಣೆಗೆ ಸೂಚಿಸಿದ್ದರಿಂದ ರೈಲಿನ ಉದ್ದ, ನಿಲ್ದಾಣಗಳ ವಿನ್ಯಾಸದಲ್ಲಿ ಒಂದಿಷ್ಟು ಬದಲಾವಣೆಯೊಂದಿಗೆ ಮರು ಪ್ರಸ್ತಾವನೆ ಸಲ್ಲಿಸಿದೆ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ