ಕಲಘಟಗಿ:
ಪಟ್ಟಣದ ಕಾರವಾರ-ಹುಬ್ಬಳ್ಳಿ ರಸ್ತೆ ಹಾಗೂ ಆಂಜನೇಯ ವೃತ್ತದ ಎದುರಿನ ಜಾಗದಲ್ಲಿ ಬಸವೇಶ್ವರ ನಾಮಫಲಕದ ಬಳಿಯ ಸ್ಥಳದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಮುಂದಾಗಿದ್ದ ಬಸವ ಅಭಿಮಾನಿಗಳಿಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ತಡೆಯೊಡ್ಡಿದ್ದರು.ತಾಲೂಕಿನ ಬಸವ ಅಭಿಮಾನಿಗಳು ಹಾಗೂ ಎಲ್ಲ ಸಮಾಜ ಬಾಂಧವರು ಬುಧವಾರ ಬಸವೇಶ್ವರ ನಾಮಫಲಕದ ಸ್ಥಳದ ಸ್ವಚ್ಛತಾ ಕಾರ್ಯಕ್ಕೆ ಕರೆ ನೀಡಿದ್ದರಿಂದ ನೂರಾರು ಜನರು ಆಗಮಿಸಿದ್ದರು. ಇನ್ನೇನು ಜೆಸಿಬಿ ಮೂಲಕ ಸ್ವಚ್ಛತಾ ಕಾರ್ಯ ಆರಂಭಿಸಬೇಕು ಎನ್ನುವಷ್ಟರಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಬಂದು ಇದು ಸರ್ಕಾರ ಜಾಗಕ್ಕೆ ಸೇರಿದೆ, ಅನುಮತಿ ನೀಡುವುದಿಲ್ಲ ಎಂದು ತಡೆಯೊಡ್ಡಿದ್ದರು.
ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದ ಬಸವಾಭಿಮಾನಿಗಳು, ''''ಈ ಬಗ್ಗೆ ಒಂದೂವರೆ ವರ್ಷದ ಹಿಂದೆಯೇ ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಲಾಗಿತ್ತು. ಬಸವೇಶ್ವರ ಪುತ್ಥಳಿ ಸ್ಥಾಪನೆಗೆ ಅಡ್ಡಿಪಡಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪಪಂ ಮುಖ್ಯಾಧಿಕಾರಿಗೆ ಪ್ರಶ್ನಿಸಿದರು.ಪಟ್ಟಣ ಪಂಚಾಯಿತಿಗೆ ಸೇರಿದ ಆಸ್ತಿಯಾದರೆ ನೀವೇ ಸ್ವಚ್ಛತೆ ಮಾಡಿಸಿ ಎಂದು ಪಟ್ಟು ಹಿಡಿದರು. ಈ ವೇಳೆ ಇದು ನಮ್ಮ ಕುಟುಂಬಕ್ಕೆ ಸೇರಿದ ಆಸ್ತಿ. ಸರ್ವೇ ಮಾಡಿಸಿ, ಆನಂತರ ಮುಂದಿನ ಕ್ರಮಕೈಗೊಳ್ಳಿ ಎಂದು ವ್ಯಕ್ತಿಯೊಬ್ಬರು ತಿಳಿಸಿದರು. ಇಷ್ಟಕ್ಕೆ ಸುಮ್ಮನಾಗದ ಜನರು ಪಟ್ಟಣ ಪಂಚಾಯಿತಿಗೆ ತೆರಳಿ ಪಪಂ ಮುಖ್ಯಾಧಿಕಾರಿ ಬಳಿ ವಿಚಾರಣೆ ನಡೆಸಿದರು. ಶೀಘ್ರವೇ ಸರ್ವೇ ಕಾರ್ಯ ಕೈಗೊಂಡು ಬಸವಣ್ಣನ ಪುತ್ಥಳಿ ಸ್ಥಾಪನೆಗೆ ಅನುವು ಮಾಡಿಕೊಡಬೇಕು. ಇಲ್ಲವಾದಲ್ಲಿ ನ. 23ರ ನಂತರ ಪಪಂ ಎದುರು ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದು ಎಚ್ಚರಿಗೆ ನೀಡಿದರು.
ಇಂದು ಸರ್ವೇ:ನಾನು ಇತ್ತೀಚೆಗೆ ಅಧಿಕಾರ ಸ್ವೀಕರಿಸುವುದರಿಂದ ಹಿಂದೆ ನಡೆದ ವಿಚಾರಗಳ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳುವೆ.
ಬಸವೇಶ್ವರ ನಾಮಫಲಕ ಇರುವ ಜಾಗದ ಬಗ್ಗೆ ಮೇಲಾಧಿಕಾರಿಗಳಿಗೂ ಮಾತನಾಡಿದ್ದೇನೆ. ಗುರುವಾರವೇ ಸರ್ವೇ ಕಾರ್ಯ ನಡೆಸಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಿ.ವಿ.ಕುಲಕರ್ಣಿ ತಿಳಿಸಿದರು.ಸ್ಥಳ ಸ್ವಚ್ಛತಾ ಕುರಿತಂತೆ ಪಟ್ಟಣ ಪಂಚಾಯಿತಿ ಅಧಿಕಾರಿಗಳ ಜತೆ ವಿವಿಧ ಸಮಾಜ ಮುಖಂಡರು ವಾಗ್ವಾದಕ್ಕೆ ಇಳಿದ ಘಟನೆ ಜರುಗಿತು. ಸ್ವಚ್ಛತೆಗೆ ಕಾರ್ಯ ತಡೆಯುವ ಉದ್ದೇಶದಿಂದಲೇ ಪೊಲೀಸರನ್ನು ಕರೆಸಿದ್ದೀರಿ. ಒಳ್ಳೆಯ ಉದ್ದೇಶಕ್ಕೆ ಅಡ್ಡಿ ಮಾಡುವುದು ಏಷ್ಟರ ಮಟ್ಟಿಗೆ ಸರಿ ಎಂದು ಬಸವ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು.