ಕನ್ನಡಪ್ರಭ ವಾರ್ತೆ ಕಲಬುರಗಿ
ದಶಕದಿಂದ ಜಿಲ್ಲೆಯ ಹೆಸರು ರಾಜ್ಯ ಟಾಪ್ 5, ಟಾಪ್ 10ರಲ್ಲಾಗಲಿ ಇರುತ್ತಿರಲಿಲ್ಲ ಆದರೀಗ ಸರ್ವಜ್ಞ ಕಾಲೇಜಿನ ಪ್ರವೀಣ, ಎಸ್ಬಿಆರ್‌ನ ಸಮರ್ಥ ಇರಿಬ್ಬರ ಸಾಧನೆಯಿಂದಾಗಿ ಇಡೀ ಜಿಲ್ಲೆಯ ಪಿಯು ಫಲಿತಾಂಶದಲ್ಲಿ ರ್‍ಯಾಂಕ್ ಸಾದನೆ ಮಾಡುವ ಮೂಲಕ ಹೆಮ್ಮೆಯಿಂದ ಬೀಗುವಂತಾಗಿದೆ.
ಪಿಸಿಎಂಬಿ ನಾಲ್ಕರಲ್ಲೂ ನೂರಕ್ಕೆ ನೂರು ಸಾಧನೆ: ಇಲ್ಲಿನ ಸರ್ವಜ್ಞ ಕಾಲೇಜಿನ ಪಿಯುಸಿ ವಿದ್ಯಾರ್ಥಿ ಪ್ರವೀಣ ಹಿರಗೋಪನಾರ್ ಈತ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಹಾಗೂ ಜೀವಶಾಸ್ತ್ರ ಎಲ್ಲಾ ನಾಲ್ಕೂ ಮೂಲ ವಿಜ್ಞಾನ ವಿಷಯಗಳಲ್ಲಿ ನೂರಕ್ಕೆ ನೂರು ಸಾಧನೆ ಮಾಡಿ ಗಮನ ಸೆಳೆದಿದ್ದಾನೆ. ಈತನಿಗೆ 600 ಕ್ಕೆ 595 ಬಂದಿದೆ. ಶೇ.99.17ರಷ್ಟು ಸಾಧನೆ ಮಾಡಿ ಗಮನ ಸೆಳೆದಿದ್ದಾನೆ.ಪ್ರವೀಣನದ್ದು ಸಾಧಾರಣ ರೈತ ಕುಟುಂಬವಾಗಿದೆ. ಈತನ ತಂದೆ ಸಿದ್ದಪ್ಪ ಕುಮಸಿ ತಾಂಡಾದ ನಿವಾಸಿ ಹಾಗೂ ರೈತನಾಗಿದ್ದಾನೆ. ಅಷ್ಟೇನು ಓದಿದವನಲ್ಲ, ತಾಯಿ ನಾಗಮ್ಮ ಅನಕ್ಷರಸ್ಥೆ. ಆದಗ್ಯೂ ಮಗ ಓದಲಿ ಎಂದು ಈತನನ್ನು ಪುಣೆಯಲ್ಲಿರುವ ಮಾವನ ಮನೆಯಲ್ಲಿಟ್ಟು ಓದಿಸಿದ್ದಾರೆ. ಇದೀಗ ಪ್ರವೀಣ ಪಿಯುಸಿಯಲ್ಲಿ ಭಾರಿ ಅಂಕ ಗಳಿಸಿ ಪೋಷಕರಿಗೆ ಸಂತಸ ತಂದಿದ್ದಾನೆ.
ಪಿಯುಸಿ 2ನೇ ವರ್ಷಪೂರ್ತಿ ಮೊಬೈಲ್‌ನಿಂದ ದೂರ: ಪ್ರವೀಣನ ಸಾಧನೆಯ ಹಿಂದೆ ಇನ್ನೊಂದು ಗಮನಾರ್ಹ ಸಂಗತಿ ಎಂದರೆ ಆತ ಪಿಯುಸಿ 2 ವರ್ಷ ಪೂರ್ತಿ ಮೊಬೈಲ್‌ನಿಂದ ದೂರ ಇದ್ದದ್ದು. ಈತ ಮೊಬೈಲ್ ತನ್ನ ಜೊತೆ ಇಟ್ಟು ಕೊಂಡೇ ಇರಲಿಲ್ಲವಂತೆ, ಹೀಗೆಂದು ಆತನ ಸಹಪಾಠಿಗಳೇ ಹೇಳುತ್ತಾರೆ. ಮನಗೆ ಕರೆ ಮಾಡಬೇಕಾದರೆ ಅವರಿವರು ಸ್ನೇಹಿತರ ಮೊಬೈಲ್ ಪಡೆಯುತ್ತಿದ್ದ ಪ್ರವೀಣ ತನಗೆ ಮೊಬೈಲ್ ಬೇಕು ಅನ್ನಿಸಲೇ ಇಲ್ಲವೆಂದು ಹೇಳಿದ.
ಎಸ್ಬಿಆರ್ ಸಮರ್ಥನ ಸಾಧನೆಗೆ ಹೆಮ್ಮೆ: ಇಲ್ಲಿನ ಶರಣಬಸವೇಶ್ವರ ರೆಸಿಡೆನ್ಸಿಯಲ್ ಕಾಲೇಜು ಎಸ್ಬಿಆರ್‌ನ ಸಮರ್ಥ ಭಕರೆ ರಾಜ್ಯಕ್ಕೆ 4ನೇ ರ್‍ಯಾಂಕ್ ಗಳಿಸಿದ್ದಾನೆ. ಈತನ ತಂದೆ ಸೂರಜ್ ಭಕರೆ ಸುರಪೂರ ಡಿಪ್ಲೊಮಾ ಕಾಲೇಜಿನ ಉಪನ್ಯಾಸಕರು, ತಾಯಿ ಅನಿತಾ ಇವರು ಅಫಜಲ್ಪುರದಲ್ಲಿ ಸರಕಾರಿ ಪಪೂ ಗಣಿತ ಉಪನ್ಯಾಸಕಿಯಾಗಿದ್ದಾರೆ.
ನಿತ್ಯ ಮೂರೂವರೆ ಗಂಟೆ ಓದುತ್ತಿದ್ದೆ. ಇದಲ್ಲದೆ ಕಾಲೇಜಲ್ಲಿ ನಿತ್ಯ ನಡೆಸುವ ಕಿರು ಪರೀಕ್ಷೆಗಳೇ ನನ್ನ ಸಾಧನೆಗೆ ಪೂರಕ. ಜೊತೆಗೇ ಉಪನ್ಯಾಸಕರ ಸಲಹೆ ಸೂಚನೆ ಪಾಲಿಸುತ್ತ ಓದಿದ್ದೇ ತನ್ನ ಯಶಸ್ಸಿಗೆ ಕಾರಣವೆಂದು ಸಮರ್ಥ ಹೇಳುತ್ತಾನೆ.