ಕನ್ನಡಪ್ರಭ ವಾರ್ತೆ ಮಡಿಕೇರಿ
ಮೂರು ನಾಡಿನ ತಕ್ಕ ಮುಖ್ಯಸ್ಥರು ಮೂರು ಕಡೆಯಿಂದ ಪಟ್ಟು ಹಿಡಿದು ಓಡಿ ಬಂದು ಮಂದ್ ಮಧ್ಯ ಭಾಗದಲ್ಲಿರುವ ಆಲದ ಮರಕ್ಕೆ ಕೋಲು ಬಾರಿಸುವ ಮೂಲಕ ಮಂದ್''ಗೆ ಚಾಲನೆ ನೀಡಲಾಯಿತು. ನಂತರ ಮೂರು ನಾಡಿನವರು ಒಟ್ಟಾಗಿ ಸೇರಿ ಪುತ್ತರಿ ಕೋಲು ಹೊಡೆಯುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸನ್ಮಾನ, ಗೌರವ:ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜು ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಸಾಹಿತಿ ಬಾಚಿರಣಿಯಂಡ ಅಪ್ಪಣ್ಣ ಹಾಗೂ ಅಖಿಲ ಕೊಡವ ಸಮಾಜ ಪೊಮ್ಮಕಡ ಪರಿಷತ್ ಅಧ್ಯಕ್ಷೆ ಬಾಚಿರಣಿಯಂಡ ರಾಣು ಅಪ್ಪಣ್ಣ ದಂಪತಿಗಳನ್ನು ಕೈಮುಡಿಕೆ ಮಂದ್ ಪರವಾಗಿ ಸನ್ಮಾನಿಸಿ, ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಬಾಚಿರಣಿಯಂಡ ಅಪ್ಪಣ್ಣ ಅವರು, ಈ ಸಡಗರ ಸಂಭ್ರಮ ಹಬ್ಬದ ವಾತಾವರಣ ನೋಡಿದರೇ ತಮ್ಮ ಬಾಲ್ಯದ ದಿನಗಳು ನೆನಪಾಗುವುದಲ್ಲದೆ ಹಲವಾರು ವರ್ಷಗಳ ಕಾಲ ಮಂದ್ ಮಾನಿಯಲ್ಲಿ ಆಡಿದ ಸಂಭ್ರಮ ನೆನಪಾಗುತ್ತದೆ. ಹಿಂದಿನ ಕಾಲದಲ್ಲಿ ಹಲವಾರು ಮಂದ್ ಇದ್ದರೂ ಬೊಟ್ಟಿಯತ್ ನಾಡಿನ ಕೈ ಮುಡಿಕೆ ಕೋಲ್ ಮಂದ್ ಬಹಳ ಪ್ರಸಿದ್ಧಿಯನ್ನು ಪಡೆದಿತ್ತು. 54 ವರ್ಷಗಳ ಹಿಂದೆ ಈ ಮಂದ್ ಗೆ ಭೇಟಿ ನೀಡಿದ್ದೆ. ಅಲ್ಲದೆ ಕಳೆದ 28 ವರ್ಷಗಳ ಹಿಂದೆ ಈ ಜಾಗಕ್ಕೆ ಭೇಟಿ ನೀಡಿ ಇದರ ಇತಿಹಾಸದ ಬಗ್ಗೆ ಅಧ್ಯಯನ ನಡೆಸಿದ್ದೆವು ಎಂದು ಆ ದಿನಗಳನ್ನು ಮೆಲುಕು ಹಾಕಿದರು. ಕೊಡವ ಸಂಸ್ಕೃತಿ ಆಚಾರ ವಿಚಾರವನ್ನು ಬೆಳೆಸುವಲ್ಲಿ ಈ ಮಂದ್ ಶ್ರಮಿಸುತ್ತಿದೆ. ಕೊಡಗಿನಲ್ಲಿರುವ ಹಲವಾರು ಮಂದ್ ಅಭಿವೃದ್ದಿ ಕಾಣದೇ ಮುಚ್ಚಿಹೋಗಿವೆ. ಆದರೆ ಹಿಂದಿನ ಕಾಲದಂತೆಯೇ ಸಂಭ್ರಮ ಸಡಗರದಿಂದ ಕಾರ್ಯನಿರ್ವಹಿಸುತ್ತಿರುವ ಕೈಮುಡಿಕೆ ಮಂದ್ ಗಮನಿಸಿದರೇ ಕೊಡವರ ಸಂಸ್ಕೃತಿ, ಆಚಾರ ವಿಚಾರ ಉತ್ತುಂಗಕ್ಕೆ ತಲುಪುವುದರಲ್ಲಿ ಸಂಶಯವಿಲ್ಲ ದೃಢವಾಗಿದೆ ಎಂದು ನುಡಿದರು.
ಆಚಾರ ವಿಚಾರ ಬೆಳೆಸುತ್ತಾ ಬಂದಿದೆ: ಮತ್ತೋರ್ವ ಮುಖ್ಯ ಅತಿಥಿ ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ ಮಾತನಾಡಿ, ನಾನು ಹುಟ್ಟಿ ಬೆಳೆದ ನಾಡಿನಲ್ಲಿ ನನಗೆ ದೊರಕಿರುವ ಸನ್ಮಾನ ನಿಜಕ್ಕೂ ಖುಷಿಕೊಟ್ಟಿದೆ. ಕೊಡಗಿನ ಆಚಾರ, ವಿಚಾರ, ಪದ್ಧತಿ, ಪರಂಪರೆ ಉಳಿಸಿ ಬೆಳೆಸಿ ಕಿರಿಯರಿಗೆ ತಿಳುವಳಿಕೆ ನೀಡಿರುವುದು ನಮ್ಮ ಹಿರಿಯರು. ಹಲವಾರು ಮಂದ್ ಮಾನಿಗಳು ಮುಚ್ಚಿ ಹೋಗಿರುವ ಸಂದರ್ಭದಲ್ಲಿಯೂ ಈ ಕೈಮುಡಿಕೆ ಮಂದ್ ಕಂಬದಂತೆ ನಿಂತು ಕೊಡವರ ಆಚಾರ ವಿಚಾರವನ್ನು ಬೆಳೆಸುತ್ತಾ ಬಂದಿದೆ. ಇಷ್ಟು ವರ್ಷದವರೆಗೂ ಆಚಾರ ವಿಚಾರವನ್ನು ಪ್ರೋತ್ಸಾಹಿಸಿ ಬೆಳೆಸಿ ಕೈಮುಡಿಕೆ ಮಂದ್ ಅನ್ನು ಹಾಗೆಯೇ ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಚಾರ. ಈ ನಾಡಿನ ಜನರ ಸೇವೆಯನ್ನು ಮೆಚ್ಚುವಂಥದ್ದು ಹಾಗೆಯೇ ನನಗೂ ಈ ಸಂದರ್ಭದಲ್ಲಿ ನಿಮ್ಮೊಡನೆ ಸಂತೋಷದಿಂದ ಕಳೆಯಲು ಅವಕಾಶ ಮಾಡಿಕೊಟ್ಟಿರುವುದು ಸಂತೋಷ ತಂದಿದೆ ಸೂರ್ಯ ಚಂದ್ರ, ಕಲ್ಲು ಕಾವೇರಿ ಹುಲ್ಲು ಭೂಮಿ ಇರುವವರೆಗೂ ಈ ಕೈಮುಡಿಕೆ ಮಂದ್ ನ ಕೀರ್ತಿ ಜಗತ್ತಿನೆಲ್ಲೆಡೆ ಬೆಳಗುವಂತಾಗಲಿ ಎಂದು ಹಾರೈಸಿದರು.ಅಧ್ಯಕ್ಷತೆ ವಹಿಸಿದ್ದ ಬೊಟ್ಟಿಯತ್ ಮೂಂದ್ ನಾಡ್ ತಕ್ಕ ಮುಖ್ಯಸ್ಥರಾದ ಅಡ್ಡಂಡ ಪ್ರಕಾಶ್ ಕುಶಾಲಪ್ಪ ಮಾತನಾಡಿ, ಹಿಂದಿನ ಕಾಲದಲ್ಲಿ ಮಂದ್ ಹಾಗೂ ಮುಂದ್ ಎಂಬ ಎರಡು ಪ್ರಾಮುಖ್ಯ ಸ್ಥಳಗಳಿದ್ದವು. ಈ ಮಂದ್ ಮೂರು ನಾಡಿಗೆ ಸೇರಿರುವ ಜಾಗವಾಗಿದ್ದರು ಬೊಟ್ಟಿಯತ್ ನಾಡ್ ನಲ್ಲಿದ್ದು ವೀರ ಪಡೆಯಾಳಿ ಜನಿಸಿರುವ ಈ ಮಣ್ಣಿನಲ್ಲಿ ಜನರಲ್ ತಿಮ್ಮಯ್ಯ ಹಾಗೂ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ಕೋಲಾಟ ಆಡಿರುವುದು ಹೆಮ್ಮೆಯ ವಿಚಾರ. ಕೊಡವರ ಆಚಾರ ವಿಚಾರ ಉಡುಗೆ ತೊಡುಗೆಗೆ ಧಕ್ಕೆ ಉಂಟಾದ ಸಂದರ್ಭದಲ್ಲಿ ನಡುಪು ಕಾರ್ಯಕ್ರಮ ಏರ್ಪಡಿಸುವ ಸಂದರ್ಭದಲ್ಲಿ ಮೊದಲಿಗೆ ಇದೇ ಮಂದ್‌ನಲ್ಲಿ ಕೊಡವರು ಹಾಗೂ ಮೂಲ ನಿವಾಸಿಗಳು ಸಭೆ ಸೇರಿ ಸಾವಿರಾರು ಸಂಖ್ಯೆಯಲ್ಲಿ ಕೊಡಗಿನ ಮೂಲ ನಿವಾಸಿಗಳು ನಡುಪು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಂದ್ ಮಾನಿ ಯಲ್ಲಿ ಸೇರುವ ಕೊಡವ ಬಾಂಧವರು ಕೊಡವರ ಸಾಂಪ್ರದಾಯಿಕ ಉಡುಪಿನಲ್ಲಿ ಭಾಗವಹಿಸಬೇಕು. ಇಂದಿನ ಕಾರ್ಯಕ್ರಮದಲ್ಲಿ ಯುವಕರು ಕೊಡವರ ಸಾಂಪ್ರದಾಯಿಕ ಉಡುಪಿನಲ್ಲಿ ಬಾರದೇ ಇರುವುದು ಬೇಸರದ ಸಂಗತಿಯಾಗಿದೆ. ಕೊಡವರ ಉಡುಪು ಕೇವಲ ಮದುವೆ ಸಮಾರಂಭಗಳಿಗೆ ಸೀಮಿತವಲ್ಲ ಮಂದ್ ಎಂಬ ದೇವರ ಸ್ಥಾನಕ್ಕೆ ಕೊಡವರು ತಮ್ಮ ಸಾಂಪ್ರದಾಯಿಕ ಉಡುಪಿನಲ್ಲಿ ಬರದಿದ್ದ ಮೇಲೆ ಬೇರೆ ಯಾವ ಕಾರ್ಯಕ್ಕಾಗಿ ಕೊಡವರ ಉಡುಪು ಇದೆ ಎಂದು ಪ್ರಶ್ನಿಸಿದರಲ್ಲದೆ, ಮಂದ್ ಮಾನಿಗೆ ಬರುವಾಗ ಕೊಡವರ ಸಾಂಪ್ರದಾಯಿಕ ಉಡುಪು ಧರಿಸಿ ಬರಬೇಕೆಂದು ಮನವಿ ಮಾಡಿದರು.ಪೊನ್ನಂಪೇಟೆ ಕೊಡವ ಪೊಮ್ಮಕಡ ಕೂಟ, ಕಾವೇರಿ ಕಾಲೇಜ್ ವಿದ್ಯಾರ್ಥಿಗಳು, ಅಪ್ಪಚ್ಚಕವಿ ವಿದ್ಯಾರ್ಥಿಗಳು, ಕುತ್ತ್ ನಾಡ್ ಪೊಮ್ಮಕ್ಕ, ಲಯನ್ಸ್ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಮೂರು ನಾಡಿನವರಿಂದ ಉಮ್ಮತಾಟ್, ಬೊಳಕಾಟ್, ಕತ್ತಿಯಾಟ್, ಪರೆಯಕಳಿ, ಬಾಳೋ ಪಾಟ್, ಗ್ರೂಪ್ ಡಾನ್ಸ್, ಕೊಡವ ಪಾಟ್ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಕಣ್ಮನ ಸೆಳೆಯಿತು.
ಈ ಸಂದರ್ಭ ಬೇರಳಿನಾಡ್ ತಕ್ಕ ಮಳುವಂಡ ಭುವೇಶ್ ದೇವಯ್ಯ, ಕುತ್ತ್ ನಾಡ್ ತಕ್ಕ ಪಂದಿಮಾಡ ರಮೇಶ್ ಅಚ್ಚಪ್ಪ, ಮೂಂದ್ ನಾಡ್ ಗೌರವ ಕಾರ್ಯದರ್ಶಿ ನಾಳಿಯಮ್ಮಂಡ ಉಮೇಶ್ ಕೇಚಮ್ಮಯ್ಯ, ಬೇರಳಿನಾಡ್ ಕಾರ್ಯದರ್ಶಿ ಅಪ್ಪಂಡೇರಂಡ ಮೋಹನ್, ಬೊಟ್ಟಿಯತ್ ನಾಡ್ ಸಹ ಕಾರ್ಯದರ್ಶಿ ತೀತಮಾಡ ಶಿವಮಣಿ ಕರುಂಬಯ್ಯ, ಕುತ್ತ್ ನಾಡ್ ಸಹ ಕಾರ್ಯದರ್ಶಿ ತೀತಮಾಡ ಗಣೇಶ್ (ಗಾಂಧಿ), ಹಳ್ಳಿಗಟ್ಟ್ ಊರು ತಕ್ಕ ಚಮ್ಮಟೀರ ಪ್ರವೀಣ್ ಉತ್ತಪ್ಪ, ಅಚ್ಚಿಯಂಡ ವೇಣು ಗೋಪಾಲ್, ಅರ್ವತೋಕ್ಲು ಊರು ತಕ್ಕ ಕಾಡ್ಯಮಾಡ ಮೋತಿ ಅಪ್ಪಚ್ಚು, ಕುಂದ ಊರು ತಕ್ಕ ಕೋಡಂದೆರ ಸುಬ್ಬಯ್ಯ, ಈಚೂರು ಊರು ತಕ್ಕ ತೀತಮಾಡ ಉಮೇಶ್, ಮುಗುಟಗೇರಿ ಊರು ತಕ್ಕ ಮನೆಯಪಂಡ ಬೆಳ್ಯಪ್ಪ, ಬೇರಳಿನಾಡಿನ ತಕ್ಕ ಅಪ್ಪಂಡೇರಂಡ ಅಶೋಕ್, ಕೊಂಗಂಡ ಡೆಟ್ರನ್, ಮೂಕಚಂಡ ಚುಮ್ಮಿ ದೇವಯ್ಯ, ಬೋಳಡಿಚಂಡ ಕಿರಣ್ ಸೇರಿದಂತೆ ಇತರ ತಕ್ಕಮುಖ್ಯಸ್ಥರು ಉಪಸ್ಥಿತರಿದ್ದರು.