ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ತಾಲೂಕಿನ ತಾತನಹಳ್ಳಿ ಗ್ರಾಮದಲ್ಲಿ ಶ್ರೀ ಕದರಿ ಲಕ್ಷ್ಮೀನರಸಿಂಹಸ್ವಾಮಿ ಸಮಿತಿ ಟ್ರಸ್ಟ್ ಹಾಗೂ ಶ್ರೀಸ್ವಾಮಿಯ ಭಕ್ತರ ಸಹಕಾರದಲ್ಲಿ ನಿರ್ಮಿಸಲಾದ ಶ್ರೀ ಕದರಿ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಪ್ರತಿಷ್ಠಾಪನಾ ಪೂಜಾ ಮಹೋತ್ಸವವು ಶುಕ್ರವಾರದಿಂದ ಆರಂಭಗೊಂಡು ಭಾನುವಾರ ವಿಶೇಷ ಪ್ರತಿಷ್ಠಾಪನಾ ಪೂಜೆಯೊಂದಿಗೆ ಸಂಭ್ರಮದಿಂದ ಸಂಪನ್ನಗೊಳ್ಳಲಿದೆ.ಶುಕ್ರವಾರ ದಿನವಿಡೀ ಪ್ರಾರ್ಥನೆ, ವಿಶ್ವಕರ್ಮ ಪೂಜೆ, ದೇವಾಲಯ ಪ್ರವೇಶ, ಗಣಪತಿ ಪೂಜೆ, ಪುಣ್ಯಾಹ ವಾಚನ, ಪಂಚಗವ್ಯ, ಸಪ್ತಶುದ್ಧಿ, ಪ್ರಾಸಾದ ಶುದ್ಧಿ, ವಾಸ್ತು ಪೂಜೆ, ರಥೋತ್ಪತ್ತಿ, ಬಿಂಬಶುದ್ಧಿ ಹಾಗೂ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನಡೆಯಿತು. ಶನಿವಾರ ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಗಂಗಾಪೂಜೆ, ಗೋ ಪೂಜೆ, ಕಲಶ ಪೂಜೆ, ಮೆರವಣಿಗೆ ಬಿಂಬಶುದ್ಧಿ, ಬಿಂಬಾಧಿವಾಸ, ಶಯ್ಯಾಧಿವಾಸ, ಪ್ರಾಯಶ್ಚಿತ್ತ ಹೋಮ, ಮಹಾಮಂಗಳಾರತಿ ನೆರವೇರಿತು. ಸಂಜೆ 5 ಗಂಟೆಯಿಂದ ಕಲಶಾಧಿವಾಸ, ಕಲಶ ಪ್ರತಿಷ್ಠೆ, ಕಲಾಹೋಮ, ಅಷ್ಟಬಂಧನ ಹಾಗೂ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.ಭಾನುವಾರ ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ತುಮಕೂರು ಜಿಲ್ಲೆ, ತೂರುವೇಕೆರೆ ತಾಲೂಕು, ಮಾಯಸಂದ್ರ ಹೋಬಳಿ, ಶೆಟ್ಟಿಗೊಂಡನಹಳ್ಳಿಯ ಶ್ರೀ ಕ್ಷೇತ್ರ ದುದ್ದೇಶಾಲೆ, ಶ್ರೀ ಹಳ್ಳಿಕಾರ ಮಠದ ಪೂಜ್ಯ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಬೆಂಗಳೂರು ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಬಾಲಕೃಷ್ಣಾನಂದ ಸ್ವಾಮೀಜಿ, ತೇಜೂರು ಸಿದ್ದೇಶ್ವರ ಮಠದ ಶ್ರೀ ಕಲ್ಯಾಣ ಸ್ವಾಮೀಜಿ, ಟಿ. ಮಾಯಗೌಡನಹಳ್ಳಿ ರಾಜಪುರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಪ್ರತಿಷ್ಠಾ ಹೋಮ, ಪ್ರಧಾನ ಹೋಮ, ಬಿಂಬ ಪ್ರತಿಷ್ಠೆ, ಕಲಶಾಭಿಷೇಕ, ಕುಂಭಾಭಿಷೇಕ, ಪಂಚಾಮೃತ ಅಭಿಷೇಕ, ಅಲಂಕಾರ, ರಂಭಾಚೇದನ, ಕೂಷ್ಮಾಂಡಚೇದನ, ಪೂರ್ಣಾಹುತಿ, ಪ್ರಾಣ ಪ್ರತಿಷ್ಠೆ, ನೇತ್ರೋನ್ಮೀಲನ, ಮಹಾನೈವೇದ್ಯ ನೆರವೇರಿತು.ಮಧ್ಯಾಹ್ನ 12.30 ಗಂಟೆಗೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಪೂಜಾ ಮಹೋತ್ಸವದಲ್ಲಿ ಶ್ರೀಸ್ವಾಮಿಯ ಭಕ್ತರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಶ್ರೀ ಕದರಿ ಲಕ್ಷ್ಮೀ ನರಸಿಂಹಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ದೇವಾಲಯ ಆಡಳಿತ ಮಂಡಳಿ ಮನವಿ ಮಾಡಿದೆ.