ಕಡೂರು: ಕ್ಷೇತ್ರಕ್ಕೆ 1952ರಿಂದಲೂ ಮಂತ್ರಿಗಿರಿ ಮರೀಚಿಕೆ!

KannadaprabhaNewsNetwork | Published : Jan 21, 2024 1:31 AM

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವೇ ಇದೆ. ಈ ಬಾರಿ ಕಡೂರು ಕ್ಷೇತ್ರಕ್ಕೆ ನ್ಯಾಯ ದೊರಕೀತೇ? ನಿಗಮ ಮಂಡಳಿ ಭಾಗ್ಯವಾದರೂ ದೊರೆಯುವುದೇ? ಎಂಬ ನಿರೀಕ್ಷೆ ಕ್ಷೇತ್ರದ ನಾಗರಿಕರದ್ದಾಗಿದೆ.

ಕನ್ನಡಪ್ರಭ ವಾರ್ತೆ ಕಡೂರು

ರಾಜ್ಯದ 127ನೇ ಕರ್ನಾಟಕ ವಿಧಾನಸಭಾ ಕ್ಷೇತ್ರವಾದ ಕಡೂರು ಕ್ಷೇತ್ರಕ್ಕೆ ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರೂ ಇದುವರೆಗೂ ಅಳ್ವಿಕೆ ಮಾಡಿರುವ ಎಲ್ಲ ಪಕ್ಷಗಳ ಸರ್ಕಾರಗಳಲ್ಲಿ ಕಡೂರು ಸಚಿವಗಿರಿ ವಂಚಿತ ಕ್ಷೇತ್ರವಾಗಿಯೇ ಉಳಿವ ಮೂಲಕ ಕ್ಷೇತ್ರದ ಮತದಾರರಲ್ಲಿ ಬೇಸರ ತಂದಿದೆ.

ಆದರೆ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಈ ಬಾರಿ ಕಡೂರು ಕ್ಷೇತ್ರಕ್ಕೆ ನಿಗಮ ಮಂಡಳಿ ಭಾಗ್ಯವಾದರೂ ದೊರೆಯುವುದೇ ಎಂಬ ನಿರೀಕ್ಷೆ ಕ್ಷೇತ್ರದ ನಾಗರಿಕರದ್ದಾಗಿದೆ. ವಿಪರ್ಯಾಸವೆಂದರೆ ಪ್ರತಿ ಬಾರಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಪಕ್ಷಕ್ಕಿಂತ ಕಡೂರಲ್ಲಿ ಬೇರೆ ಪಕ್ಷದ ಅಭ್ಯರ್ಥಿ ಗೆಲ್ಲುತ್ತಿದ್ದದ್ದೂ ಕೂಡ ಸಚಿವಗಿರಿ ವಂಚಿತವಾಗಲು ಕಾರಣ ಎನ್ನಬಹುದು. 1994ರಲ್ಲಿ ರಾಜ್ಯದಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಜನತಾದಳ ಸರ್ಕಾರದಲ್ಲಿ ಕಡೂರು ಕ್ಷೇತ್ರದಲ್ಲಿ ಜನತಾದಳದಿಂದ ಕೆ.ಎಂ.ಕೃಷ್ಣಮೂರ್ತಿ ಮತ್ತು ಬೀರೂರು ಕ್ಷೇತ್ರದಿಂದ ಎಸ್.ಆರ್.ಲಕ್ಷ್ಮಯ್ಯ ಶಾಸಕರಾದಾಗ ಕೆ.ಎಂ.ಕೃಷ್ಣಮೂರ್ತಿ ಅವರಿಗೆ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮ ಮತ್ತು ಎಸ್. ಆರ್.ಲಕ್ಷ್ಮಯ್ಯನವರಿಗೆ ಕೃಷಿ ಮತ್ತು ಕೈಗಾರಿಕಾ ನಿಗಮದ ಅಧ್ಯಕ್ಷರಾಗಿ ಆಯ್ಕೆ ಆಗಿದ್ದು ಬಿಟ್ಟರೆ, ಜೆಡಿಎಸ್, ಕಾಂಗ್ರೆಸ್ ಪಕ್ಷದಿಂದ ನಾಲ್ಕು ಬಾರಿ ಗೆದ್ದ ಕೃಷ್ಣಮೂರ್ತಿ ಅವರಿಗೆಗೆ ಸಚಿವಗಿರಿ ದಕ್ಕಲೇ ಇಲ್ಲ.

ಎಚ್.ಡಿ.ಕುಮಾರಸ್ವಾಮಿಯವರ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲೂ ಬಹಳಷ್ಟು ನಿರೀಕ್ಷೆ ಇದ್ದ ಕೆ.ಎಂ.ಕೃಷ್ಣಮೂರ್ತಿಗೆ ಗೌಡರ ಪ್ರಭಾವದಿಂದ ಸಚಿವಗಿರಿ ದೊರಕಲಿಲ್ಲ ಎಂಬುದು ಇತಿಹಾಸ. ಆನಂತರದ ದಿನಗಳಲ್ಲಿ ಜನತಾದಳವು ಮತ್ತೆ ಇಬ್ಭಾಗವಾದಾಗ ದೇವೇಗೌಡರು ಮತ್ತು ರಾಮಕೃಷ್ಣ ಹೆಗಡೆಯವರ ಜೊತೆ ಯೂ ಗುರುತಿಸಿಕೊಳ್ಳದ ಕೆ.ಎಂ.ಕೆ.ಯವರ ತಟಸ್ಥ ಧೋರಣೆ ಕೂಡ ಸಚಿವಗಿರಿ ತಪ್ಪಲು ಕಾರಣವಾಯಿತು ಎನ್ನಬಹುದು.

ಆದರೆ, ಅನಂತರದ ಮೂರು ಚುನಾವಣೆಗಳಲ್ಲಿ ಕೂಡ ಗೆದ್ದಿದ್ದ ಕೆ.ಎಂ.ಕೃಷ್ಣಮೂರ್ತಿಗೆ ಸಿಗಬೇಕಾಗಿದ್ದ ಮಂತ್ರಿಗಿರಿ ಕೆ.ಎಂ.ಕೃಷ್ಣಾರೆಡ್ಡಿ ಅವರ ಪಾಲಾಗಿದ್ದರಿಂದ ಮತ್ತೆ ಕೆ.ಎಂ.ಕೆ ಅವಕಾಶ ವಂಚಿತರಾಗಿದ್ದು ವಿಪರ್ಯಾಸವೇ ಸರಿ. ಇನ್ನು 2007ರಲ್ಲಿ ಅದಾಗಲೇ ಜೆಡಿಎಸ್ ತೊರೆದ ಕೆ.ಎಂ.ಕೃಷ್ಣಮೂರ್ತಿ ಕಾಂಗ್ರೆಸ್ ಸೇರ್ಪಡೆ ಆದ ಬೆನ್ನಲ್ಲೇ ವಿಧಾನ ಪರಿಷತ್ ಸದಸ್ಯರಾಗಿ ಜೆಡಿಎಸ್‌ನ ವೈ.ಎಸ್.ವಿ ದತ್ತ ಕಡೂರು ಕ್ಷೇತ್ರಕ್ಕೆ ಎಂಟ್ರಿ ಕೊಟ್ಟರು. ಆನಂತರ ಕಾಂಗ್ರೆಸ್ ನಿಂದ ಕೆ.ಎಂ ಕೃಷ್ಣಮೂರ್ತಿ, ವೈ.ಎಸ್.ವಿ ದತ್ತ ವಿರುದ್ಧ ಗೆಲುವು ಸಾಧಿಸಿದರು. ಆದರೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಕೆ.ಎಂ.ಕೆ ಶಾಸಕರಾಗೇ ಉಳಿದರು. ಸಚಿವಗಿರಿ ಕಡೂರು ಕ್ಷೇತ್ರಕ್ಕೆ ಮರೀಚಿಕೆಯಾಯಿತು. ಆನಂತರ ಅನಾರೋಗ್ಯದ ನಿಮಿತ್ತ 2010ರಲ್ಲಿ ಶಾಸಕ ಕೆ.ಎಂ.ಕೃಷ್ಣ ಮೂರ್ತಿ ನಿಧನರಾಗುವ ಜೊತೆ ಕಡೂರು ಕ್ಷೇತ್ರದ ಸಚಿವಗಿರಿ ಕನಸು ಕಮರಿತು. 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಕಾರಣ ಜೆಡಿಎಸ್‌ನ ವೈಎಸ್‌ವಿ ದತ್ತ ಅತಿ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದರೂ ಕಡೂರು ಕ್ಷೇತ್ರಕ್ಕೆ ಮಂತ್ರಿಗಿರಿ ಕನಸಾಯಿತು.

ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. 2018ರಲ್ಲಿ ಸೋತಿದ್ದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್. ಆನಂದ್ 23ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಈ ಭಾರಿಯ ಕಾಂಗ್ರೆಸ್ ಸರ್ಕಾರದಲ್ಲಿ ಕಡೂರು ಕ್ಷೇತ್ರಕ್ಕೆ ಸಚಿವಗಿರಿ ಸಿಗುವುದು ಕಷ್ಟವಾದರೂ. ನಿಗಮ ಮಂಡಳಿ ಅಧ್ಯಕ್ಷರಾಗಿ ಗುರುತಿಸಿದಲ್ಲಿ ಕಡೂರಿಗೆ ಅಂತೂ ಆದ್ಯತೆ ನೀಡಿದಂತಾಗುತ್ತದೆ ಎಂಬುದು ಕ್ಷೇತ್ರದ ಜನರ ಅಂಬೋಣ.

ನಮ್ಮ ನಾಯಕರಾದ ಮಾನ್ಯ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ಎರಡು, ಮೂರು ಬಾರಿ ಗೆದ್ದವರಿಗೆ ನಿಗಮ ಮಂಡಳಿಗಳ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಪ್ರಕ್ರಿಯೆ ಈಗಾಗಲೇ ಶೇಕಡಾ 80ರಷ್ಟು ಮುಗಿದಿದೆ. ಅದರೆ ತಾವು ಮೊದಲ ಬಾರಿಗೆ ಗೆದ್ದಿದ್ದು, ನಿಗಮದ ಆಕಾಂಕ್ಷಿಯಾಗಿದ್ದರೂ ಕೂಡ ರಾಜ್ಯ ಸರ್ಕಾರ ಮತ್ತು ನಮ್ಮ ಪಕ್ಷದ ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧನಾಗಿದ್ದೇನೆ ಎಂದು ಇದೇ ವೇಳೆ ಕ್ಷೇತ್ರದ ಶಾಸಕ ಕೆ.ಎಸ್. ಆನಂದ್ ಹೇಳಿದರು.

Share this article