ಕಾಗೋಡು ಚಳವಳಿ ರೈತರ ಸ್ವಾಭಿಮಾನದ ಸಂಕೇತ

KannadaprabhaNewsNetwork | Published : Jan 1, 2025 12:00 AM

ಸಾರಾಂಶ

ತಾಳಗುಪ್ಪ: ರೈತ ವರ್ಗದ ಸ್ವಾಭಿಮಾನದ ಸಂಕೇತವಾದ ಐತಿಹಾಸಿಕ ಕಾಗೋಡು ಚಳುವಳಿಯು ಶೋಷಿತ ಗೇಣಿರೈತರಿಗೆ ಭೂಮಿ ಹಕ್ಕು ದೊರೆಯಲು ಕಾರಣವಾಯಿತು ಎಂದು ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ಹೇಳಿದರು.

ತಾಳಗುಪ್ಪ: ರೈತ ವರ್ಗದ ಸ್ವಾಭಿಮಾನದ ಸಂಕೇತವಾದ ಐತಿಹಾಸಿಕ ಕಾಗೋಡು ಚಳುವಳಿಯು ಶೋಷಿತ ಗೇಣಿರೈತರಿಗೆ ಭೂಮಿ ಹಕ್ಕು ದೊರೆಯಲು ಕಾರಣವಾಯಿತು ಎಂದು ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ಹೇಳಿದರು.

ಭಾನುವಾರ ಮಂಡಗಳೆಯಲ್ಲಿ ಗ್ರಾಮ ಸುಧಾರಣಾ ಸಮಿತಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.ಊಳುವವನೇ ಹೊಲದೊಡೆಯನಾಗಬೇಕು ಎಂಬ ಹಂಬಲದಿಂದ ಸಂಘಟಿತರಾದ ಗೇಣಿ ರೈತರು ನಡೆಸಿದ ಹೋರಾಟದಲ್ಲಿ ಮಂಚೂಣಿಯಲ್ಲಿದ್ದು, ಅದಕ್ಕೆ ಶಕ್ತಿ ತುಂಬಿದವರು ಮಂಡಗಳಲೆ ಗ್ರಾಮಸ್ಥರು. 1951ರ ಕಾಗೋಡು ಚಳುವಳಿಯಲ್ಲಿ ಹೆಂಗಸರು ಮಕ್ಕಳಾದಿಯಾಗಿ ಪಾಲ್ಗೊಂಡ ಇಲ್ಲಿಯವರು ಪೊಲೀಸರ ಲಾಠಿ ಏಟು, ಜೈಲು ಅನುಭವಿಸದರೂ ಅಂಜದೆ ತಮ್ಮ ನಿಲುವಿಗೆ ಬದ್ಧರಾರಗಿದ್ದರು. ಚಳುವಳಿಯ ನಂತರದ ದಿನಗಳಲ್ಲಿ ಸೋಷಲಿಸ್ಟ್ ಪಕ್ಷ ನಡೆಸಿದ ಎಲ್ಲಾ ಪ್ರತಿಭಟನೆಯಲ್ಲಿ ಪಾಲ್ಗೊಂಡು ಇಂಕಿಲಾಬ್ ಜಿಂದಾಬಾದ್ ಘೋಷಣೆಗೆ ಜೀವ ತುಂಬಿದರು ಎಂದು ತಿಳಿಸಿದರು.

ಗೇಣಿ ರೈತರ ಹೋರಾಟದ ಕ್ಷಣಗಳನ್ನು ವಿವರಿಸಿದ ಅವರು, 1974ರಲ್ಲಿ ಜಾರಿಗೊಂಡ ಭೂಸುಧಾರಣಾ ಶಾಸನ ಹಾಗೂ ಅದರ ಪ್ರಾಮಾಣಿಕ ಅನುಷ್ಠಾನದ ವಿವರಣೆಯನ್ನು ನೆನಪಿಸಿದರು.

ಕಂದಾಯ ಇಲಾಖೆಯ ಉನ್ನತ ಅಧಿಕಾರಿ ಕೃಷ್ಣಮೂರ್ತಿ ಮಾತನಾಡಿ, ಗೇಣಿರೈತರ ಸ್ವಾಭಿಮಾನಿ ಬದುಕಿನಲ್ಲಿ ಕಾಗೋಡು ತಿಮ್ಮಪ್ಪನವರ ಪಾತ್ರ ಮಹತ್ವವಾಗಿದೆ. ಕಾಗೋಡು ಚಳುವಳಿಯ ಆಶಯವನ್ನು 23 ವರ್ಷಗಳ ಕಾಲ ಜೀವಂತವಾಗಿಟ್ಟು ಗುರಿ ಮುಟ್ಟಿಸಿದ ಅವರು ಹೆಚ್ಚಿನವರು ಗೇಣಿರೈತರೇ ಆಗಿದ್ದ ದೀವರು ಸಮುದಾಯಕ್ಕೆ ಸಾಮಾಜಿಕ, ರಾಜಕೀಯ, ಆರ್ಥಿಕ ಚೈತನ್ಯ ತುಂಬಿದ್ದಾರೆ ಎಂದರು.

ಹೆಬ್ಬಟ್ಟಿನ ಗುರುತಿಗೆ ಸೀಮಿತವಾಗಿದ್ದ ಸಮುದಾಯ ವಿದ್ಯೆ ಪಡೆದಿದೆ. ಆರ್ಥಿಕವಾಗಿ ಬಲಿಷ್ಠವಾಗಿದೆ. ಭೂ ಸುಧಾರಣಾ ಕಾನೂನು ಅನುಷ್ಠಾನದ ನಂತರ ಮಲೆನಾಡು ದೀವರಲ್ಲಿ ಉಂಟಾದ ಪರಿವರ್ತನೆ ಐತಿಹಾಸಿಕವಾಗಿದ್ದು, ಅದಕ್ಕೆ ಕಾರಣರಾದ ತಿಮ್ಮಪ್ಪನವರನ್ನು ಪ್ರತಿಯೊಬ್ಬರೂ ಸದಾ ಸ್ಮರಿಸಬೇಕು. ಹಿರಿಯರು ತಮ್ಮ ಮಕ್ಕಳಿಗೆ ಅವರ ಜೀವನ ಗಾಥೆಯನ್ನು ತಿಳಿಸಿ ತಲೆ ತಲೆಮಾರಿಗೂ ತಿಮ್ಮಪ್ಪನವರ ಸ್ಮರಣೆ ಶಾಶ್ವತವಾಗಬೇಕು ಎಂದರು.

ಗ್ರಾಮ ಸುಧಾರಣಾ ಸಮೀತಿಯ ಅಧ್ಯಕ್ಷ ಎಸ್‌.ಹುಚ್ಚಪ್ಪ ಅಧ್ಯಕ್ಷತೆ ವಹಿಸಿದ್ದರು.

ರಾಚಪ್ಪ ಮಂಡಗಳಲೆ, ಡಾ.ರಾಜನಂದಿನಿ ಕಾಗೋಡು, ಎಂ.ಹುಚ್ಚಪ್ಪ, ಕಾನ್ಲೆ ಗ್ರಾಪಂ ಉಪಾಧ್ಯಕ್ಷ ವಸಂತ ಮತ್ತಿತರರಿದ್ದರು.

ಗ್ರಾಮ ಸಮಿತಿ ಕಾರ್ಯದರ್ಶಿ ಶಿವಾನಂದ ಸ್ವಾಗತಿಸಿ, ತಾಳಗುಪ್ಪ ಹೋಬಳಿ ಕಾಂಗ್ರೆಸ್ ಘಟಕದ ಅಧ್ಯಕ್ಷ ಶಿವಮೂರ್ತಿ ಮಂಡಗಳಲೆ ನಿರೂಪಿಸಿ, ವಂದಿಸಿದರು.

Share this article