ಕನ್ನಡಪ್ರಭ ವಾರ್ತೆ ಚಿಂತಾಮಣಿ
ಶ್ರೀಕ್ಷೇತ್ರ ಕೈವಾರದ ಶ್ರೀಯೋಗಿನಾರೇಯಣ ಮಠದಲ್ಲಿ ಕೈವಾರ ತಾತಯ್ಯನವರ ಜಯಂತಿಯ ಪ್ರಯುಕ್ತ ಶ್ರೀಯೋಗಿನಾರೇಯಣ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಆತ್ಮಬೋಧಾಮೃತ ಪ್ರವಚನವನ್ನು ನೀಡಿ ಮಾತನಾಡಿ ಆತ್ಮಬೋಧಾಮೃತದಲ್ಲಿ ತಾತಯ್ಯನವರು ಗುರುವಿನ ಮಹತ್ವವನ್ನು ಸಾರಿ ಸಾರಿ ಹೇಳಿದ್ದಾರೆ ಎಂದರು.
ಆತ್ಮಚಿಂತನೆಯಿಂದ ಜ್ಞಾನ ಸಿದ್ಧಿಜ್ಞಾನ ಸಂಪ್ರಾಪ್ತಿಯಿಂದ ಪರಮಾತ್ಮನಲ್ಲಿ ಸ್ಥಿರವಾಗಿ ನಿಶ್ಚಲತ್ವ ಉಂಟಾದ ನಂತರ ಕರ್ಮಗಳು ನಾಶವಾಗುತ್ತದೆ. ಚಂಚಲವಾದ ಬುದ್ಧಿ ಮತ್ತು ಮನೋವಿಕಾರಗಳು ದಮನವಾಗಬೇಕಾದರೆ ಆತ್ಮದ ಚಿಂತನೆಯನ್ನು ಮಾಡುತ್ತಾ ಜ್ಞಾನವನ್ನುಗಳಿಸಿಕೊಳ್ಳಬೇಕು. ಎಂದಿಗಾದರೆ ಆತ್ಮಚಿಂತನೆ ಉಂಟಾಗುವುದೋ ಆಗ ಮಾತ್ರ ಜ್ಞಾನವು ಸಿದ್ಧಿಸುತ್ತದೆ. ಪರಮಾತ್ಮನ ವಿಚಾರವನ್ನು ಸದಾಕಾಲ ಚಿಂತನೆ ಮಾಡುವುದರಿಂದ ಇಂದ್ರಿಯಗಳನ್ನು ನಿಗ್ರಹಿಸಬಹುದೆಂದರು.
ಸದ್ಗುರು ತಾತಯ್ಯನವರನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಸಭಾಂಗಣಕ್ಕೆ ಕರೆತರಲಾಯಿತು. ತಾತಯ್ಯನವರನ್ನು ಪೀಠದಲ್ಲಿ ಆಸೀನಗೊಳಿಸಿ ವಿಶೇಷ ಪೂಜೆಗಳನ್ನು ಸಲ್ಲಿಸಲಾಯಿತು. ವಿವಿಧ ಭಜನಾ ಮಂಡಳಿಯವರಿಂದ ಸಾಮೂಹಿಕ ನಾಮ ಸಂಕೀರ್ತನೆ, ಆದಿಚುಂಚನಗಿರಿ ಮಠದ ಶ್ರೀ ಸಾಯಿಕೀರ್ತಿನಾಥಸ್ವಾಮಿಯವರಿಂದ ಗಾಯನ , ಶ್ರೀಯೋಗಿನಾರೇಯಣ ಸಂಕೀರ್ತನಾ ಯೋಜನೆಯ ಸಂಚಾಲಕರಾದ ವಿದ್ವಾನ್ ವಾನರಾಶಿ ಬಾಲಕೃಷ್ಣ ಭಾಗವತರ್ ಗಾಯನ, ಪದ್ಮಿನಿ ಎಸ್.ಉಪಾಧ್ಯ ತಂಡದವರಿಂದ ಕೈವಾರ ತಾತಯ್ಯನವರ ಜೀವನ ಚರಿತ್ರೆ ನೃತ್ಯ ರೂಪಕವನ್ನು ಹಮ್ಮಿಕೊಳ್ಳಲಾಗಿತ್ತು.
ಕೈವಾರ ಮಠ ಟ್ರಸ್ಟ್‌ನ ಉಪಾಧ್ಯಕ್ಷ ಜೆ.ವಿಭಾಕರರೆಡ್ಡಿ, ಖಂಜಾಂಚಿ ಆರ್.ಪಿ.ಎಂ.ಸತ್ಯನಾರಾಯಣ, ಸದಸ್ಯರುಗಳಾದ ಕೆ.ನರಸಿಂಹಪ್ಪ, ಗಣೇಶ ಚಂದ್ರಪ್ಪ, ಕೆ.ಎಂ.ತ್ಯಾಗರಾಜ್, ಕೆ.ವಿ.ಸುರೇಶ್, ನಿವೃತ್ತ ಐಎಎಸ್ ಅಧಿಕಾರಿ ಬಿ.ಎನ್.ಕೃಷ್ಣಯ್ಯ, ಹಿರಿಯ ವಕೀಲ ಅಶ್ವಥನಾರಾಯಣ್ ಉಪಸ್ಥಿತರಿದ್ದರು.ಕೈವಾರದಲ್ಲಿ ಇಂದು
ಸೋಮವಾರ ೨೫.೩.೨೦೨೪ ಬೆಳಿಗ್ಗೆ ೮ ಗಂಟೆಗೆ ಶ್ರೀದೇವಿ ಭೂದೇವಿ ಸಮೇತ ಶ್ರೀಯೋಗಿನಾರೇಯಣ ತಾತಯ್ಯನವರಿಗೆ ವಿಶೇಷ ಅಭಿಷೇಕ, ಅಷ್ಟಾವಧಾನ ಸೇವೆ, ಹಮ್ಮಿಕೊಳ್ಳಲಾಗಿದೆ. ನಂತರ ಅಲಂಕೃತ ಪಲ್ಲಕ್ಕಿಯಲ್ಲಿ ತಾತಯ್ಯನವರನ್ನು ಅಮರನಾರೇಯಣಸ್ವಾಮಿ ದೇವಾಲಯಕ್ಕೆ ಸಂಕೀರ್ತನೆಯೊಂದಿಗೆ ಕರೆತರಲಾಗುವುದು. ರಾತ್ರಿ ೯ ಗಂಟೆಗೆ ವಿದುಷಿ ತೆನಾಲಿ ನಾಗಮಣಿ ಭಾಗವತಾರಿಣಿ ರವರಿಂದ ಹರಿಕಥೆ, ವಿದ್ವಾನ್ ಎ.ಎಲ್.ವೆಂಕಟೇಶ್ ತಂಡವರಿಂದ ಬುರ್ರಕಥೆ ಇರುತ್ತದೆ.