ಕನಡ್ಡಪ್ರಭ ವಾರ್ತೆ ಪೊನ್ನಂಪೇಟೆ
ಆಗಸ್ಟ್ 3 ರಂದು ಪೊನ್ನಂಪೇಟೆಯಿಂದ ಬೆಕ್ಕೆಸೊಡ್ಲೂರು ಶ್ರೀ ಶಾರದ ಪ್ರೌಢಶಾಲೆಯವರೆಗೆ ನಡೆಯಲಿರುವ ಕಕ್ಕಡ ಮ್ಯಾರಥಾನ್ ಸ್ಪರ್ಧೆಗೆ ಸಕಲ ರೀತಿಯಲ್ಲಿ ತಯಾರಿ ನಡೆಸಲಾಗುತ್ತಿದೆ ಎಂದು ತತ್ವಂ ಅಸಿ ಚಾರಿಟೇಬಲ್ ನ ಮ್ಯಾನೇಜಿಂಗ್ ಟ್ರಸ್ಟಿ ಉಳುವಂಗಡ ಲೋಹಿತ್ ಭೀಮಯ್ಯ ಮಾಹಿತಿಯನ್ನು ನೀಡಿದರು.ಪೊನ್ನಂಪೇಟೆಯಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು ಕಕ್ಕಡ ಮ್ಯಾರಥಾನ್ ಸ್ಪರ್ಧೆಗೆ ಜಿಲ್ಲೆಯಿಂದ ಮಾತ್ರವಲ್ಲದೆ ಹೊರ ಜಿಲ್ಲೆಯಿಂದಲೂ ಸ್ಪರ್ಧಿಗಳು ಆಗಮಿಸುತ್ತಿದ್ದು, ಗೋವಾ ರಾಜ್ಯದಿಂದಲೂ ಸ್ಪರ್ಧಿಗಳು ಆಗಮಿಸುತ್ತಿದ್ದಾರೆ. ಈಗಾಗಲೇ ನೂರಕ್ಕಿಂತಲೂ ಅಧಿಕ ಸ್ಪರ್ಧಿಗಳು ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ಮಾಹಿತಿಯನ್ನು ನೀಡಿದರು.ಈಗಾಗಲೇ ಈ ಮ್ಯಾರಥಾನ್ ಸ್ಪರ್ಧೆಗೆ ಮಾಸ್ಟರ್ ಅಥ್ಲೆಟಿಕ್ ಅಸೋಸಿಯೇಷನ್ ಕೊಡಗು ಮತ್ತು ಹುದಿಕೇರಿಯ ಅಂಜಿಕೇರಿನಾಡ್ ಸಂಸ್ಥೆಯವರು ಕೈಜೋಡಿಸಿದ್ದು ಇದರ ರೂಪುರೇಷೆಗಳನ್ನು ಕ್ರಮಬದ್ಧವಾಗಿ ಮಾಡಲಾಗುತ್ತಿದೆ.
ಆಗಸ್ಟ್ 3 ರಂದು ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಬೆಳಗ್ಗೆ 6 ಗಂಟೆಗೆ ನೋಂದಾವಣಿ ಪ್ರಾರಂಭವಾಗಲಿದ್ದು 7: 30 ಗಂಟೆಗೆ ಮ್ಯಾರಥಾನ್ ಸ್ಪರ್ಧೆ ಪ್ರಾರಂಭವಾಗಲಿದೆ. ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹಾಗಾರರಾದ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯರಾದ ಮಂಡೆಪಂಡ ಸುಜಾ ಕುಶಾಲಪ್ಪ. ಮೈಸೂರು ಬೃಂದಾವನ ಆಸ್ಪತ್ರೆಯ ನಿರ್ದೇಶಕರಾದ ಡಾ. ಮಾತಂಡ ಆರ್ ಅಯ್ಯಪ್ಪ ಮತ್ತು ಗೌರವ ಅತಿಥಿಗಳಾಗಿ ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ ನ ಮುಖ್ಯ ಸಂಚಾಲಕರಾದ ಚೊಟ್ಟೆಕ್ ಮಾಡ ರಾಜೀವ್ ಬೋಪಯ್ಯ, ಗೋಣಿಕೊಪ್ಪಲು ಸತ್ಯಸಾಯಿ ಸಂಸ್ಥೆಯ ಅಧ್ಯಕ್ಷರಾದ ಚೆಪ್ಪುಡಿರ ಪೃಥ್ವಿ ಪೂಣಚ್ಚ, ಬೆಕ್ಕೆಸೊಡ್ಲೂರು ಶ್ರೀ ಶಾರದಾ ಪ್ರೌಢಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಕುಂಞಿಮಾಡ ಸದಾಶಿವ ಹಾಗೂ ಮ್ಯಾಕ್ ಸಂಸ್ಥೆಯ ಅಧ್ಯಕ್ಷರಾದ ಬಲ್ಯಮೀದೇರಿರ ಪ್ರಕಾಶ್ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.ಮ್ಯಾರಥಾನ್ ಓಟದ ಸ್ಪರ್ಧೆಯನ್ನು ಅಚ್ಚುಕಟ್ಟಾಗಿ ನಡೆಸಲು ಬೇಕಾದ ಎಲ್ಲಾ ರೂಪುರೇಷೆಗಳನ್ನು ಮಾಡಲಾಗಿದೆ. ಸ್ಪರ್ಧಿಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಲು ಬಸ್ಸಿನ ವ್ಯವಸ್ಥೆ, ಆಂಬುಲೆನ್ಸ್ ವ್ಯವಸ್ಥೆ ಹಾಗೂ ದಾರಿ ಉದ್ದಕ್ಕೂ ಸ್ಪರ್ಧಿಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಅಲ್ಲದೆ ಸ್ಪರ್ಧಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದ ಹಾಗೆ ನೋಡಿಕೊಳ್ಳಲು ಮುಂಜಾಗ್ರತ ವಾಹನಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲದೆ ಸ್ಪರ್ಧೆ ಮುಕ್ತಾಯವಾಗುವ ಸ್ಥಳದಲ್ಲಿ ವಿಡಿಯೋ ಚಿತ್ರೀಕರಣ ಮಾಡುವುದರ ಮೂಲಕ ಯಾವುದೇ ಗೊಂದಲಕ್ಕೆ ಅವಕಾಶ ನೀಡದಂತೆ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಅಂಜಿಕೇರಿ ನಾಡ್ ಸಂಸ್ಥೆಯ ಕಾರ್ಯದರ್ಶಿ ಹಾಗೂ ದೈಹಿಕ ಶಿಕ್ಷಕರಾದ ಚೆಕ್ಕೇರ ಆದರ್ಶ್ ತಿಳಿಸಿದರು.
ದೈಹಿಕ ಕ್ಷಮತೆ ಮತ್ತು ಉತ್ತಮ ಆರೋಗ್ಯಕ್ಕೆ ಶಾರೀರಿಕ ವ್ಯಾಯಾಮ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಜನ ಜಾಗೃತಿಗೆ ಈ ಮ್ಯಾರಥಾನ್ ಸ್ಪರ್ಧೆ ಉತ್ತಮ ಸಂದೇಶವನ್ನು ಸಾರಲಿದೆ ಎಂದು ಮ್ಯಾಕ್ ಸಂಸ್ಥೆಯ ಕಾರ್ಯದರ್ಶಿ ಮೂಕಳೇರ ಮೀರಾ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.ಈ ಸಂದರ್ಭ ತತ್ವಂ ಅಸಿ ಚಾರಿಟೇಬಲ್ ಟ್ರಸ್ಟಿಗಳಾದ ಜಮ್ಮಡ ಗಿಲ್. ಕೊಣಿಯಂಡ ಮಂಜು ಮಾದಯ್ಯ, ಮ್ಯಾಕ್ ಸಂಸ್ಥೆಯ ಅಧ್ಯಕ್ಷರಾದ ಬಲ್ಯಮೀದೇರಿರ ಪ್ರಕಾಶ್, ಅಂಜಿಕೇರಿ ಸಂಸ್ಥೆಯ ಅಧ್ಯಕ್ಷರಾದ ಚಂಗುಲಂಡ ಅಯ್ಯಪ್ಪ, ದೈಹಿಕ ಶಿಕ್ಷಕರಾದ ಚೇಂದಿರ ಡ್ಯಾನಿ ಈರಪ್ಪ ಉಪಸ್ಥಿತರಿದ್ದರು.