ಕನ್ನಡಪ್ರಭ ವಾರ್ತೆ ಕಲಬುರಗಿ
ಪೊಲೀಸರು ನಿನ್ನೆಯಷ್ಟೇ ಕೊಲೆ ಪ್ರಕರಣದಲ್ಲಿ ನೀಲಕಂಠ ಪಾಟೀಲ್, ಅವರ ಪತ್ನಿ ಸಿದ್ದಮ್ಮರನ್ನು ಬಂಧಿಸಿದ್ದಾರೆ. ಕೊಲೆಗೆ ಸ್ಕೆಚ್ ಹಾಕಿಕೊಟ್ಟ ಆರೋಪ ಈ ದಂಪತಿ ಮೇಲಿದೆ.
ಡಿಸೆಂಬರ್ ಮೊದಲ ವಾರವೇ ಕೊಲೆಗೆ ಪ್ಲಾನ್ ರೂಪಿಸಲಾಗಿತ್ತು. ಅದರಂತೆಯೇ ಎಲ್ಲವೂ ಜಾರಿಯಾದಾಗ ಕೊಲೆ ಮಾಡಿದ ತಂಡದಲ್ಲಿದ್ದ ಆರೋಪಿ ಹಂತಕ ಮಲ್ಲೀನಾಥ ನಾಯಿಕೋಡಿ ಈತ ರಕ್ತಸಿಕ್ತ ಕೈಯಲ್ಲೇ ಸ್ಕೆಚ್ ಹಾಕಿದ್ದ. ದಂಪತಿ ಮನೆಗೆ ಹೋಗಿ 50 ಸಾವಿರ ರುಪಾಯಿ ಹಣ ಪಡೆದಿದ್ದನೆಂಬ ಭಯಾನಕ ಸಂಗತಿ ಪೊಲೀಸರ ವಿಚಾರಣೆಯಲ್ಲಿ ಬಹಿರಂಗವಾಗಿದೆ.ಸದ್ಯ ಕೊಲೆಗೆ ಪ್ಲ್ಯಾನ್ ರೂಪಿಸಿದ್ದಾರೆಂಬ ಆರೋಪದ ಮೇಲೆ ಪೊಲೀಸರಿಂದ ಸೆರೆಯಲ್ಲಿರುವ ನೀಲಕಂಠ ಪಾಟೀಲ್ ಹಾಗೂ ಕೊಲೆಯಾದ ವಕೀಲ ಈರಣ್ಣಗೌಡ ಇವರಿಬ್ಬರೂ ಸಹೋದರ ಸಂಬಂಧಿಗಳಾಗಿದ್ದರು. ಕಲಬುರಗಿ ಮಹಾ ನಗರಕ್ಕೆ ಹೊಂದಿಕೊಂಡಂತೆಯೇ ಬೆಲೆ ಬಾಳುವ (ಎಕರೆಗೆ ಅಂದಾಜು 3 ಕೋಟಿ ರು) 12 ಎಕರೆ ಜಮೀನು ವಕೀಲ ಈರಣ್ಣಗೌಡ ಪಾಟೀಲ ಹೆಸರಲ್ಲಿತ್ತು. ಈ ಬೆಲೆಬಾಳುವ ಜಮೀನನ್ನು ಕೊಲೆ ಮಾಡಿದ ಆರೋಪ ಹೊತ್ತು ಬಂಧನದಲ್ಲಿರುವ ಮಲ್ಲೀನಾಥ ನಾಯಿಕೋಡಿ ಕುಟುಂಬ ನೋಡಿಕೊಳ್ಳುತ್ತಿತ್ತು. ಈ ನಡುವೆ ವಕೀಲ ಈರಣ್ಣಗೌಡ 12 ಎಕರೆ ಜಮೀನನ್ನು ಕೃಷಿಯೇತರ ಎಂದು ಪರಿವರ್ತಿಸಿ ನಿವೇಶನ ಮಾಡಿ ಅಭಿವೃದ್ಧಿಪಡಿಸಿ ಮಾರಾಟ ಮಾಡುವ ದಿಶೆಯಲ್ಲಿ ಯೋಜನೆ ರೂಪಿಸಲಾರಂಭಿಸಿದ್ದರು.12ಎಕರೆ ಜಮೀನಲ್ಲಿ ಪಾಲಿಗಾಗಿ ದಾವೆ ಹೂಡಿದ್ದರು: ಈರಣ್ಣ ಗೌಡರ ಹೆಸರಲ್ಲಿದ್ದ ಕೋಟಿ ಬೆಲೆ ಬಾಳುವ ಜಮೀನಿನ ಮೇಲೆ ಅದಾಗಲೇ ಕಣ್ಣಿಟ್ಟಿದ್ದ ನೀಲಕಂಠ ಪಾಟೀಲ್, ಮಲ್ಲೀನಾಥ ನಾಯಿಕೋಡಿ ಕುಟುಂಬದವರು ಸದರಿ 12 ಎಕರೆ ಜಮೀನಲ್ಲಿ ತಮಗೂ ಪಾಲುಬೇಕೆಂದು ನ್ಯಾಯಾಲಯದಲ್ಲಿ ದಾವೆ ಸಹ ಹೂಡಿದ್ದರೆಂಬುದು ಪೊಲೀಸ್ ವಿಚಾರಣೆಯಲ್ಲಿ ಗೊತ್ತಾಗಿದೆ. 12 ಎಕರೆ ಜಮೀನಿಗಾಗಿ ಅದಾಗಲೇ ಹತ್ತಾರು ಬಾರಿ ಊರಲ್ಲಿ, ಬಂಧು ಬಳಗದಲ್ಲಿ ನ್ಯಾಯ, ಪಂಚಾಯಿತಿ ಸಹ ನಡೆದಿದ್ದವು. ರಾಜೀ ಸಂಧಾನಗಳು ನಡೆದು ವಿಫಲವಾಗಿದ್ದವು.
ಈ ದಿನ ಈರಣ್ಣಗೌಡ ಪಾಟೀಲ್ ಕಡತಗಳ ಸಮೇತ ಕೋರ್ಟ್‌ಗೆ ಸಿದ್ಧರಾಗಿದ್ದರು. ಇತ್ತ ಆರೋಪಿ ನೀಲಕಂಠ ಪಾಟೀಲ್, ಮತ್ತವರ ಪತ್ನಿ ಸಿದ್ದಮ್ಮ ಹೊಸ ಕಾರ್ ಪೂಜೆಗೆಂದು ದತ್ತಾತ್ರೇಯ ದೇವರ ತಾಣ ಗಾಣಗಾಪುರಕ್ಕೆ ತೆರಳಿದ್ದರು.
ಮೊದಲೇ ಸಂಚು ರೂಪಿಸಿದಂತೆಯೇ ಮಲ್ಲೀನಾಥ, ಅವ್ವಣ್ಣ ಹಾಗೂ ಭಾಗೇಶ ನಾಯಿಕೋಡಿ ಮೂವರು ಸೇರಿಕೊಂಡು ಅವರು ವಾಸವಾಗಿರುವ ಅಪಾರ್ಟ್‌ಮೆಂಟ್‌ನ ಮನೆ ಮುಂದೆ ಕೋರ್ಟ್‌ಗೆ ಹೋಗೋ ಸಮಯದಲ್ಲೇ ಅಡ್ಡಗಟ್ಟಿ ಮಚ್ಚಿನಿಂದ ಹತ್ತಾರು ಬಾರಿ ಕೊಚ್ಚಿದ್ದಲ್ಲದೆ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿದ್ದರು.