ಪ್ರಾಮಾಣಿಕ ಕಾಯಕದಿಂದ ಕೈಲಾಸ

KannadaprabhaNewsNetwork | Published : Dec 16, 2024 12:49 AM

ಸಾರಾಂಶ

ಆದರ್ಶ, ಮಾನವೀಯ ಮೌಲ್ಯ ನಶಿಸುತ್ತಿರುವ ಇಂದಿನ ದಿನಗಳಲ್ಲಿ ಕೊಟ್ಟೂರೇಶ್ವರ ಶ್ರೀಗಳು ಬಸವ ತತ್ವ ಪುರಾಣದ ಮೂಲಕ ಬಿತ್ತರಿಸಿ ನ್ಯಾಯ ನೀತಿಗಳನ್ನು ಪುನರ್ ಸ್ಥಾಪಿಸುವ ಈ ಕಾರ್ಯ ಶ್ಲಾಘನೀಯವಾಗಿದೆ

ಗದಗ: ದುಡಿಮೆ ಪ್ರಾಮಾಣಿಕವಾಗಿದ್ದರೆ ಮಾತ್ರ ಕಾಯಕವಾಗುತ್ತದೆ. ಪ್ರಾಮಾಣಿಕ ಕಾಯಕದಿಂದಲೇ ಕೈಲಾಸ ಕಾಣಬಹುದು ಎಂದು 12ನೇ ಶತಮಾನದ ಬಸವಣ್ಣನವರು ಕಾಯಕಕ್ಕೆ ಮಹತ್ವ ನೀಡಿ ಸಮಾಜಮುಖಿಗಳಾಗಿದ್ದಾರೆ. ಈ ದಿಸೆಯಲ್ಲಿ ಬಸವಣ್ಣನವರ ತತ್ವಾದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೊಸಳ್ಳಿ ಬೂದೀಶ್ವರ ಸಂಸ್ಥಾನಮಠದ ಶ್ರೀಅಭಿನವ ಬೂದೀಶ್ವರ ಸ್ವಾಮಿಗಳು ಹೇಳಿದರು.

ತಾಲೂಕಿನ ಸಮೀಪದ ಹರ್ಲಾಪೂರ ಕೊಟ್ಟೂರೇಶ್ವರ ಮಠದಲ್ಲಿ ನಮ್ಮೂರ ಲಕ್ಷ ದೀಪೋತ್ಸವದಂಗವಾಗಿ ಹಮ್ಮಿಕೊಂಡಿದ್ದ ಬಸವ ಪುರಾಣ ಮಂಗಲ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿದ್ದ ಬಹುತೇಕ ಶರಣರು ಪ್ರಾಮಾಣಿಕ ಕಾಯಕಕ್ಕೆ ಮಹತ್ವ ನೀಡಿದ್ದರು. ಬಸವಣ್ಣನವರು ತಮ್ಮ ವಚನದಲ್ಲಿ ಕಾಯಕದ ಬಗ್ಗೆ ಹೆಚ್ಚು ವಿಶ್ಲೇಷಿಸಿದ್ದಾರೆ. ದುಡಿಯದೇ ತಿನ್ನುವ ಹಕ್ಕು ಈ ಸಮಾಜದಲ್ಲಿ ಯಾರಿಗೂ ಇಲ್ಲ. ಅನ್ಯಾಯ, ಅಧರ್ಮದಿಂದ ದುಡಿದ ಹಣ ಪಾಪಕ್ಕೆ ಸಮಾನವಾಗುತ್ತದೆ. ಆದ್ದರಿಂದ ಬಸವನೆಂದರೆ ನೀತಿ, ದಾಸೋಹ, ಬದುಕು, ಉಸಿರು, ಧರ್ಮವಾಗಿದ್ದು ಬಸವ ತತ್ವ ಅಳವಡಿಸಿಕೊಳ್ಳಬೇಕೆಂದರು.

ವಿಪ ಸದಸ್ಯ ಎಸ್.ವಿ. ಸಂಕನೂರು ಮಾತನಾಡಿ, ಆದರ್ಶ, ಮಾನವೀಯ ಮೌಲ್ಯ ನಶಿಸುತ್ತಿರುವ ಇಂದಿನ ದಿನಗಳಲ್ಲಿ ಕೊಟ್ಟೂರೇಶ್ವರ ಶ್ರೀಗಳು ಬಸವ ತತ್ವ ಪುರಾಣದ ಮೂಲಕ ಬಿತ್ತರಿಸಿ ನ್ಯಾಯ ನೀತಿಗಳನ್ನು ಪುನರ್ ಸ್ಥಾಪಿಸುವ ಈ ಕಾರ್ಯ ಶ್ಲಾಘನೀಯವಾಗಿದೆ. ಕತ್ತಲೆ ಕಳೆದು ಬೆಳಕು ಚೆಲ್ಲುವ ಈ ಲಕ್ಷ ದೀಪೋತ್ಸವ ಕಾರ್ಯಕ್ರಮದಿಂದ ಆರೋಗ್ಯ, ಆರ್ಥಿಕತೆ, ಸಂಕಷ್ಟಗಳು ದೂರವಾಗುತ್ತಿವೆ ಎಂದರು.

ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಬಸವಣ್ಣನವರ ವಚನಗಳು ವಿದ್ಯಾರ್ಥಿಗಳಿಗೆ ಚಿರಪರಿಚಿತವಾಗಿವೆ. ಆದರೆ ಮೊಬೈಲ್ ಗೀಳಿನಿಂದ ಶೇ. 95 ರಷ್ಟು ಯುವಕರು ಮತ್ತು ವಿದ್ಯಾರ್ಥಿಗಳು ದುಶ್ಚಟದ ದಾಸರಾಗುತ್ತಿರುವುದನ್ನು ತಪ್ಪಿಸಲು ಬಸವಣ್ಣನವರ ತತ್ವಾದರ್ಶಗಳ ಮೂಲಕ ಪಾಲಕರು ಸಂಸ್ಕಾರ ನೀಡಬೇಕು ಎಂದರು.

ಡಾ.ಕೊಟ್ಟೂರೇಶ್ವರ ಶ್ರೀಗಳು ಮಾತನಾಡಿ, ನಮ್ಮೂರ ಲಕ್ಷ ದೀಪೋತ್ಸವ ಕಾರ್ಯಕ್ಕೆ ಸಹಾಯ ಸಹಕಾರ ನೀಡಿದ ಭಕ್ತರ ಕಾರ್ಯ ಶ್ಲಾಘನೀಯವಾಗಿದ್ದು, ಗ್ರಂಥ ಪ್ರಕಟ ಮಾಡಲು ಸಹಾಯಧನ ನೀಡಿದ ಬೆಂಗಳೂರು ಮೀರಾಂಡ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ಎಸ್.ಎನ್.ಕಾತರಕಿ ಸಮಾಜಮುಖಿ ಕಾರ್ಯ ಅಭಿನಂದನಾರ್ಹವಾಗಿದೆ ಎಂದರು.

21 ದಿನ ಬಸವ ಪುರಾಣ ಪ್ರವಚನ ಮಾಡಿದ ಹಾವಲಿಂಗೇಶ್ವರ ಹಿರೇಮಠದ ಶಾಂತವೀರ ಶಿವಾಚಾರ್ಯರು, ಬಸವಣ್ಣನವರು ಜಾತಿ, ಮೂಢನಂಬಿಕೆ, ನಿರ್ಮೂಲನೆಗಾಗಿ ಮಾಡಿದ ಕ್ರಾಂತಿಕಾರಕ ಬದಲಾವಣಿ ಮತ್ತು ಅವರು ಐಕ್ಯವಾದ ಚರಿತ್ರೆಯ ಕುರಿತು ವಿವರಿಸಿ ಪುರಾಣ ಮಂಗಲಗೊಳಿಸಿದರು.

ಈ ವೇಳೆ ಡಾ.ಕೊಟ್ಟೂರೇಶ್ವರ ಶ್ರೀಗಳು ರಚನೆ ಮಾಡಿದ ವಚನಕಾರರ ದೃಷ್ಠಿಯಲ್ಲಿ ಸಮಾನತೆ, ವೈಚಾರಿಕತೆ ಹಾಗೂ ಮಳಖೇಡದ ಶ್ರೀಗಳು ರಚಿಸಿದ ಜಗದ ಜಗದೀಶ್ವರ ಎಂಬ ಗ್ರಂಥಗಳನ್ನು ಡಾ. ಶೇಖರ ಸಜ್ಜನ ಬಿಡುಗಡೆಗೊಳಿಸಿದರು.

ಮಹಾಲಿಂಗಪೂರದ ಚನ್ನವೀರ ಶ್ರೀಗಳು, ಮಳಖೇಡದ ಕೊಟ್ಟೂರೇಶ್ವರ ಶಿವಾಚಾರ್ಯರು, ಜಾಕನಪಲ್ಲಿಯ ಗವಿಶಿದ್ಧಲಿಂಗ ಶ್ರೀಗಳು, ಕೊಟ್ರಯ್ಯಶಾಸ್ತ್ರಿಗಳು ನರಗುಂದಮಠ, ರವಿ ದಂಡಿನ, ವೆಂಕರೆಡ್ಡಿ ಕೊಳ್ಳಿ, ಸಿದ್ದು ಆಲೂರು, ಕೆ.ಎಸ್.ಕೊಡ್ಲಿವಾಡ, ನಿವೃತ್ತ ಶಿಕ್ಷಕ ಅಶೋಕ ಬೂದಿಹಾಳ, ವಿವೇಕಾನಂದ ಗೌಡ ಪಾಟೀಲ ಇದ್ದರು.

ಕೆ.ಬಿ.ಕೊಣ್ಣೂರು ಸ್ವಾಗತಿಸಿದರು. ವೆಂಕಟೇಶ ಜುಂಜಣಿ ನಿರೂಪಿಸಿದರು. ರಾಮಣ್ಣ ಬೆಳದಡಿ ವಂದಿಸಿದರು.

ಡಾ.ಬಿ.ಆರ್.ಅಂಬೇಡ್ಕರ ಬರೆದ ಭಾರತದ ಸಂವಿಧಾನದಲ್ಲಿ ಬಸವಣ್ಣನವರ ತತ್ವಗಳು ಅಡಗಿವೆ, ಹೀಗಾಗಿ ಸುವರ್ಣ ಸೌಧ ಮತ್ತು ದೆಹಲಿಯ ಸಂಸತ್ ಭವನದಲ್ಲಿ ಬಸವಣ್ಣನವರ ಅನುಭವ ಮಂಟಪದ ಚಿತ್ರ ಬಿಡಿಸಲಾಗಿದೆ ಎಂದು ಗದಗ ವೈದ್ಯ ಡಾ.ಶೇಖರ ಸಜ್ಜನರ ತಿಳಿಸಿದ್ದಾರೆ.

ಡಾ.ಕೊಟ್ಟೂರೇಶ್ವರರು ರಚಿಸಿದ ವಚನಕಾರರ ದೃಷ್ಠಿಯಲ್ಲಿ ಸಮಾನತೆ ಮತ್ತು ವೈಚಾರಿಕತೆ ಎಂಬ ಸಂಶೋಧನಾ ಗ್ರಂಥವು ಘನತೆ ಮತ್ತು ಗೌರವದಿಂದ ಕೂಡಿದ್ದು, ಪಿ.ಎಚ್.ಡಿ.ಪದವಿಯ ಪಾವಿತ್ರತೆ ಮತ್ತು ಗೌರವದ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸುವಲ್ಲಿ ಯಶಸ್ವಿಯಾಗಿದೆ ಎಂದು ಗ್ರಂಥ ಮಾರ್ಗದರ್ಶಕ ಡಾ. ಶರಣಬಸವ ವೆಂಕಟಾಪೂರ ತಿಳಿಸಿದ್ದಾರೆ.

Share this article