ಕನ್ನಡಪ್ರಭ ವಾರ್ತೆ ಮಂಗಳೂರು
ಅಪಘಾತಕ್ಕೀಡಾದ ಕಾರನ್ನು ಪೊಲೀಸ್ ಠಾಣೆಯಿಂದ ಬಿಡಿಸಲು ಲಂಚಕ್ಕೆ ಬೇಡಿಕೆಯಿಟ್ಟು, ಅದು ಆಗದಿದ್ದಾಗ ಬಲವಂತವಾಗಿ ಮೊಬೈಲ್ ಫೋನ್ ವಶದಲ್ಲಿರಿಸಿ, ಅದನ್ನು ಬಿಡಿಸಲು ಲೈಸನ್ಸ್ ಪಡೆದು, ಲೈಸನ್ಸ್ ಬಿಡಿಸಿಕೊಳ್ಳಲು 5 ಸಾವಿರ ರು. ಲಂಚ ಸ್ವೀಕರಿಸಿದ ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆ ಸಿಬ್ಬಂದಿ ತಸ್ಲಿಂ ರೆಡ್‌ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.ನಗರದ ನಂತೂರು ಸರ್ಕಲ್‌ನಲ್ಲಿ ಇತ್ತೀಚೆಗೆ ದೂರುದಾರರ ಕಾರು ಮತ್ತು ಸ್ಕೂಟರ್ ಮಧ್ಯೆ ಅಪಘಾತವಾಗಿದ್ದು, ಈ ಕುರಿತು ಕದ್ರಿ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಠಾಣೆಯ ಸಿಬ್ಬಂದಿ ತಸ್ಲಿಂ ಅವರು ದೂರುದಾರರಿಗೆ ಕಾರಿನ ದಾಖಲಾತಿಗಳನ್ನು ಠಾಣೆಗೆ ತಂದು ಕೊಡುವಂತೆ ತಿಳಿಸಿದ್ದು, ಅದರಂತೆ ದಾಖಲೆಗಳನ್ನು ನೀಡಿದ್ದರು. ಬಳಿಕ ಕಾರನ್ನು ಪೊಲೀಸ್ ಠಾಣೆಯಿಂದ ಬಿಡಿಸಿಕೊಡಲು ತಸ್ಲಿಂ 50 ಸಾವಿರ ರು. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ದೂರುದಾರರ ವಕೀಲರು ಠಾಣೆಗೆ ಭೇಟಿ ನೀಡಿ ಕಾರನ್ನು ಬಿಟ್ಟುಕೊಡುವಂತೆ ಕೇಳಿಕೊಂಡಾಗ ‘ಫಿರ್ಯಾದಿದಾರರು ಕಾರನ್ನು ಸ್ವೀಕರಿಸಿರುತ್ತಾರೆ’ ಎಂದು ಸಹಿ ಪಡೆದುಕೊಂಡು ಕಾರನ್ನು ಮಾತ್ರ ಠಾಣೆಯಿಂದ ಬಿಟ್ಟುಕೊಟ್ಟಿಲ್ಲ. ಕೊನೆಗೆ ದೂರುದಾರರ ಮೊಬೈಲ್‌ನ್ನು ಬಲವಂತವಾಗಿ ಪಡೆದು ಕಾರು ಬಿಟ್ಟು ಕಳುಹಿಸಿದ್ದಾರೆ.
ಮೊಬೈಲ್ ಕೊಡಲು ಲೈಸನ್ಸ್ ವಶ:ಬಳಿಕ ಮೊಬೈಲ್ ಫೋನ್ ವಾಪಸ್ ಕೊಡಬೇಕಾದರೆ ಮತ್ತೆ 50 ಸಾವಿರ ರು. ಲಂಚದ ಹಣಕ್ಕೆ ಬೇಡಿಕೆ ಇಟ್ಟ ತಸ್ಲಿಂ, ಮೊಬೈಲ್ ಹಿಂತಿರುಗಿಸಬೇಕಾದರೆ ಒರಿಜಿನಲ್ ಲೈಸನ್ಸ್‌ನ್ನು ಠಾಣೆಗೆ ತಂದುಕೊಡುವಂತೆ ಸೂಚಿಸಿದ್ದಾರೆ. ಅದರಂತೆ ದೂರುದಾರರು ಒರಿಜಿನಲ್ ಲೈಸನ್ಸ್ ನೀಡಿ ಮೊಬೈಲ್ ಪಡೆದುಕೊಂಡಿದ್ದರು.ಬಳಿಕವೂ ನಿಲ್ಲದ ಲಂಚದ ಬೇಡಿಕೆ:
ಅದಾದ ಬಳಿಕವೂ ಲಂಚದ ಬೇಡಿಕೆ ಮಾತ್ರ ತಪ್ಪಲೇ ಇಲ್ಲ. ಠಾಣೆಯ ಮತ್ತೊಬ್ಬ ಸಿಬ್ಬಂದಿ ವಿನೋದ್ ಎಂಬವರ ಮುಖಾಂತರ 30 ಸಾವಿರ ರು. ಲಂಚದ ಹಣ ಕೊಟ್ಟು ಲೈಸನ್ಸ್ ಪಡೆದುಕೊಂಡು ಹೋಗಲು ತಸ್ಲೀಂ ಮತ್ತೆ ಒತ್ತಡ ಹಾಕಿದ್ದಾರೆ. ದೂರುದಾರರು ಜುಲೈ 9ರಂದು ಠಾಣೆಗೆ ಹೋಗಿ ತಸ್ಲಿಂ ಅವರನ್ನು ಭೇಟಿ ಮಾಡಿದಾಗ 10 ಸಾವಿರ ರು. ನೀಡುವಂತೆ ತಿಳಿಸಿದ್ದಾರೆ. ತನ್ನಲ್ಲಿ 500 ರು. ಇದೆ ಎಂದಾಗ, 5 ಸಾವಿರ ರು. ಇಲ್ಲದೆ ಠಾಣೆ ಕಡೆಗೆ ಬರಬೇಡ ಎಂದು ಬೈದು ಕಳುಹಿಸಿದ್ದರು. ಕೊನೆಗೆ ಚರ್ಚೆ ನಡೆದು 5 ಸಾವಿರ ರು. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.ಈ ನಡುವೆ ದೂರುದಾರರು ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸ್ ಸಿಬ್ಬಂದಿಗಳಾದ ತಸ್ಲಿಂ ಮತ್ತು ವಿನೋದ್ ವಿರುದ್ಧ ಪ್ರಕರಣ ದಾಖಲು ಮಾಡಲಾಯಿತು.ರೆಡ್ ಹ್ಯಾಂಡ್ ಆಗಿ ಬಲೆಗೆ:
ನಿಗದಿಪಡಿಸಿದಂತೆ ದೂರುದಾರರಿಂದ ಗುರುವಾರ 5 ಸಾವಿರ ರು. ಲಂಚದ ಹಣ ಸ್ವೀಕರಿಸುವಾಗಲೇ ತಸ್ಲಿಂ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ತನಿಖೆ ನಡೆಸಲಾಗುತ್ತಿದೆ.ಮಂಗಳೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕ (ಪ್ರಭಾರ) ಕುಮಾರಚಂದ್ರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪಾಧೀಕ್ಷಕರಾದ ಡಾ.ಗಾನ ಪಿ. ಕುಮಾರ್, ಸುರೇಶ್ ಕುಮಾರ್ ಪಿ., ಪೊಲೀಸ್ ನಿರೀಕ್ಷಕರಾದ ಭಾರತಿ ಜಿ., ಚಂದ್ರಶೇಖರ್ ಕೆ.ಎನ್. ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.