ಪುನೀತ್‌ ರಾಜ್‌ಕುಮಾರ್‌ ಸೇವೆ ಸಮಾಜಕ್ಕೆ ದಾರಿದೀಪ

KannadaprabhaNewsNetwork | Published : Mar 24, 2025 12:30 AM

ಸಾರಾಂಶ

ರಾಜ್ಯದ ಯಾವುದೇ ಮೂಲೆಗೆ ಹೋದರೂ ಇವತ್ತಿಗೂ ಕೂಡ ಪುನೀತ್‌ ರಾಜ್‌ಕುಮಾರ್‌ ಅವರ ಫ್ಲೆಕ್ಸ್‌, ಕಟೌಟ್‌ಗಳನ್ನು ಕಾಣುತ್ತೇವೆ

---

ಕನ್ನಡಪ್ರಭ ವಾರ್ತೆ ಮೈಸೂರು

ಕಿರಿಯ ವಯಸ್ಸಿನಲ್ಲಿಯೇ ನಮ್ಮನ್ನು ಅಗಲಿದ ಚಲನಚಿತ್ರ ನಟ ಪುನೀತ್‌ ರಾಜ್‌ಕುಮಾರ್‌ ಅವರ ಸೇವೆ ಸಮಾಜಕ್ಕೆ ದಾರಿದೀಪದಂತಿದೆ ಎಂದು ವೈದ್ಯ ಹಾಗೂ ಗಾಯಕ ಡಾ.ನಟಶೇಖರ್‌ ಹೇಳಿದರು.

ಡಾ.ರಾಜ್‌ಕುಮಾರ್‌ ಕಲಾ ಸೇವಾ ಟ್ರಸ್ಟ್‌ ನಗರದ ಜಗನ್ಮೋಹನ ಅರಮನೆಯಲ್ಲಿ ಏರ್ಪಡಿಸಿದ್ದ ಪುನೀತ್‌ ರಾಜಕುಮಾರ್‌-50 ಕಾರ್ಯಕ್ರಮಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಅವರ ಆದರ್ಶವನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಮೈಸೂರು ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ ಮಾತನಾಡಿ, ರಾಜ್ಯದ ಯಾವುದೇ ಮೂಲೆಗೆ ಹೋದರೂ ಇವತ್ತಿಗೂ ಕೂಡ ಪುನೀತ್‌ ರಾಜ್‌ಕುಮಾರ್‌ ಅವರ ಫ್ಲೆಕ್ಸ್‌, ಕಟೌಟ್‌ಗಳನ್ನು ಕಾಣುತ್ತೇವೆ. ಅವರನ್ನು ಕಂಡರೆ ಜನರಿಗೆ ಅಷ್ಟೊಂದು ಪ್ರೀತಿ ಮತ್ತು ಅಭಿಮಾನ. ನಮ್ಮ ಕುಟುಂಬದ ಸದಸ್ಯನೊಬ್ಬನನ್ನು ಕಳೆದುಕೊಂಡಿದ್ದೇವೆ ಎಂಬ ಭಾವನೆ ಎಲ್ಲರಲ್ಲಿಯೂ ಇದೆ ಎಂದರು.

ಪುನೀತ್‌ ನಿಧನರಾದ ಸಂದರ್ಭದಲ್ಲಿ ಸಂಘದ ಕಚೇರಿ ಎದುರು ಬೃಹತ್‌ ಕಟೌಟ್‌ ನಿಲ್ಲಿಸಲಾಗಿತ್ತು. ಎರಡು ಸಾವಿರಕ್ಕೂ ಹೆಚ್ಚು ಮಂದಿಗೆ ಅನ್ನದಾನವನ್ನುಕೂಡ ಏರ್ಪಡಿಸಲಾಗಿತ್ತು ಎಂದು ಸ್ಮರಿಸಿದ ಅವರು, ನಾನು ಡಾ.ರಾಜ್‌ಕುಮಾರ್‌ ಅವರ ಎಲ್ಲಾ ಚಿತ್ರಗಳನ್ನು ನೋಡಿದ್ದೇವೆ. ಅದರಲ್ಲೂ ಬಂಗಾರದ ಮನುಷ್ಯ ಚಿತ್ರವನ್ನು 18 ಬಾರಿ ನೋಡಿದ್ದೇನೆ ಎಂದರು.

ಡಾ.ರಾಜ್‌ಕುಮಾರ್‌ ಅವರ ಚಿತ್ರಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತೆ ಇದ್ದವು. ಅದೇ ರೀತಿ ಪುನೀತ್‌ ಅವರ ಚಿತ್ರಗಳು ಕೂಡ ಸಮಾಜದ ಮೇಲೆ ಪರಿಣಾಮ ಬೀರುವಂತೆ ಇದ್ದವು ಎಂದರು.

ಡಾ.ಕಾರ್ತಿಕ್‌ ಉಡುಪ ಮಾತನಾಡಿ, ಒಳ್ಳೆಯರನ್ನು ಕಂಡರೆ ಎಲ್ಲರಿಗೂ ಪ್ರೀತಿ. ಅದಕ್ಕಾಗಿಯೇ ಪುನೀತ್‌ ಅವರನ್ನು ನಾವು ಬೇಗ ಕಳೆದುಕೊಂಡೆವು ಎಂದರು.

ರೈಲ್ವೆ ನಿವೃತ್ತ ಅಧಿಕಾರಿ ಎಂ. ಓಂಪ್ರಕಾಶ್‌ ಮಾತನಾಡಿ, ಪುನೀತ್‌ ಅವರ ಆದರ್ಶವನ್ನು ಎಲ್ಲರೂ ಪಾಲಿಸುವ ಮೂಲಕ ಗೌರವ ಸಲ್ಲಿಸೋಣ ಎಂದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌, ಸಿ. ಶಿವರಾಜ್‌ ಮುಖ್ಯಅತಿಥಿಯಾಗಿದ್ದರು. ಟ್ರಸ್ಟಿನ ಸಂಸ್ಥಾಪಕ ಜಯರಾಮರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಧೀಂದ್ರ ಕಾರ್ಯಕ್ರಮ ನಿರೂಪಿಸಿದರು.

ಗಮನ ಸೆಳೆದ ಗಾಯನ, ನೃತ್ಯ

ಜಯರಾಮರಾಜು, ಪ್ರಸಾದ್‌, ಚಂದ್ರಶೇಖರ್, ಆಕಾಶ್, ಶ್ರುತಿ, ಜಗದೀಶ್, ಅಶ್ವಿನಿ, ಕುಮಾರ್, ಅನಿತಾ, ಪ್ರಸಾದ್‌, ರೇವಣಸಿದ್ದ, ಭವ್ಯಾ, ತಾಹಿರ್‌, ಯೋಗಿ ಅವರು ಪುನೀತ್‌, ಡಾ.ರಾಜಕುಮಾರ್‌, ಡಾ.ಶಿವರಾಜ್‌ ಕುಮಾರ್‌ ಅಭಿನಯದ ಚಿತ್ರಗಳನ್ನು ಹಾಡಿದರೆ, ಜಾಕಿ ಜಾಕಿ, ನಾನೇ ರಾಜಕುಮಾರ, ಹುಡುಗರು, ಬಿಂದಾಸ್‌ ಚಿತ್ರಗಳ ಹಾಡಿಗೆ ನೃತ್ಯ ಪ್ರದರ್ಶನವೂ ಇತ್ತು. ಬೆಂಗಳೂರಿನಿಂದ ಬಂದಿದ್ದ ನೂರಾರು ಅಭಿಮಾನಿಗಳು ಕೂಡ ಪಾಲ್ಗೊಂಡು, ಜಯರಾಮರಾಜು ಅವರನ್ನು ಅಭಿನಂದಿಸಿದರು.

ಇದರೊಂದಿಗೆ ಕಳೆದ ಎರಡು ದಿನಗಳಿಂದ ಜಗನ್ಮೋಹನ ಅರಮನೆಯಲ್ಲಿ ನಡೆಯುತ್ತಿದ್ದ ಅಪ್ಪು ವೈಭವಕ್ಕೆ ತೆರೆ ಬಿದ್ದಿತು.

---ಅಪ್ಪು ವೈಭವ- ಮೆರವಣಿಗೆ

ಫೋಟೋ 23 ಎಂವೈಎಸ್‌ 4, 5

--

ಅಪ್ಪು ವೈಭವ ಅಂಗವಾಗಿ ನಗರದ ಗನ್‌ ಹೌಸ್‌ ಬಳಿಯಿಂದ ಜಗನ್ಮೋಹನ ಅರಮನೆವರೆಗೆ ಆಟೋರಿಕ್ಷಾಗಳಲ್ಲಿ ಪುನೀತ್‌ ರಾಜಕುಮಾರ್‌ ಅಭಿನಯದ ಚಿತ್ರಗಳ ಕಟೌಟ್‌ಗಳ ಮೆರವಣಿಗೆ ನಡೆಯಿತು. ಚಾಮರಾಜ ಜೋಡಿ ರಸ್ತೆ, ರಾಮಸ್ವಾಮಿ ವೃತ್ತ, ಜೆಎಲ್‌ಬಿ ರಸ್ತೆ, ಮೂಡಾ ವೃತ್ತ, ಸೀತಾವಿಲಾಸ ರಸ್ತೆ, ರಮಾವಿಲಾಸ ರಸ್ತೆಯ ಮೂಲಕ ಮೆರವಣಿಗೆ ಸಾಗಿತು. ಕಲಾ ತಂಡಗಳು, ಸ್ತಬ್ಧ ಚಿತ್ರ, ಅಪ್ಪು ಭಾವಚಿತ್ರವುಳ್ಳ ಅಲಂಕೃತ ಪಲ್ಲಕ್ಕಿ ಸಾಗಿದವು. ಜಯರಾಮರಾಜು, ಸೋಮಶೇಖರ್‌, ಸಿ. ಶಿವರಾಜ್‌, ಕೆ. ರವಿ, ವೆಂಕಟೇಶ್, ಆಟೋ ಶಿವು, ಸುರೇಶ್‌ ಮೊದಲಾದವರು ಇದ್ದರು.

Share this article