ಬರದಲ್ಲಿ ಆಸರೆಯಾದ ಕಳಸಕೊಪ್ಪ ಕೆರೆ

KannadaprabhaNewsNetwork |  
Published : Nov 23, 2026, 03:15 AM IST
ಕಲಾದಗಿ | Kannada Prabha

ಸಾರಾಂಶ

ಕಲಾದಗಿ: 60 ವರ್ಷಗಳ ಹಿಂದೆ ನಿರ್ಮಾಣವಾದ ಬಾಗಲಕೋಟೆ ತಾಲೂಕಿನ ಕಳಸಕೊಪ್ಪ ಕೆರೆ ಈ ಭಾಗದ ಸುಮಾರು 6 ಗ್ರಾಮಗಳ ಜನರಿಗೆ ಆಸರೆಯಾಗಿದೆ.

ಚಂದ್ರಶೇಖರ ಶಾರದಾಳ

ಕನ್ನಡಪ್ರಭ ವಾರ್ತೆ ಕಲಾದಗಿರಾಜ್ಯಾದ್ಯಂತ ಭೀಕರ ಬರಗಾಲ ಆವರಿಸಿದ್ದು, ನದಿಗಳು, ಕೆರೆಕಟ್ಟೆಗಳು, ಕೊಳವೆಬಾವಿಗಳ ನೀರು ಕಡಿಮೆಯಾಗಿ ಬೇಸಿಗೆಗೂ ಮುನ್ನವೇ ಕುಡಿಯುವ ನೀರು ಪೂರೈಕೆಯ ಸಮಸ್ಯೆ ತಲೆದೋರಿದೆ. ಬೇಸಿಗೆಯಲ್ಲಿ ನೀರು ಪೂರೈಕೆ ಹೇಗೆ ಎಂಬ ಚಿಂತೆ ಸರ್ಕಾರವನ್ನು ಕಾಡುತ್ತಿದ್ದರೆ, ಬಿತ್ತನೆ ಮಾಡಿದ ಬೆಳೆಯನ್ನು ಹೇಗೆ ಉಳಿಸಿಕೊಳ್ಳುವುದು ಎಂಬ ಚಿಂತೆ ರೈತರನ್ನು ಕಾಡುತ್ತಿದೆ.

ಇಂತಹ ವಿಷಮ ಪರಿಸ್ಥಿತಿಯಲ್ಲಿ ಸುಮಾರು 60 ವರ್ಷಗಳ ಹಿಂದೆ ನಿರ್ಮಾಣವಾದ ಬಾಗಲಕೋಟೆ ತಾಲೂಕಿನ ಕಳಸಕೊಪ್ಪ ಕೆರೆ ಈ ಭಾಗದ ಸುಮಾರು 6 ಗ್ರಾಮಗಳ ಜನರಿಗೆ ಆಸರೆಯಾಗಿದೆ. ಈ ಕೆರೆ ಬಾಗಲಕೋಟೆ ತಾಲೂಕಿನ 6 ಗ್ರಾಮಗಳ 1142 ಹೆಕ್ಟೇರ್ ಪ್ರದೇಶ ನಿರಾವರಿಗೆ ಒಳಪಡಿಸುವ ಜಿಲ್ಲೆಯಲ್ಲಿಯೇ ಅತೀ ದೊಡ್ಡದಾದ ಎರಡನೇ ಕೆರೆ ಎಂಬ ಖ್ಯಾತಿ ಹೊಂದಿದೆ. ಕೆರೆ ಪ್ರತಿ ವರ್ಷ ತುಂಬಿ ಕೋಡಿ ಹರಿಯುತ್ತಿತ್ತು. ಆದರೆ, ಈ ವರ್ಷ ಬರದ ಕರಾಳಛಾಯೆ ಆವರಿಸಿದ್ದರೂ ಮುಕ್ಕಾಲು ಭಾಗ ನೀರು ತುಂಬಿಕೊಂಡಿದ್ದು,ನೀರಿನ ಬವಣೆ ನೀಗಿಸುವಲ್ಲಿ ಸಹಕಾರಿಯಾಗಿದೆ.

ಪ್ರತಿ ವರ್ಷ ಜುಲೈ ತಿಂಗಳ ಮೊದಲ ಇಲ್ಲವೇ ಎರಡನೇ ವಾರದಲ್ಲಿ ಕೆರೆಗಳಿಗೆ ನೀರು ತುಂಬಲು ಚಾಲನೆ ನೀಡಲಾಗುತ್ತಿತ್ತು. ವಿದ್ಯುತ್ ಟ್ರಾನ್ಸಫಾರ್ಮರ್‌ ದುರಸ್ತಿಯಲ್ಲಿದ್ದುದರಿಂದ ಎರಡು ವಾರ ವಿಳಂಬವಾದರೂ ಶಾಸಕ ಜೆ.ಟಿ. ಪಾಟೀಲರು ಮುತುವರ್ಜಿ ವಹಿಸಿ ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಮುದ್ದೆಬಿಹಾಳದ ನಾಗರ ಬೆಟ್ಟದಿಂದ ಬೇರೆ ಟಿಸಿ ತರಿಸಿ ಕೆರೆಗೆ ನೀರು ತುಂಬಿಸಲು ಚಾಲನೆ ನೀಡಿದ ಪರಿಣಾಮ ಕೆರೆ ಮುಕ್ಕಾಲು ಭಾಗ ತುಂಬಿಕೊಂಡು ಜನ, ಜಾನುವಾರು, ರೈತರಿಗೆ ಆಸರೆಯಾಗಿದೆ.

270 ಹೆಕ್ಟೇರ್‌ ಪ್ರದೇಶದಲ್ಲಿ ಹರಡಿದ ಕೆರೆ:

ಕಳಸಕೊಪ್ಪ ಕೆರೆಯ ನೀರು 270 ಹೆಕ್ಟೇರ್‌ ಪ್ರದೇಶ ಅಂದರೆ 667.1845 ಎಕರೆ ಪ್ರದೇಶದಲ್ಲಿ ನಿಲ್ಲುತ್ತದೆ. ಕೆರೆಯ ನೀರು ನಿಲ್ಲುವ ಮಟ್ಟ 6 ಮೀ. ಎತ್ತರವಿದ್ದು, 20 ಅಡಿಯಷ್ಟು ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಪ್ರಸಕ್ತ ವರ್ಷ ನಾಲ್ಕುವರೆ ಮೀಟರ್‌ವೆರೆಗೆ ತುಂಬಿಕೊಂಡು 14 ಅಡಿ 9.165 ಇಂಚು ನೀರು ತುಂಬಿಕೊಂಡಿದೆ.

ಬರ ಕಾಮಗಾರಿಯಲ್ಲಿ ತಲೆ ಎತ್ತಿದೆ ಕೆರೆ:

60 ವರ್ಷದ ಹಿಂದೆ ಬರ ಕಾಮಗಾರಿಯಲ್ಲಿ ಕೈಗೊಂಡಿದ್ದ ಕೆರೆ ನಿರ್ಮಾಣ ಇಂದು ಈ ಭಾಗದ ನೀರಿನ ಬವಣೆ ನೀಗಿಸುವಲ್ಲಿ ಸಹಕಾರಿಯಾಗಿದೆ. 1957ರಲ್ಲಿ ಕೆರೆ ನಿರ್ಮಾಣ ಕಾಮಗಾರಿ ಆರಂಭಿಸಿ 1960ರಲ್ಲಿ ಪೂರ್ಣಗೊಳಿಸಲಾಯಿತು. ಕೆರೆಯ ಕಟ್ಟೆಯ ಎತ್ತರ 57 ಅಡಿಗಳಷ್ಟಿದ್ದು, ಉದ್ದ 1616 ಅಡಿ, ಮೇಲಗಲ 12 ಅಡಿ ಅಗಲ ಹೊಂದಿದೆ, ಕೆಳ ಅಗಲ 228 ಅಡಿಗಳಷ್ಟಿದೆ. ಬರ ಕಾಮಗಾರಿಯಲ್ಲಿ ಕೈಗೊಂಡ ಕಾಮಗಾರಿ ಈ ಬಾರಿಯ ಬರಗಾದಲ್ಲಿ ನೀರಿನ ಬರ ನೀಗಿಸುತ್ತಿದೆ..

ಪ್ರಸಕ್ತ ವರ್ಷ ಮಳೆಯೂ ಸರಿಯಾಗಿ ಆಗದ ಕಾರಣ ಮತ್ತು ಘಟಪ್ರಭಾ ನದಿಯಲ್ಲಿ ಹಿನ್ನೀರು ಬೇಗ ಸರಿದಿರುವುದು, ಬಿಸಿಲು ಹೆಚ್ಚಾಗಿರುವ ಕಾರಣಕ್ಕೆ ನೀರು ದಿನದಿಂದ ದಿನಕ್ಕೆ ಆವಿಯಾಗುತ್ತಿದೆ. ಈ ಎಲ್ಲಾ ಕಾರಣದಿಂದ ಕೆರೆ ನೀರು ತುಂಬಿಕೊಳ್ಳಲು ಸಾಧ್ಯವಾಗಲಿಲ್ಲ, ಹದಿನೈದು ದಿನ ಕಾಲುವೆಗಳಿಗೂ ನೀರು ಹರಿದ ಕಾರಣ ಕಳಸಕೊಪ್ಪ ಕೆರೆ ಸಂಪೂರ್ಣ ತುಂಬಲಿಲ್ಲ. ಆದರೂ ಮುಕ್ಕಾಲು ಭಾಗದಲ್ಲಿ ನೀರು ತುಂಬಿಕೊಂಡಿರುವುದು ನೀರಿನ ಸಮಸ್ಯೆ ಸ್ವಲ್ಪಮಟ್ಟಿಗೆ ಕಡಿಮೆ ಮಾಡಿದೆ.

-ವಿಶ್ವನಾಥ ನೀಲನ್ನವರ ಕೆ.ಬಿ.ಜೆ.ಎನ್.ಎಲ್ ಎಇಇ, ಬಾಗಲಕೋಟೆ

ಪ್ರಸಕ್ತ ವರ್ಷ ಬರಗಾಲ ಆವರಿಸಿದೆ, ಶಾಸಕರು ಮುತುವರ್ಜಿ ವಹಿಸಿ ನೀರು ತುಂಬಲು ಚಾಲನೆ ನೀಡಿದ ಪರಿಣಾಮ ಇಂದು ಮುಕ್ಕಾಲು ಭಾಗವಾದರೂ ಕೆರೆ ನೀರುತುಂಬಿಕೊಂಡು ಈ ಭಾಗದ ಜನರಿಗೆ ಆಸರೆಯಾಗಿದೆ.

-ಮಂಜುನಾಥ ಗೌಡರ ಕಳಸಕೊಪ್ಪ ಯುವ ರೈತ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳಗಾವಿಯಲ್ಲಿ ಮಟಕಾ ದಂಧೆ ಮೇಲೆ ಪೊಲೀಸರ ಸರಣಿ ದಾಳಿ
ವಿವಾದಿತ ಕೃತಿ ಮುಟ್ಟುಗೋಲಿಗೆ ಮಹಾಸಭೆ ಆಗ್ರಹ