ಕೆರೆಗಳಿಗೆ ನೀರು ಹರಿಸುವಂತೆ ಕಕಜವೇ ಆಗ್ರಹ

KannadaprabhaNewsNetwork | Published : Aug 21, 2024 12:41 AM

ಸಾರಾಂಶ

ಚನ್ನಪಟ್ಟಣ: ಕೆಆರ್‌ಎಸ್‌ನಿಂದ ಶಿಂಷಾ ನದಿಗೆ ನೀರು ಹರಿಸಲು ಅನುಮತಿ ಇದ್ದರೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು, ಇದರಿಂದಾಗಿ ಜಿಲ್ಲೆಯ ಕೆರೆಕಟ್ಟೆಗಳು ನೀರಿಲ್ಲದೆ ಬರಿದಾಗಿದೆ. ಈ ಕೂಡಲೇ ಕೆಆರ್‌ಎಸ್‌ನಿಂದ ಶಿಂಷಾ ನದಿಗೆ ನೀರು ಹರಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಚನ್ನಪಟ್ಟಣ: ಕೆಆರ್‌ಎಸ್‌ನಿಂದ ಶಿಂಷಾ ನದಿಗೆ ನೀರು ಹರಿಸಲು ಅನುಮತಿ ಇದ್ದರೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು, ಇದರಿಂದಾಗಿ ಜಿಲ್ಲೆಯ ಕೆರೆಕಟ್ಟೆಗಳು ನೀರಿಲ್ಲದೆ ಬರಿದಾಗಿದೆ. ಈ ಕೂಡಲೇ ಕೆಆರ್‌ಎಸ್‌ನಿಂದ ಶಿಂಷಾ ನದಿಗೆ ನೀರು ಹರಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ತಾಲೂಕು ಕಚೇರಿ ಆವರಣದಲ್ಲಿ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ ನೇತೃತ್ವದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಕೆಆರ್‌ಎಸ್‌ನಿಂದ ನೀರು ಹರಿಸದಿರಲು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದ್ದು, ಈ ಕೂಡಲೇ ನೀರು ಹರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಕಕಜವೇ ರಾಜ್ಯಾಧ್ಯಕ್ಷ ರಮೇಶ್ ಗೌಡ, ಕೆಆರ್‌ಎಸ್ ಜಲಾಶಯದಲ್ಲಿ ೮೦ ಅಡಿ ನೀರು ಬರುತ್ತಿದ್ದಂತೆ ಮಂಡ್ಯ ಜಿಲ್ಲೆಯ ಕೆರೆಗಳಿಗೆ ಹಾಗೂ ಶಿಂಷಾ ನದಿಯ ಮೂಲಕ ತಾಲೂಕಿನ ಇಗ್ಗಲೂರಿನ ಎಚ್.ಡಿ.ದೇವೇಗೌಡ ಬ್ಯಾರೇಜ್ ಮುಖಾಂತರ ತಾಲೂಕಿನ ಕೆರೆಗಳಿಗೆ ನೀರು ಹರಿಸಬೇಕಿದೆ. ಆದರೆ, ಗುತ್ತಿಗೆದಾರರೊಬ್ಬರು ಮಂಡ್ಯ ಜಿಲ್ಲೆಯಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗೆ ಅನುಕೂಲ ಮಾಡಿಕೊಡಲು ನೀರು ಹರಿಸಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಇಂದು ಕೆರೆಗಳಿಗೆ ನೀರನ್ನು ತುಂಬದೇ ಹೋದಲ್ಲಿ ಮುಂದೆ ಮಳೆ ಬರದಿದ್ದರೆ ಜನರು ಸಾಯುವ ಪರಿಸ್ಥಿತಿ ನಿರ್ಮಾಣ ಆಗುತ್ತದೆ ಎಂಬುದು ಸರ್ಕಾರ ಮನಗಂಡು ಕೂಡಲೇ ಕೆರೆಗಳಿಗೆ ನೀರನ್ನು ಬಿಡಬೇಕು ಎಂದು ಒತ್ತಾಯಿಸಿದರು.

ತಮಿಳುನಾಡು ಸರ್ಕಾರ ತನ್ನ ರಾಜ್ಯದಲ್ಲಿ ಹೊಸ ಜಲಾಶಯಗಳನ್ನು ನಿರ್ಮಾಣ ಮಾಡುತ್ತಾ ನೂರಾರು ಕೆರೆಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಆದರೆ ಕುಡಿಯುವ ನೀರು ಯೋಜನೆಯಡಿ ಸತ್ತೇಗಾಲದಿಂದ ರಾಮನಗರಕ್ಕೆ ೩.೩ ಟಿಎಂಸಿ ನೀರನ್ನು ಕೊಡುವ ಯೋಜನೆ ಒಂದೂವರೆ ವರ್ಷಗಳಿಂದ ಕುಂಠಿತಗೊಂಡಿದೆ. ಈ ಯೋಜನೆ ಪೂರ್ಣವಾದರೆ ಜಿಲ್ಲೆಯ ೫೦೦ಕ್ಕೂ ಹೆಚ್ಚು ಕೆರೆಗಳಿಗೆ ನೀರನ್ನು ತುಂಬಿಕೊಳ್ಳಬಹುದು. ಆದರೆ ನೀರಾವರಿ ಇಲಾಖೆ ಅಧಿಕಾರಿಗಳ ನಮಗೆ ಬರಬೇಕಾದ ನೀರನ್ನೇ ಕೆರೆಗೆ ತುಂಬಿಸಿಕೊಳ್ಳಲು ಇಚ್ಚಾಸಕ್ತಿ ತೋರುತ್ತಿಲ್ಲ ಎಂದು ಆರೋಪಿಸಿದರು.

ನಿವೃತ್ತ ಪ್ರಾಂಶುಪಾಲ ನಿಂಗೇಗೌಡ (ಎನ್‌ಜಿ), ಮಾತನಾಡಿ, ರಾಜಕೀಯ ಕೆಸರೆರೆಚಾಟದಲ್ಲಿ ಮುಳುಗಿರುವ ಆಡಳಿತ ಹಾಗೂ ವಿರೋಧ ಪಕ್ಷದ ಜನಪ್ರತಿನಿಧಿಗಳಿಗೆ ಜನರ ಹಿತಕಾಯುವ ಚಿಂತನೆ ಇಲ್ಲ. ಅಧಿಕಾರಿಗಳು ಸಹ ಯಾವುದೇ ಕೆಲಸಗಳತ್ತ ಗಮನ ನೀಡದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇವರಿಂದಾಗಿ ಇಂದು ತಾಲೂಕಿನ ಕೆರೆಗಳು ಬರಿದಾಗಿವೆ. ಈ ಕೂಡಲೇ ಕೆರೆಗಳಿಗೆ ನೀರು ತುಂಬಿಸಲು ಕ್ರಮ ಕೈಗೊಳ್ಳಬೇಕು. ಇದರ ಜತೆಗೆ ರಾಜ್ಯದ ಸಂಸದರು ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಅನುಮತಿ ಕೊಡಿಸಲು ಶ್ರಮಿಸಬೇಕು ಎಂದು ಒತ್ತಾಯಿಸಿದರು.

ರೈತಮುಖಂಡೆ ಅನುಸೂಯಮ್ಮ ಮಾತನಾಡಿ, ಸರ್ಕಾರ ಹಾಗೂ ಅಧಿಕಾರಿಗಳು ಇರುವುದು ರೈತರಿಂದ. ರೈತರಿಗೆ ಕೃಷಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಅಧಿಕಾರಿಗಳು ಮೊದಲ ಆಧ್ಯತೆ ನೀಡಬೇಕು. ಇಲ್ಲವಾದರಲ್ಲಿ ರೈತರು ಸುಮನೆ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಮದ್ದೂರು ರೈತಮುಖಂಡ ಪ್ರಕಾಶ್ ಮಾತನಾಡಿ, ತಲಕಾವೇರಿಯಲ್ಲಿ ಹುಟ್ಟಿ ಕೆಆರ್‌ಎಸ್‌ನಿಂದ ಹರಿಯುವ ಕಾವೇರಿ ನದಿಯಿಂದ ಲಕ್ಷಾಂತರ ಕ್ಯೂಸೆಕ್ಸ್ ನೀರು ತಮಿಳುನಾಡಿಗೆ ಹರಿದು ಸಮುದ್ರಕ್ಕೂ ಸೇರಿದೆ. ಆದರೆ ಜಲಾಶಯ ಇರುವ ಮಂಡ್ಯ ಜಿಲ್ಲೆಯ ೬೪೦ ಕೆರೆಗಳು ಸೇರಿದಂತೆ ಚನ್ನಪಟ್ಟಣದಲ್ಲಿ ನೂರಾರು ಕೆರೆಗಳು ನೀರಿಲ್ಲದೆ ಒಣಗಿವೆ. ಇಲ್ಲಿನ ರೈತರು ಮಳೆಯನ್ನು ನಂಬಿ ಕೃಷಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೇಕೆದಾಟು ಯೋಜನೆಯ ವಿಚಾರ ಇಟ್ಟುಕೊಂಡು ಪಾದಯಾತ್ರೆ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಯೋಜನೆಯನ್ನು ಮರೆತಿದೆ. ಮೈತ್ರಿ ಪಕ್ಷದಿಂದ ಆಯ್ಕೆಯಾಗಿರುವ ಸಂಸದರು ಸಹ ಯೋಜನೆಗೆ ಅನುಮತಿ ಕೊಡಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿಲ್ಲ. ಇವರಿಗೆ ರೈತರ ಹಿತಕ್ಕಿಂತ ತಮ್ಮ ರಾಜಕೀಯವೇ ಮುಖ್ಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹೋರಾಟಗಾರರಿಂದ ಮನವಿ ಸ್ವೀಕರಿಸಿದ ಉಪತಹಸೀಲ್ದಾರ್ ಲಕ್ಷ್ಮೀದೇವಮ್ಮ ಮಾತನಾಡಿ, ಈ ಬಗ್ಗೆ ಜಿಲ್ಲಾಡಳಿತ ಮತ್ತು ಸರ್ಕಾರದ ಗಮನಕ್ಕೆ ತಂದು ರೈತರ ಪರವಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಕಕಜ ವೇದಿಕೆ ಮಂಡ್ಯ ಜಿಲ್ಲಾಧ್ಯಕ್ಷ ಉಮಾಶಂಕರ್, ರಾಮನಗರ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ, ಡೈರಿ ಕಾರ್ಯದರ್ಶಿ ಪುಟ್ಟರಾಜು, ಬುಕ್ಕಸಾಗರ ಕುಮಾರ್, ಡಿಎಎಸ್ ಸಂಚಾಲಕ ವೆಂಕಟೇಶ(ಸೇಟು). ರಾಜ್ಯ ಉಪಾಧ್ಯಕ್ಷ ರಂಜಿತ್ ಗೌಡ, ರಾಜ್ಯ ಯುವ ಘಟಕದ ಅಧ್ಯಕ್ಷ ಮಣಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ, ಚಾಮರಾಜ ನಗರ ಜಿಲ್ಲಾಧ್ಯಕ್ಷ ಮಲ್ಲು, ತಾಲೂಕು ಉಪಾಧ್ಯಕ್ಷ ಮಹೇಶ್ ಮೆಣಸಿಗನಹಳ್ಳಿ ಇತರರಿದ್ದರು.

ಕೋಟ್................

ಕೆಆರ್‌ಎಸ್‌ನಿಂದ ಶಿಂಷಾ ನದಿಗೆ ನೇರವಾಗಿ ನೀರು ಬರುವ ಕಾಲುವೆಗಳಿಲ್ಲ. ಮಂಡ್ಯ ಜಿಲ್ಲೆಯ ಕೆರೆಗಳು ತುಂಬಿದ ಬಳಿಕ ಶಿಂಷಾ ನದಿಗೆ ನೀರು ಹರಿದು ಅಲ್ಲಿಂದ ಬರುವ ಸೋರಿಕೆ ನೀರಿನಿಂದ ಇಗ್ಗಲೂರು ಜಲಾಶಯಕ್ಕೆ ನೀರು ಬರುತ್ತದೆ. ಕಳೆದ ವರ್ಷ ಮಳೆ ಇಲ್ಲದ ಕಾರಣ ಮಂಡ್ಯ ಜಿಲ್ಲೆಯ ಎಲ್ಲಾ ಕೆರೆಗಳು ನೀರಿಲ್ಲದ ಒಣಗಿದ್ದವು, ಈ ನಿಟ್ಟಿನಲ್ಲಿ ಅಲ್ಲಿನ ಕೆರೆಗಳು ಭರ್ತಿಯಾಗಿ ಕೋಡಿ ಬಿದ್ದು ಮುಂದಿನ ಕೆರೆಗಳ ಮೂಲಕ ಶಿಂಷಾ ನದಿಗೆ ಹರಿಯಲು ತಡವಾಗಿದೆ. ಇಗ್ಗಲೂರು ಜಲಾಶಯಲ್ಲಿ ೫ ಅಡಿ ಡೆಡ್ ಸ್ಟೋರೇಜ್ ನೀರಿತ್ತು. ಇದೀಗ ೧೭.೬ ಅಡಿ ನೀರು ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಗರಕಹಳ್ಳಿ ಪಂಪ್‌ಹೌಸ್‌ನ ಕೆರೆಗಳಿಗೆ ನೀರನ್ನು ತುಂಬಲು ಮೋಟಾರ್‌ಗಳನ್ನು ಆನ್ ಮಾಡಲಾಗಿದೆ. ನೀರಿನ ಲಭ್ಯತೆ ಮೇರೆಗೆ ಕಣ್ವಾ ಪಂಪ್‌ಹೌಸ್ ಮೋಟಾರ್‌ಗಳನ್ನು ಆನ್ ಮಾಡಿ ತಾಲೂಕಿನ ಇತರೆ ಕೆರೆಗಳಿಗೆ ನೀರನ್ನು ತಂಬಿಸಲಾಗುವುದು.

-ಸುರೇಶ್, ಎಇಇ, ಕಾವೇರಿ ನೀರಾವರಿ ನಿಗಮ

ಪೊಟೋ೨೦ಸಿಪಿಟಿ೧:ಚನ್ನಪಟ್ಟಣ ತಾಲೂಕು ಕಚೇರಿ ಆವರಣದಲ್ಲಿ ಕಕಜ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು.

Share this article