ನಾಡು ನುಡಿ ಕಟ್ಟಲು ಶಿವಾಜಿ ಮಾರ್ಗ ಆದರ್ಶನೀಯ: ಶಾಸಕ ಕೆ. ಹರೀಶ್ ಗೌಡ

KannadaprabhaNewsNetwork | Published : Feb 20, 2024 1:49 AM

ಸಾರಾಂಶ

ಶಿವಾಜಿ ನಾಡನ್ನು ಕಟ್ಟುವ ಹಾಗೂ ಸಾಮ್ರಾಜ್ಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಅವರು ಅಳವಡಿಸಿಕೊಂಡಿದ್ದ ಆದರ್ಶಗಳು, ಸಂಸ್ಕೃತಿ, ಆಚರಣೆಗಳನ್ನು ನಾವು ಮನವರಿಕೆ ಮಾಡಿಕೊಳ್ಳಬೇಕು. ಅಂತವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ನಾವು ಉತ್ತಮ ಸಮಾಜ ಕಟ್ಟಲು ಮುಂದಾಗಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ಛತ್ರಪತಿ ಶಿವಾಜಿ ಮಹಾರಾಜರು ನಾಡು- ನುಡಿಯನ್ನು ಕಟ್ಟಿ ಬೆಳಸುವ ನಿಟ್ಟಿನಲ್ಲಿ ಉತ್ತಮ ಮಾರ್ಗಗಳನ್ನು ಅಳವಡಿಸಿಕೊಂಡಿದ್ದರು. ಅವೆಲ್ಲವೂ ಇಂದು ನಮಗೆ ಆದರ್ಶ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೈಸೂರು ವಿಭಾಗೀಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ತಿಳಿಸಿದರು.

ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸೋಮವಾರ ಆಯೋಜಿಸಿದ್ದ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿವಾಜಿ ನಾಡನ್ನು ಕಟ್ಟುವ ಹಾಗೂ ಸಾಮ್ರಾಜ್ಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಅವರು ಅಳವಡಿಸಿಕೊಂಡಿದ್ದ ಆದರ್ಶಗಳು, ಸಂಸ್ಕೃತಿ, ಆಚರಣೆಗಳನ್ನು ನಾವು ಮನವರಿಕೆ ಮಾಡಿಕೊಳ್ಳಬೇಕು. ಅಂತವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ನಾವು ಉತ್ತಮ ಸಮಾಜ ಕಟ್ಟಲು ಮುಂದಾಗಬೇಕು ಎಂದರು.

ಬಾಸುದೇವ ಸೋಮಾನಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಬಿ. ರಮೇಶ್ ಮಾತನಾಡಿ, ಶಿವಾಜಿ ಅವರು ಒಬ್ಬ ಆದರ್ಶ ಪುರುಷ, ಸರ್ವಧರ್ಮವನ್ನು ಸಮಾನವಾಗಿ ಕಾಣುತ್ತಿದ್ದ ಸರ್ವಗುಣ ಸಂಪನ್ನ, ಇಂತಹ ಮಹಾನ್ ವ್ಯಕ್ತಿಯ ಜಯಂತಿಯಂದು ಮಹಾರಾಷ್ಟ್ರದಲ್ಲಿ ಸಾರ್ವಜನಿಕ ರಜೆಯನ್ನು ನೀಡುವುದರ ಮೂಲಕ ದೊಡ್ಡ ಹಬ್ಬದ ರೀತಿ ಆಚರಿಸುತ್ತಾರೆ ಎಂದರು.

ಈ ದೇಶವನ್ನು ಸಾವಿರಾರು ರಾಜರು ಆಳಿ ಮರೆಯಾಗಿದ್ದಾರೆ. ಆದರೆ, ಶಿವಾಜಿಯವರು ತಮ್ಮ ಮರಣದ ನಂತರವೂ ಪ್ರತಿಯೊಬ್ಬರ ಮನಸಿನಲ್ಲಿಯೂ ಮಹಾರಾಜರಾಗಿ ಇಂದಿಗೂ ಸಂಭ್ರಮಿಸುತ್ತಿದ್ದಾರೆ. ಇದು ಅವರು ಅವರ ವ್ಯಕ್ತಿತ್ವದಿಂದ ಗಳಿಸಿರುವ ಗೌರವ. ಇವರ ಸಾಲಿಗೆ ಇನ್ನೂ ಹಲವಾರು ಮಹಾಪುರುಷರು ಸೇರುತ್ತಾರೆ. ಅಂತಹ ವ್ಯಕ್ತಿಗಳ ಸಾಧನೆ, ಆದರ್ಶ ಗುಣಗಳನ್ನು ಇಂದಿನ ಯುವಜನರಿಗೆ ತಿಳಿಸುವ ಕೆಲಸವನ್ನು ಜಯಂತಿ ಮಾಡುತ್ತಿವೆ ಎಂದು ಅವರು ಹೇಳಿದರು.

ಜನಪರ ನಾಯಕನಾಗಿ ಜನಪ್ರಿಯನಾಗಿದ್ದ ಶಿವಾಜಿಯವರ ಸಾಧನೆ ಒಂದೆರಡು ದಿನಗಳದ್ದಲ್ಲ. ಹಲವಾರು ವರ್ಷಗಳ ಹೋರಾಟ. ಶಿವಾಜಿಯವರು ತಮ್ಮ ಆಡಳಿತದಲ್ಲಿ ಸುಧಾರಣೆ ತರಲು ಹೊಸ ಮಾದರಿಯನ್ನು ಅಳವಡಿಸಿಕೊಂಡು ಸರ್ವಧರ್ಮದವರನ್ನು ಒಂದುಗೂಡಿಸಿ ಆರ್ಥಿಕ ಸಮಾನತೆಗಾಗಿ ಹೋರಾಡಿದರು. ಬದುಕಿನಲ್ಲಿ ಕತ್ತಿಗೆ ಕತ್ತಿ, ಪ್ರೀತಿಗೆ ಪ್ರೀತಿ ಎಂಬ ಸೂತ್ರವನ್ನು ಅಳವಡಿಸಿಕೊಂಡು ಸಾಕಷ್ಟು ಹೋರಾಟಗಳನ್ನು ಮಾಡಿದ ಧೀಮಂತ ವ್ಯಕ್ತಿ, ಅವರ ಧೀರ ಗುಣ ದಿಟ್ಟ ನಿರ್ಧಾರ ಇವತ್ತಿನ ಕಾಲಕ್ಕೆ ಪ್ರಸ್ತುತವಾಗಿದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಸಮಿತಿಯ ಅಧ್ಯಕ್ಷ ಕೆ. ನಾಗೇಂದ್ರ, ಪದಾಧಿಕಾರಿಗಳಾದ ಚಂದ್ರರಾವ್, ಮುಕುಂದರಾವ್, ಹರಿರಾವ್ ಸಿಂದೆ ಮೊದಲಾದವರು ಇದ್ದರು.

ಶಿವಾಜಿ ಭಾವಚಿತ್ರ ಮೆರವಣಿಗೆ

ಇದಕ್ಕೂ ಮುನ್ನ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಜಾನಪದ ಕಲಾ ತಂಡಗಳೊಂದಿಗೆ ಶಿವಾಜಿ ಭಾವಚಿತ್ರ, ಪುತ್ಥಳಿ ಮೆರವಣಿಗೆಗೆ ಶಾಸಕ ಕೆ. ಹರೀಶ್ ಗೌಡ ಅವರು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಬಳಿ ಚಾಲನೆ ನೀಡಿದರು.

ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಮುಂಭಾಗದಿಂದ ಆರಂಭವಾದ ಮೆರವಣಿಗೆಯು ಕಲಾಮಂದಿರ ಆವರಣದಲ್ಲಿ ಅಂತ್ಯವಾಯಿತು. ಶಿವಾಜಿ ವೇಷಧಾರಿ ಮಕ್ಕಳು, ವಿವಿಧ ಜಾನಪದ ಕಲಾತಂಡಗಳು, ಸಮಾಜದ ಮುಖಂಡರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Share this article