ಕಲಬುರಗಿ ಕುವರಿ ಆರ್‌ಸಿಬಿ ಗೆಲುವಿನ ರೂವಾರಿ

KannadaprabhaNewsNetwork | Published : Mar 21, 2024 1:02 AM

ಸಾರಾಂಶ

ಡಬ್ಲೂಪಿಎಲ್‌ನಲ್ಲಿ ಮೊದಲ ಬಾರಿಗೆ ಫೈನಲ್‌ಗೇರಿದ್ದ ಆರ್‌ಸಿಬಿ ತಂಡದಲ್ಲಿದ್ದು ನಿರ್ಣಾಯಕ ಘಟ್ಟದಲ್ಲಿ ಅತ್ಯುತ್ತಮ ಬೌಲಿಂಗ್‌ ಮಾಡಿ ಕೈಚಳಕ ಪ್ರದರ್ಶಿಸಿರುವ ಶ್ರೇಯಾಂಕ್‌ ಪಾಟೀಲ್‌ ಕಲಬುರಗಿ ಕುವರಿ ಎಂಬುದು ಗೊತ್ತಾಗುತ್ತಿದ್ದಂತೆಯೇ ಇಡೀ ಜಿಲ್ಲೆಯೇ ಹೆಮ್ಮೆಯಿಂದ ಬೀಗುತ್ತಿದೆ.

ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿ

ಡಬ್ಲೂಪಿಎಲ್‌ನಲ್ಲಿ ಮೊದಲ ಬಾರಿಗೆ ಫೈನಲ್‌ಗೇರಿದ್ದ ಆರ್‌ಸಿಬಿ ತಂಡದಲ್ಲಿದ್ದು ನಿರ್ಣಾಯಕ ಘಟ್ಟದಲ್ಲಿ ಅತ್ಯುತ್ತಮ ಬೌಲಿಂಗ್‌ ಮಾಡಿ ಕೈಚಳಕ ಪ್ರದರ್ಶಿಸಿರುವ ಶ್ರೇಯಾಂಕ್‌ ಪಾಟೀಲ್‌ ಕಲಬುರಗಿ ಕುವರಿ ಎಂಬುದು ಗೊತ್ತಾಗುತ್ತಿದ್ದಂತೆಯೇ ಇಡೀ ಜಿಲ್ಲೆಯೇ ಹೆಮ್ಮೆಯಿಂದ ಬೀಗುತ್ತಿದೆ.

ಸೆಮಿ ಫೈನಲ್‌ನಲ್ಲಿ ನಿರ್ಣಾಯಕ ಘಟ್ಟದಲ್ಲಿ ಮಹತ್ವದ 2 ವಿಕೆಟ್‌ ಕಿತ್ತುಕೊಂಡು ಗೆಲುವಿನ ರೂವಾರಿಯಾಗಿದ್ದ ಶ್ರೇಯಾಂಕ್‌ ಪಾಟೀಲ್‌, ಫೈನಲ್ ಪಂದ್ಯದಲ್ಲೂ 3.3 ಓವರ್‌ನಲ್ಲಿ ಕೇವಲ 12 ರನ್‌ ನೀಡಿ 4 ವಿಕೆಟ್‌ ಪತನ ಮಾಡಿದಾಗಲೇ ಆರ್‌ಸಿಬಿಗೆ ಗೆಲುವಿನ ದಾರಿ ಸುಗಮವಾಯ್ತು.

ಅಂತಹ ಚಮತ್ಕಾರ ಮೆರೆದವಳು ಜಿಲ್ಲೆ ಮಗಳು ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಕಲಬರಗಿ ಜಿಲ್ಲಾದ್ಯಂತ ಜನ ಖುಷಿಯಿಂದ ಸಂಭ್ರಮಿಸುತ್ತಿದ್ದಾರೆ. ಜಿಲ್ಲೆಯ ಜೇವರ್ಗಿ ತಾಲೂಕಿನ ಕೋಳಕೂರು ಗ್ರಾಮ ಶ್ರೇಯಾಂಕ್‌ ಪಾಟೀಲ್‌ ಪರಿವಾರದ ಮೂಲ. ಇಲ್ಲಿನ ಹಿರಿಯ ಮುಖಂಡರು, ವಕೀಲರು ಆಗಿರುವ ಅಮೃತಪ್ಪಗೌಡ ಪಾಟೀಲರ ಮೊಮ್ಮಗಳು ಶ್ರೇಯಾಂಕ್‌. ಇವರ ತಂದೆ ರಾಜೇಶ ಪಾಟೀಲ್‌ ತುಂಬ ವರ್ಷಗಳಿಂದ ಕೋಳಕೂರಿಂದ ಬೆಂಗಳೂರಿಗೆ ವಲಸೆ ಬಂದವರು. ಸದ್ಯ ಬೆಂಗಳೂರಲ್ಲೇ ವಾಸವಾಗಿದ್ದಾರೆ.

ರಾಜೇಶ ಪಾಟೀಲ್‌ ಕ್ರಿಕೆಟ್‌ ಆಟಗಾರರಾಗಿದ್ದು ರಣಜಿ ಆಡೋ ಹಂಬಲದಿಂದ ಬೆಂಗಳೂರಿಗೆ ಬಂದಿದ್ದರಾದರೂ ಅವರ ಕನಸು ಕೈಗೂಡದೆ ಹೋದಾಗ ಅಲ್ಲೇ ಆಟೋಟಗಳ ಪರಿಕರಗಳ ಮಳಿಗೆ ಇಟ್ಟುಕೊಂಡು ಕ್ರಿಕೆಟ್‌ ತರಬೇತಿ ನೀಡುತ್ತ ಇದ್ದರು. ಇದೀಗ ಇವರ ಪುತ್ರಿ ಶ್ರೇಯಾಂಕ್‌ ತಂದೆಯಿಂದಲೇ ತರಬೇತಿ ಪಡೆದು ಆರ್‌ಸಿಬಿ ತಂಡದಲ್ಲಿ ಆಯ್ಕೆಯಾಗಿ ಇಡೀ ತಂಡದ ಗೆಲುವಿಗೆ ಕಾರಣಳಾಗಿರೋದು ಪಾಟೀಲ್‌ ಪರಿವಾರ ಬೀಗುವಂತೆ ಮಾಡಿದೆ.

ಮಗಳು ಶ್ರೇಯಾಂಕ್‌ ಬೆಂಗಳೂರಲ್ಲೇ ಹುಟ್ಟಿ ಬೆಳೆದವಳಾದರೂ ಕೋಳಕೂರಿಗೆ ಬಂದು ಹೋಗುತ್ತಾಳೆ. ಪರಿವಾರದ ಜೊತೆಗೆ ಕೋಳಕೂರಿಗೆ ಈಚೆಗಷ್ಟೇ ಬಂದು ಹೋಗಿದ್ದಾಳೆ. ನಾವು ಹಲ್ಳಿ ಸಂಸ್ಕತಿ ಇಂದಿಗೂ ಅಳವಡಿಸಿಕೊಂಡೇ ರಾಜಧಾನಿಯಲ್ಲಿ ಬದುಕು ಕಟ್ಟುತ್ತಿದ್ದೇವೆ ಎನ್ನುವ ರಾಜೇಶ ಪಾಟೀಲ್‌ ಮಗಳ ಆಟ ಖುಷಿ ಕೊಟ್ಟಿದೆ ಎಂದರು.

2023ರಲ್ಲಿ ಆರ್‌ಸಿಬಿ ಪರ ಆಯ್ಕೆಯಾಗಿದ್ದ ಶ್ರೇಯಾಂಕ್‌ ಪಾಟೀಲ್‌ ನಂತರ ಏಷ್ಯನ್ ಕಪ್‌, ವೇಸ್ಟ್‌ ಇಂಡಿಸ್‌ ಕೆರೆಬಿಯನ್‌ ಪ್ರಿಮಿಯರ್‌ ಲೀಗ್‌ನಲ್ಲಿ ಆಟವಾಡಿ ಉತ್ತಮ ಪ್ರದರ್ಶನ ತೋರಿದ್ದಳು. ಇಂಡಿಯಾ ಟೀಮ್‌ಗೂ ಆಯ್ಕೆಯಾಗಿ 2024ರಲ್ಲಿ ಡೆಲ್ಲಿಯಲ್ಲಿ ನಡೆದ ಡಬ್ಲೂಪಿಎಲ್‌ ಸೀಸನ್‌ 2 ರಲ್ಲಿ ಅತ್ಯುತ್ತಮ ಪ್ರಗದರ್ಶನ ನೀಡಿ ಇದೀಗ ಇಡೀ ದೇಶದ ಜನರ ಖುಷಿ ಹರುಷಕ್ಕೆ ಕಾರಣಳಾಗಿರೋದು ಪಾಟೀಲ್‌ ಪರಿವಾರಕ್ಕೆ ಸಂತಸ ತಂದಿದೆ. ಕಲಬುರಗಿ ಗೋದುತಾಯಿ ನಗರದಲ್ಲಿರುವ ಶ್ರೇಯಾಂಕ್‌ ಇವಳ ಅಜ್ಜ ಅಮೃತಗೌಡ ಪಾಟೀಲ್‌, ಅಜ್ಜಿ ಲಕ್ಷ್ಮೀ ಪಾಟೀಲರಂತೂ ಮೊಮ್ಮಗಳ ಸಾಧನೆಗೆ ಹಿಗ್ಗಿದ್ದಾರೆ.

ಕಟಿ ರೊಟ್ಟಿ, ಸೇಂಗಾ ಹಿಂಡಿ, ಎಣ್ಣಿಗಾಯಿ.... ಶ್ರೇಯಾಂಕ್‌ಗೆ ಇಷ್ಟದ ಊಟ

ಶ್ರೇಯಾಂಕ್‌ ಪಾಟೀಲ್‌ ಆರ್‌ಸಿಬಿ ತಂಡದ ಅತ್ಯುತ್ತಮ ಆಟಗಾರ್ತಿಯಾಗಿ ಹೊರಹೊಮ್ಮಿದರೂ ಕೂಡಾ ತಮ್ಮ ಹಳ್ಳಿಯ ಊಟದ ಸೊಗಡು ಮರೆತಿಲ್ಲ. ಕಟಿಕಟಿ ರೊಟ್ಟಿ, ಸೇಂಗಾ ಹಿಂಡಿ, ಎಣ್ಣಿಗಾಯಿ... ಮನ್ಯಾಗ ಅಮ್ಮ, ಅಜ್ಜಿ ಮಾಡಿ ಕೊಟ್ಟ್ರೆ ಕುಂತ ತಿಂತೀನಿ... ಎಂದು ದೆಹಲಿ ಪಂದ್ಯಕ್ಕೂ ಮೊದಲು ಶ್ರೇಯಾಂಕ್‌ ಆಡಿದ ಮಾತುಗಳಿರುವ ವಿಡಿಯೋ ಈ ತಂಡದ ಗೆಲುವಿನ ನಂತರದಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಆಗಿದೆ.

ಬಿಂಕಾ ಪದವಿ ಓದುತ್ತಿದ್ದಾಳೆ ಶ್ರೇಯಾಂಕ್‌ ಪಾಟೀಲ್‌

ಬೆಂಗಳೂರಿನ ವಿದ್ಯಾನಿಕೇತನ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದಿರುವ ಶ್ರೇಯಾಂಕ್‌ ಪಾಟೀಲ್‌ ಬಿಷಪ್‌ ಕಾಟನ್‌ ಕಾಲೇಜಲ್ಲಿ ಸದ್ಯ ಬಿಕಾಂ ಪದವಿ ಓದುತ್ತಿದ್ದಾಳೆ. ಪದವಿ ಓದಿನ ಹಂತದಲ್ಲಿ ಟೀಮ್‌ ಇಂಡಿಯಾ, ಆರ್‌ಸಿಬಿಯಲ್ಲಿ ತಮ್ಮ ಅತ್ಯುತ್ತಮ ಆಟದಿಂದ ಇಡೀ ರಾಜ್ಯ ಹಾಗೂ ದೇಶದ ಗಮನ ಸೆಳೆಯುತ್ತಿದ್ದಾಳೆ. ಶ್ರೇಯಾಂಕ್‌ ಸಹೋದರ ರಾಕೇಶ ಕೂಡಾ ಕ್ರಿಕೆಟ್‌ರ್‌ ಆಗಿದ್ದಾರೆ.ನನ್ನ ಮೊಮ್ಮಗಳು ಶ್ರೇಯಾಂಕ್‌ ಸಣ್ಣಾಕಿ ಇದ್ದಾಗ ಬ್ಯಾಟ್‌ ಹಿಡ್ದು ಕ್ರಿಕೆಟ್‌ ಆಡೋವಾಗ ಅದೇನ್‌ ಗಂಡಸರ ಆಟ ಆಡ್ತಿ ಅಂತ ಬೈತಿದ್ದೆ. ಈಗ ನೋಡಿದ್ರ ಅದೇ ಆಟದಾಗ ಪ್ರೈಜ್‌ ತಗೊಂಳ್ಳೋವಷ್ಟು ಬೆಳದಾಳ, ದೇಶಕ್ಕೆ ಕೀರ್ತಿ ತಂದಾಳ, ನನಗಂತೂ ಭಾಳ ಖುಷಿ ಆಗ್ಯದ. ಈಚೆಗಷ್ಟೇ ಊರಿಗೆ ಬಂದು ಹೋಗಿದ್ಲು. ಪೇಟ್ ಪಾಟೀಲ್‌ ಪರಿವಾರದಾಗ ಇವಳ ಸಾಧನೆ ಸಂತಸದ ವಾತಾವರಣ ಹುಟ್ಟು ಹಾಕ್ಯದ. ಇನ್ನೂ ಆಕಿ ಹೆಚ್ಚು ಸಾಧನೆ ಮಾಡಲಿ ಅನ್ನೋದೇ ನನ್ನ ಹಾರೈಕೆ

- ಲಕ್ಷ್ಮೀ ಅಮೃತಗೌಡ ಪೇಟ್‌ ಪಾಟೀಲ್‌, ಶ್ರೇಯಾಂಕ್‌ ಅಜ್ಜಿ, ಕಲಬುರಗಿ

Share this article