ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ ಕಲಬುರಗಿತೊಗರಿ ಕಣಜ ಎಂದೇ ಖ್ಯಾತಿ ಹೊಂದಿರುವ ಕಲಬುರಗಿ ಮಹಾನಗರ ದಶ ದಿಕ್ಕುಗಳಲ್ಲಿ ಬೆಳೆಯುತ್ತಿದ್ದರೂ ಇಲ್ಲೊಂದು ಸುಸಜ್ಜಿತ, ಸುರಕ್ಷಿತ, ಪ್ರಯಾಣಿಕರ ಸ್ನೇಹಿ , ಸೌಲಭ್ಯಪೂರ್ಣ ನಗರ ಬಸ್ ನಿಲ್ದಾಣವಿಲ್ಲವಲ್ಲ ಎಂಬ ಕಲಬುರಗಿ ಜನರ, ಕಲ್ಯಾಣ ನಾಡಿನವರ ಬಹು ದಶಕಗಳ ಕೊರಗು ಇನ್ಮುಂದೆ ಇನ್ನಿಲ್ಲದಂತಾಗಲಿದೆ.
ಏಕೆಂದರೆ ವಿಳಂಬವಾದರೂ ಪರವಾಗಿಲ್ಲ, ಸುಂದರ, ಸುಸಜ್ಜಿತ, ಪ್ರಯಾಣಿಕರ ಸ್ನೇಹಿ, ಮನಮೋಹಕ, ಕಲ್ಯಾಣ ನಾಡಿನ ಸಕಲ ಗತ ವೈಭವ ಸರುವಂತಹ ಸಿಟಿ ಬಸ್ ನಿಲ್ದಾಣದ ಕಟ್ಟಡ ನಗರದ ಹೃದಯ ಭಾಗದಲ್ಲಿರುವ ಸೂಪರ್ ಮಾರ್ಕೆಟ್‌ನ ಅಂಚಲ್ಲಿ ನಿರ್ಮಾಣಗೊಂಡಿದ್ದು ಜ.25ರಂದು ಲೋಕಾರ್ಪಣೆಗೊಳ್ಳುತ್ತಿದೆ.ಪ್ರಯಾಣಿಕರಿಗೆ ಅಗತ್ಯವಿರುವ ಆಸನ, ನೀರು, ಶೌಚಾಲಯ ಇತ್ಯಾದಿ ಸವಲತ್ತುಗಳ ಜೊತೆಗೇ ಕಲ್ಯಾಣ ನಾಡನ್ನೇ ತನ್ನೊಡಲಲ್ಲಿ ತುಂಬಿಕೊಂಡಿರುವಂತಿದೆ ಈ ನಿಲ್ದಾಣ. ಏಕೆಂದರೆ ಈ ನಿಲ್ದಾಣದ ಪ್ರತಿ ಇಟ್ಟಿಗೆಯೂ ಕಲ್ಯಾಣದ ಕಲೆ, ಸಂಸ್ಕೃತಿ, ಇತಿಹಾಸವನ್ನೆಲ್ಲ ಹೊತ್ತುಕೊಂಡು ಗಮನ ಸೆಳೆಯುತ್ತಿದೆ, ನನ್ನ ನೋಡಬನ್ನಿ, ನಿಮ್ಮೂರು ತಿಳಿ ಬನ್ನಿರೆಂದು ಎಲ್ಲರನ್ನು ಕೈಬೀಸಿ ಕರೆಯುತ್ತಿದೆ.
ಕಲ್ಯಾಣ ನೆಲದ ಪ್ರೇಕ್ಷಣೀಯ ಸ್ಥಳಗಳು, ಜಲಪಾತಗಳು, ಸುಂದರ ನಿಸರ್ಗ ತಾಣಗಳು, ರಮಣೀಯ ಸ್ಥಳಗಳು, ಜ್ಞಾನಪೀಠ ಪುರಸ್ಕೃತ ಕನ್ನಡಿಗರು, ಕಲ್ಯಾಣ ನಾಡು ಕಂಡ ಅನೇಕ ದಿಗ್ಗಜ ಸಾಹಿತಿಗಳು ಹೀಗೆ ಹಲವು ಹತ್ತು ಹಂತಗಳಲ್ಲಿ ಕಲ್ಯಣದ ಪರಿಚಯವನ್ನೆಲ್ಲ ಜನರಿಗೆ ಸಾರಲು ಮುುಂದಾಗಿದೆ.ನಗರ ಸಾರಿಗೆ ಬೆಳವಣಿಗೆಗೆ ಅಧಿಕಾರಿಗಳ ಇಚ್ಛಾಶಕ್ತಿ ಅವಶ್ಯ: ಕಲಬರಗಿ ಮಹಾ ನಗರ 55 ವಾರ್ಡ್‌ಗಳಲ್ಲಿ ಹರಡಿದ್ದರೂ ಇಲ್ಲಿ ನಗರ ಸಾರಿಗೆ ಇನ್ನೂ ಜನಮನದಲ್ಲಿ ಹಾಸುಹೊಕ್ಕಾಗಿಲ್ಲ, ಸೇವೆಯಲ್ಲಿನ ಕೊರತೆಗಳು, ಸರಿಯಾದಂತಹ ಸಮಯವಿಲ್ಲದೆ ಓಡುವ ಬಸ್‌ಗಳು, ಹಲವು ರಸ್ತೆಗಳಿಗೆ ಇನ್ನೂ ಇಳಿಯದ ನಗರ ಸಾರಿಗೆಯ ಸೇವೆ ಇವೆಲ್ಲದರಿಂದಾಗಿ ನಗರ ಸಾರಿಗೆ ಬಳಸುವ ಕಲ್ಚರ್ ನಗರದವರಿಗನ್ನೂ ಅಪರಿಚಿತ ಎನ್ನಲೇಬೇಕು. ಆದರೆ ದಶಕದ ಹಿಂದೊಮ್ಮೆ ಇಲ್ಲಿ ಆಗಿನ ಕೆಕೆಆರ್‌ಟಿಸಿ ಎಂಡಿ ಆಗಿದ್ದ ಜಿಎನ್ ಶಿವಮೂರ್ತಿ ಅವರು ನೃಪತುಂಗ ಹೆಸರಲ್ಲಿ ಶುರು ಮಾಡಿದ ನಗರ ಸಾರಿಗೆ ನಗರದಲ್ಲಿ ಕ್ರಾಂತಿಯನ್ನೇ ಮಾಡಿತ್ತು. ಆದರೆ ಆ ಅಧಿಕಾರಿ ಇಲ್ಲಿಂದ ವರ್ಗವಾದ ನಂತರ ಈ ನೃಪತುಂಗ ನಗರ ಸಾರಿಗೆ ಸೇವೆಯೂ ಬರಗೆಟ್ಟುಹೋಯ್ತು. ಅನೇಕ ಬಸ್‌ಗಳು ಇಲ್ಲಿಂದ ಸಬರ್ಬನ್ ಸೇವೆಗೆ ಪಲ್ಲಟವಾದವು. ಅಧಿಕಾರಿಗಳ ಸೂಕ್ತ ನಿರ್ವಹಣೆ ಕೊರತೆಯಿಂದಾಗಿ ನಗರ ಸೇವೆ ಇಲ್ಲಿನ್ನೂ ಸೊರಗಿಕೊಂಡೇ ಇದೆ. ಇದೀಗ ಸುಸಜ್ಜಿತ ಬಸ್ ನಿಲ್ದಾಣ ಈ ನಗರ ಸೇವೆಗೆ ಹೆಚ್ಚಿನ ಪ್ರಯಣಿಕರನ್ನು ಆಕರ್ಷಿಸುವ ಮೂಲಕ ಸಿಟಿ ಬಸ್ ಜಾಲಕ್ಕೆ ಟಾನಿಕ್ ಆಗುವುದೆ ಕಾದು ನೋಡಬೇಕಷ್ಟೆ.
ಕಲಬುರಗಿ ಸಿಟಿ ಬಸ್ ಜಾಲದ ಸದ್ಯದ ನೋಟ: ನಗರದಲ್ಲಿವೆ 46 ನಗರ ಸಾರಿಗೆ ಬಸ್, ನಿತ್ಯ 227 ಕಾರ್ಯಾಚರಣೆ, ಉಪ ನಗರ (ಸಬ್ ಅರ್ಬನ್ ) ಸಾರಿಗೆಗೆ 36 ಬಸ್, ನಿತ್ಯ 189 ಕಾರ್ಯಾಚರಣೆ. ಜೇವರ್ಗಿ- 14, ಅಫಜಲ್ಪುರ- 10, ಕಳಗಿ- 5, ಆಳಂದ- 10, ಶಹಾಬಾದ್- 5, ಸೇಡಂ- 13 ಮಾರ್ಗದ ಗ್ರಾಮಗಳಿಗೆ ಸಾರಿಗೆ ಸೇವೆ ಸದ್ಯ ಒದಗಿಸಲಾಗಿದೆ. ಹೊಸ ಬಸ್ ನಿಲ್ದಾಣ ಕಾರ್ಯಾರಂಭದ ನಂತರ ನಗರ ಸಾರಿಗೆಯ ಕಾರ್ಯಾಚರಣೆ ಇನ್ನಷ್ಟು ಹಗ್ಗಿಸುವ ಸವಾಲು ಕೆಕೆಆರ್‌ಟಿಸಿ ಅಧಿಕಾರಿಗಳ ಮುಂದಿದೆ. ಹೊಸ ಬಸ್ ನಿಲ್ದಣ ಸಿಟಿ ಬಸ್ ಜಾಲದಲ್ಲಿ ಹೊಸ ಸೇವೆಗಳನ್ನು ನಗರದ ಪ್ರಯಣಿಕರಿಗೆ ಪರಚಿಸುವುದೆ ಎಂಬುದನ್ನು ಕಾದು ನೋಡಬೇಕಾಗಿದೆ.