ಕಾಜೂರು ಅರಣ್ಯ: ಒಂಟಿ ಸಲಗ ಕರ್ಣ ಅಲಿಯಾಸ್‌ ರೌಡಿ ರಂಗ ಸೆರೆ

KannadaprabhaNewsNetwork |  
Published : Feb 02, 2025, 01:01 AM IST
ಕಳೆದೊಂದು ವರ್ಷದಿಂದ ಗ್ರಾಮಸ್ಥರಿಗೆ ತೊಂದರೆ ಕೊಡುತ್ತಿದ್ದ  ಒಂಟಿ ಸಲಗನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದ ಅರಣ್ಯ ಇಲಾಖಾ ಸಿಬ್ಬಂದಿಗಳು: ಸೆರೆ ಹಿಡಿಯುವ ಸಂದರ್ಭ ಧಾಳಿಗೆ ಮುಂದಾದ ಕಾಡಾನೆ: ದುಬಾರೆ ಸಾಕಾನೆ |ಶಿಬಿರದ ಆರು ಆನೆಗಳ ತಂಡದಿಂದ ಕಾರ್ಯಾಚರಣೆ ಯಶಸ್ವಿ: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು, ವಾಹನ ಸವಾರರು | Kannada Prabha

ಸಾರಾಂಶ

ಒಂದು ವರ್ಷದಿಂದ ರೈತರು, ವಾಹನ ಸವಾರರು ಹಾಗೂ ಗ್ರಾಮಸ್ಥರ ನಿದ್ದೆಗೆಡ್ಡಿಸಿದ್ದ ಒಂಟಿ ಸಲಗ ಕರ್ಣ ಅಲಿಯಾಸ್ ರೌಡಿ ರಂಗ (40)ನನ್ನು ಅರಣ್ಯ ಇಲಾಖೆಯವರು ಹರಸಾಹಸದಿಂದೆ ಸೆರೆ ಹಿಡಿದ ಘಟನೆ ಐಗೂರು ಗ್ರಾ.ಪಂ. ವ್ಯಾಪ್ತಿಯ ಮಾದಾಪುರ ವಲಯದ ಕಾಜೂರು ಅರಣ್ಯದಲ್ಲಿ ಶನಿವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಕಳೆದ ಒಂದು ವರ್ಷದಿಂದ ರೈತರು, ವಾಹನ ಸವಾರರು ಹಾಗೂ ಗ್ರಾಮಸ್ಥರ ನಿದ್ದೆಗೆಡ್ಡಿಸಿದ್ದ ಒಂಟಿ ಸಲಗ ಕರ್ಣ ಅಲಿಯಾಸ್ ರೌಡಿ ರಂಗ (40)ನನ್ನು ಅರಣ್ಯ ಇಲಾಖೆಯವರು ಹರಸಾಹಸದಿಂದೆ ಸೆರೆ ಹಿಡಿದ ಘಟನೆ ಐಗೂರು ಗ್ರಾ.ಪಂ. ವ್ಯಾಪ್ತಿಯ ಮಾದಾಪುರ ವಲಯದ ಕಾಜೂರು ಅರಣ್ಯದಲ್ಲಿ ಶನಿವಾರ ನಡೆದಿದೆ.

ದುಬಾರೆ ಸಾಕಾನೆ ಶಿಬಿರದ ಪ್ರಶಾಂತ್ ನೇತೃತ್ವದ ಆರು ಆನೆಗಳ ತಂಡ, ಡಿಎಫ್‌ಒ ಭಾಸ್ಕರ್ ನೇತೃತ್ವದ ಅರಣ್ಯ ಇಲಾಖೆಯ ತಂಡ, ಪಶುವೈದ್ಯರು ಹಾಗೂ ಅರಣ್ಯ ಇಲಾಖಾ ಸಿಬ್ಬಂದಿ ಜಂಟಿ ಕಾರ್ಯಾಚರಣೆ ಆರಂಭಿಸಿತು. ಶನಿವಾರ ಬೆಳಗ್ಗೆ 8 ಗಂಟೆ ವೇಳೆಗೆ ಕಾಜೂರಿನ ಟಾಟಾ ಕಾಫಿ ತೋಟದಿಂದ ಯಡವನಾಡು ಮೀಸಲು ಅರಣ್ಯ ಪ್ರದೇಶಕ್ಕೆ ತೆರಳುವ ಸ್ಥಳದಲ್ಲಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು. ಪ್ರಾಥಮಿಕ ಚಿಕಿತ್ಸೆ ನಂತರ ಲಾರಿ ಮೂಲಕ ದುಬಾರೆ ಸಾಕಾನೆ ಶಿಬಿರಕ್ಕೆ ಆನೆಯನ್ನು ಸಾಗಿಸಲಾಯಿತು.

ಬೆಳಗ್ಗೆ 7.30ಕ್ಕೆ ಕಾಜೂರಿನ ಗುಳಿಗಪ್ಪ ದೇವಾಲಯದ ಬಳಿಯ ಟಾಟಾ ಕಾಫಿ ತೋಟದಿಂದ ರಸ್ತೆಯ ಮತ್ತೊಂದು ಬದಿಯಲ್ಲಿರುವ ಅರಣ್ಯ ಪ್ರದೇಶಕ್ಕೆ ತೆರಳಲು ಮುಂದಾದ ಒಂಟಿ ಸಲಗವನ್ನು 15 ಅಡಿ ಸನಿಹದಲ್ಲಿ ಬೊಲೆರೊ ವಾಹನದಲ್ಲಿ ಕಾಯುತ್ತಿದ್ದ ತಂಡ ಪತ್ತೆ ಹಚ್ಚಿತು. ಇನ್ನೇನು ಕಾಡಾನೆಗೆ ಪಶುವೈದ್ಯರ ತಂಡ ಸಹಕಾರದಿಂದ ಅರಿವಳಿಕೆ ಮದ್ದನ್ನು ಶೂಟ್ ಮಾಡಲು ಆರಂಭಿಸಲು ಮುಂದಾದಾಗ ಕರ್ಣ ದಾಳಿ ನಡೆಸಲು ಮುಂದಾಯಿತು. ಈ ಸಂದರ್ಭ ಗಾಳಿಯಲ್ಲಿ ಗುಂಡು ಹಾರಿಸಿದಾಗ ಗಾಬರಿಯಾಗಿ ಮತ್ತೊಂದು ದಿಕ್ಕಿಗೆ ತಿರುಗಲು ಯತ್ನಿಸಿದ ವೇಳೆ ಹಿಂಬಂದಿಯ ಕಾಲಿಗೆ ಅರಿವಳಿಕೆ ಇಂಜೆಕ್ಷನ್ ಶೂಟ್ ಮಾಡಲಾಯಿತು.

ಈ ಸಂದರ್ಭ ಮತ್ತೆ ಅರಣ್ಯದೊಳಗೆ ಓಡಿಹೋದ ಕಾಡಾನೆಗೆ ಸುಮಾರು 700-800 ಮೀ ಅಷ್ಟೇ ಹೋಗಲು ಸಾಧ್ಯವಾಯಿತು. ನಂತರ ದುಬಾರೆ ಸಾಕಾನೆ ಶಿಬಿರದ ಪ್ರಶಾಂತ್, ಧನಂಜಯ, ಶ್ರೀರಾಮ, ಸುಗ್ರೀವ, ಹರ್ಷ, ಮಾರ್ತಾಂಡ ಹೆಸರಿನ ಸಾಕಾನೆಗಳ ತಂಡ ಕರ್ಣನನ್ನು ಹಿಡಿಯುವಲ್ಲಿ ಯಶಸ್ವಿಯಾದವು. ನಂತರ ಪಶುವೈದ್ಯರು ಚಿಕಿತ್ಸೆ ನೀಡಿದ ನಂತರ ಮಧ್ಯಾಹ್ನ 12 ಗಂಡೆ ವೇಳೆಗೆ ದುಬಾರೆಗೆ ಸಾಗಿಸಲಾಯಿತು.

ಒಂಟಿ ಸಲಗ ಕರ್ಣನನ್ನು ಸೆರೆಹಿಡಿದ ನಂತರ ಕೆಲವೆ ಸಮಯದಲ್ಲಿ ಆರು ಕಾಡಾನೆಗಳ ತಂಡ (4 ದೊಡ್ಡದು, 2 ಮರಿಗಳು) ಟಾಟಾ ಕಾಫಿ ತೋಟದಿಂದ ಅರಣ್ಯ ಪ್ರದೇಶಕ್ಕೆ ನಿತ್ಯ ತೆರಳುವಂತೆ ಆಗಮಿಸಿವೆ. ಈ ಸಂದರ್ಭ ಅರಣ್ಯ ಇಲಾಖಾ ಸಿಬ್ಬಂದಿ ಪಟಾಕಿ ಸಿಡಿಸಿ ಅರಣ್ಯದೊಳಗೆ ತೆರಳಲು ಅನುವು ಮಾಡಿಕೊಟ್ಟರು.

ಕಾರ್ಯಾಚರಣೆಯಲ್ಲಿ ಎಸಿಎಪ್‌ ಗೋಪಾಲ್‌, ಸೋಮವಾರಪೇಟೆ ಆರ್‌ಎಫ್‌ ಶೈಲೇಂದ್ರ ಕುಮಾರ್‌, ಮಾದಾಪುರ ವಲಯ ಡಿಆರ್‌ಎಫ್‌ಒ ಉಲ್ಲಾಸ್‌ ಮತ್ತಿತರರು ಕಾರ್ಯಾಚರಣೆ ತಂಡದ ನೇತೃತ್ವ ವಹಿಸಿದ್ದರು.

ವಿಷಯ ಅರಿತ ಶಾಸಕ ಡಾ.ಮಂತರ್ ಗೌಡ ಸ್ಥಳಕ್ಕೆ ತೆರಳಿ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಿ ಕಾಡಾನೆ ಯಶಸ್ವಿಯಾಗಿ ಸೆರೆಹಿಡಿಯುವಲ್ಲಿ ತೋರಿದ ಸಾಹಸ ಹಾಗೂ ಶ್ರಮವನ್ನು ಶ್ಲಾಘಿಸಿದರು.

PREV

Recommended Stories

.ಜಮಖಂಡಿಯಲ್ಲಿ ವಿನಾಕನಿಗೆ ಅದ್ಧೂರಿ ವಿದಾಯ
ರೈತರ ಹಿತ ಕಾಪಾಡುವುದು ಮುಖ್ಯ: ಹನಮಂತ ನಿರಾಣಿ