ಗೇಣಿ ರೈತರ ಧ್ವನಿಯಾದ ಕಾಗೋಡು ಸತ್ಯಾಗ್ರಹ: ದಿನೇಶ್ ಶಿರವಾಳ

KannadaprabhaNewsNetwork | Published : Apr 19, 2024 1:01 AM

ಸಾರಾಂಶ

೭೩ನೇ ಕಾಗೋಡು ರೈತ ಚಳವಳಿ ದಿನಾಚರಣೆಯನ್ನು ಸಾಗರದ ಎಪಿಎಂಸಿ ಆವರಣದ ರೈತ ಭವನದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಸಾಗರ

ಉಳುವವನೇ ಹೊಲದೊಡೆಯ ಘೋಷವಾಕ್ಯದ ಮೂಲಕ ಕಾಗೋಡು ಸತ್ಯಾಗ್ರಹ ದೇಶದಾದ್ಯಂತ ಮನೆಮಾತಾಗಿತ್ತು. ಮಲೆನಾಡು ಭಾಗದ ಗೇಣಿ ರೈತರ ಧ್ವನಿಯಾಗಿದ್ದು ಕಾಗೋಡು ಸತ್ಯಾಗ್ರಹ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಅಭಿಪ್ರಾಯಪಟ್ಟರು. ಪಟ್ಟಣದ ಎಪಿಎಂಸಿ ಆವರಣದ ರೈತ ಭವನದಲ್ಲಿ ಗುರುವಾಗ ಶಿವಮೊಗ್ಗ ಜಿಲ್ಲಾ ರೈತ ಸಂಘ (ಡಾ. ಎಚ್.ಗಣಪತಿಯಪ್ಪ ಬಣ) ವತಿಯಿಂದ ಆಯೋಜಿಸಲಾಗಿದ್ದ ೭೩ನೇ ಕಾಗೋಡು ರೈತ ಚಳವಳಿ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಗೇಣಿ ಪದ್ಧತಿ ವಿರುದ್ಧ ಸಿಡಿದೆದ್ದ ಡಾ.ಎಚ್.ಗಣಪತಿಯಪ್ಪ ಮಲೆನಾಡು ರೈತ ಸಂಘವನ್ನು ಕಟ್ಟಿಕೊಂಡು ತನ್ಮೂಲಕ ರೈತ ಹೋರಾಟಕ್ಕೆ ಕರೆ ನೀಡಿದ್ದರು. ದೇವರಾಜ ಅರಸು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಭೂ ಸುಧಾರಣಾ ಕಾಯ್ದೆ ಜಾರಿಗೆ ಬರುವ ಮೂಲಕ ಗೇಣಿ ರೈತರು ಭೂಮಿಯ ಹಕ್ಕನ್ನು ಪಡೆಯುವಂತಾಯಿತು ಎಂದು ಹೇಳಿದರು.ರೈತ ಸಂಘದ ಬೆಂಬಲ ಇಲ್ಲ: ಲೋಕಸಭಾ ಚುನಾವಣೆಯಲ್ಲಿ ನಮ್ಮ ರೈತ ಸಂಘ ಯಾವುದೇ ಪಕ್ಷ ಅಥವಾ ವ್ಯಕ್ತಿಗೆ ಬೆಂಬಲ ನೀಡುತ್ತಿಲ್ಲ. ಜೊತೆಗೆ ಯಾರಿಗೂ ಚುನಾವಣೆ ಬಹಿಷ್ಕಾರಕ್ಕೂ ಕರೆ ನೀಡುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮಗೆ ಮತದಾನದ ಅವಕಾಶ ಸಿಕ್ಕಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳೋಣ ಎಂದು ಕರೆ ನೀಡಿದರು.

ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ರಮೇಶ್ ಕೆಳದಿ ಮಾತನಾಡಿ, ಕಾಗೋಡು ಸತ್ಯಾಗ್ರಹ ಯಶಸ್ವಿಯಾಗಲು ಡಾ.ಎಚ್.ಗಣಪತಿಯಪ್ಪ ಅವರ ಪಾತ್ರ ಪ್ರಮುಖ ವಾಗಿದೆ. ಯಾವುದೇ ಸಂಪರ್ಕ, ಸಾರಿಗೆ ವ್ಯವಸ್ಥೆ ಇಲ್ಲದ ಕಾಲಘಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ರೈತರನ್ನು ಸಂಘಟಿಸಿ ಹೋರಾಟಕ್ಕೆ ಸಜ್ಜುಗೊಳಿಸಿದ ಹೆಗ್ಗಳಿಕೆ ಗಣಪತಿಯಪ್ಪ ಅವರದ್ದಾಗಿತ್ತು. ಏಪ್ರಿಲ್ ೧೮ ಗೇಣಿ ರೈತರ ಪಾಲಿಗೆ ಅವಿಸ್ಮರಣೀಯವಾದ ದಿನ ಎಂದರು. ಕಾರ್ಯಕ್ರಮದಲ್ಲಿ ಮಹೇಶ್ ಗೌಡ ಶಿರವಂತೆ ಅವರನ್ನು ಸನ್ಮಾನಿಸಲಾಯಿತು. ಡಾ.ರಾಮಚಂದ್ರಪ್ಪ ಮನೆಘಟ್ಟ, ಹೊಯ್ಸಳ ಗಣಪತಿಯಪ್ಪ, ಕುಮಾರ ಗೌಡ, ಕೃಷ್ಣಮೂರ್ತಿ, ಶಿವು ಮೈಲಾರಿಕೊಪ್ಪ, ಚಂದ್ರು ಪೂಜಾರಿ ಇನ್ನಿತರರು ಹಾಜರಿದ್ದರು.

Share this article