ಜಂಟಿ ಸರ್ವೇ ನಡೆಸುವವರೆಗೆ ಮನೆ ಮರು ನಿರ್ಮಾಣಕ್ಕೆ ಸಂಬಂಧಿಸಿ ಯಾವುದೇ ಕಾಮಗಾರಿ ನಡೆಸುವುದಿಲ್ಲ. ಒಂದು ವೇಳೆ ಮನೆ ಪ್ರದೇಶ ಅರಣ್ಯ ಎಂದಾದಲ್ಲಿ ತಾವೇ ನಿಂತು ತೆರವುಗೊಳಿಸುವುದಾಗಿ ಶಾಸಕ ಹರೀಶ್ ಪೂಂಜ ಅವರಿಂದ ಡಿ.ಸಿ.ಎಫ್. ಅವರು ಲಿಖಿತ ಹೇಳಿಕೆ ಬರೆಸಿಕೊಂಡರು.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ ಅರಣ್ಯ ಇಲಾಖಾಧಿಕಾರಿಗಳನ್ನು ಜನಪ್ರತಿನಿಧಿಗಳು ಜಂಟಿ ಸರ್ವೇ ಮಾಡಲು ಒಪ್ಪಿಸುವ ಮೂಲಕ ತಾಲೂಕಿನ ಕಳೆಂಜ ಗ್ರಾಮದ ಅಮ್ಮಿನಡ್ಕ ಎಂಬಲ್ಲಿನ ಭೂ ವಿವಾದ ಅಂತ್ಯಗೊಂಡಿತು. ಅ.7ರಂದು ಅಮ್ಮಿನಡ್ಕದಲ್ಲಿ ಲೋಲಾಕ್ಷ ಎಂಬವರು ಮನೆಗಾಗಿ ಪಂಚಾಂಗ ನಿರ್ಮಿಸಿದ್ದನ್ನು ಅರಣ್ಯ ಇಲಾಖೆಯವರು ಯಾವುದೇ ಪೂರ್ವ ಸೂಚನೆ ಇಲ್ಲದೆ ಕಿತ್ತು ಬಿಸಾಡಿದ್ದರು. ಇದನ್ನು ತಿಳಿದ ಶಾಸಕ ಹರೀಶ ಪೂಂಜ ಅವರು ಸ್ಥಳಕ್ಕೆ ದೌಡಾಯಿಸಿ ಮನೆ ನಿರ್ಮಿಸುವಂತೆ ಸೂಚಿಸಿದ್ದರು. ಈ ಸಂದರ್ಭ ಇಲಾಖಾಧಿಕಾರಿಯವರಿಗೂ ಶಾಸಕರಿಗೂ ತೀವ್ರ ಮಾತಿನ ವಾಗ್ಯುದ್ಧ ನಡೆದಿತ್ತು. ಸರ್ವೇ ಆಗದೆ ಮನೆ ತೆರವು ಮಾಡಲಾಗುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಸಚಿವ ಈಶ್ವರ ಖಂಡ್ರೆ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಬಳಿಕ ಸಚಿವರು ಯಥಾಸ್ಥಿತಿ ಕಾಯ್ದು ಕೊಳ್ಳುವಂತೆ ಸೂಚಿಸಿದ್ದರು. ಈ ಮಧ್ಯೆ ಭಾನುವಾರ ಇಲಾಖೆಯವರು ಕರ್ತವ್ಯಕ್ಕೆ ಅಡ್ಡಿ ಹಿನ್ನೆಲೆಯಲ್ಲಿ ಅಲ್ಲಿನ 11 ಮಂದಿಯ ಮೇಲೆ ಪ್ರಕರಣ ದಾಖಲಿಸಿದ್ದರು. ಇಷ್ಟೆಲ್ಲ ಆದ ನಂತರವೂ ಅರಣ್ಯ ಇಲಾಖೆ ಸೋಮವಾರ ಮುಂಜಾನೆ ನೂರಾರು ಸಿಬ್ಬಂದಿಯೊಂದಿಗೆ ನಿರ್ಮಾಣ ಹಂತದಲ್ಲಿದ್ದ ಮನೆಯನ್ನು ಕಿತ್ತೆಸೆಯಲು ಮುಂದಾಯಿತು. ಇದನ್ನರಿತ ಶಾಸಕ ಪೂಂಜ ಮುಂಜಾನೆಯೇ ಸ್ಥಳಕ್ಕೆ ಧಾವಿಸಿ ಮಾನವ ಸರಪಳಿ ರಚಿಸಿ ಮನೆ ತೆರವಿಗೆ ತಡೆಯೊಡ್ಡಿದರು. ಈ ಸಂದರ್ಭ ಶಾಸಕರಾದ ರಾಜೇಶ್ ನಾಯ್ಕ, ಭಾಗೀರಥಿ ಮುರುಳ್ಯ, ಪ್ರತಾಪಸಿಂಹ ನಾಯಕ್ ಸಾಥ್ ನೀಡಿದರು. ಈ ಸಂದರ್ಭ ವಾತಾವರಣ ಇನ್ನಷ್ಟು ಉದ್ವಿಘ್ನಗೊಂಡಿತು. ಶಾಸಕರು ಜಂಟಿ ಸರ್ವೆಗೆ ಎಷ್ಟೇ ಒತ್ತಾಯಿಸಿದರೂ ಅಧಿಕಾರಿಗಳು ಒಪ್ಪದೇ ಇರುವುದು ಸಮಸ್ಯೆ ಇನ್ನಷ್ಟು ಕಗ್ಗಂಟಾಯಿತು. ಕೊನೆಗೆ ಶಾಸಕ ಪೂಂಜ, ಜಿಲ್ಲಾ ಅರಣ್ಯಾಧಿಕಾರಿ ವೆಲಂಟನಿ ಮರಿಯಪ್ಪ ಅವರಿಗೆ ದೂರವಾಣಿಯಲ್ಲಿ ಸಂಪರ್ಕಿಸಿ ಪರಿಸ್ಥಿತಿಯ ಮನವರಿಕೆ ಮಾಡಲು ಪ್ರಯತ್ನಿಸಿದರಾದರೂ ಪ್ರಯೋಜನವಾಗಲಿಲ್ಲ. ಪ್ರತಿಭಟನೆಗೆ ಶಾಸಕ ಭರತ್ ಶೆಟ್ಟಿ, ಉಮಾನಾಥ ನಾಯಕ್, ಪುತ್ತೂರಿನ ಹಿಂದೂ ನಾಯಕ ಅರುಣ್ ಕುಮಾರ್ ಪುತ್ತಿಲ, ಹಿರಿಯರಾದ ಕುಶಾಲಪ್ಪ ಗೌಡ ಸೇರಿಕೊಂಡರು. ಮಧ್ಯಾಹ್ನದ ವೇಳೆಗೆ ಜಿಲ್ಲಾ ಅರಣ್ಯಾಧಿಕಾರಿ ಪೋಲಿಸ್ ಬೆಟಾಲಿಯನ್ ಮೂಲಕ ಸ್ಥಳಕ್ಕೆ ಆಗಮಿಸಿದರು. ಈ ದೃಶ್ಯವನ್ನು ನೋಡಿದ ಅಲ್ಲಿನ ನಾಗರಿಕರು ಒಂದು ಕ್ಷಣ ಅತಂಕಿತರಾದರು. ಬಂದ ಕೂಡಲೆ ಅರಣ್ಯಾಧಿಕಾರಿ ಮನೆ ತೆರವುಗೊಳಿಸುವುದಾಗಿ ತಿಳಿಸಿದಾಗ, ಎಲ್ಲ ಶಾಸಕರು, ತೆರವುಗೊಳಿಸುವುದಾದರೆ 309 ಸರ್ವೇ ನಂಬರ್‌ಗೆ ಒಳಪಟ್ಟ ಎಲ್ಲ ಮನೆ ತೆರವುಗೊಳಿಸಿ, ಇಲ್ಲವೇ ಕಂದಾಯ, ಅರಣ್ಯ ಜಂಟಿ ಸರ್ವೇ ನಡೆಸಿ ಎಲ್ಲರಿಗೂ ಹಕ್ಕುಪತ್ರ ನೀಡಿ. ಬಡವರಿಗೊಂದು ನ್ಯಾಯ ಸಿರಿವಂತರಿಗೊಂದು ನ್ಯಾಯ ಬೇಡ ಎಂದು ಊರವರ ಜತೆಗೂಡಿ ಪಟ್ಟು ಹಿಡಿದರು. ಬಳಿಕ ವಿಚಾರ ಗಂಭೀರ ಸ್ವರೂಪ ಪಡೆಯುತ್ತಲೆ, ಡಿ.ಸಿ.ಎಫ್, ಎ.ಸಿ.ಎಫ್., ಆರ್.ಎಫ್.ಒ. ಘಟನೆ ಕುರಿತು ವಿಶ್ಲೇಷಿಸಿ, ಜಿಲ್ಲಾಧಿಕಾರಿಯೊಂದಿಗೆ ಮಾತುಕತೆ ನಡೆಸಿ, ತಹಸೀಲ್ದಾರ್ ಸಲಹೆ ಪಡೆದರು. ಬಳಿಕ ಆಗಮಿಸಿದ ಡಿ.ಸಿ.ಎಫ್., ಮನೆಮಂದಿ ಹಾಗೂ ಶಾಸಕರಲ್ಲಿ ಮಾತುಕತೆ ನಡೆಸಿ, 309 ಸರ್ವೇ ನಂಬರ್ ಗೆ ಒಳಪಟ್ಟಂತೆ ಸುಮಾರು 6000ಕ್ಕೂ ಅಧಿಕ ಎಕ್ರೆ ಭೂಮಿಯಿದೆ. ಅರಣ್ಯ ಹಾಗೂ ಕಂದಾಯ ಜಂಟಿ ಸರ್ವೇ ನಡೆಸಿದ ಬಳಿಕ ಮನೆ ತೆರವಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದರು. ಮಾತ್ರವಲ್ಲದೆ ಸದ್ಯ ಮನೆ ಯಥಾಸ್ಥಿತಿಯಲ್ಲಿ ಇರಿಸಬೇಕು, ಜಂಟಿ ಸರ್ವೇ ನಡೆಸುವವರೆಗೆ ಮನೆ ಮರು ನಿರ್ಮಾಣಕ್ಕೆ ಸಂಬಂಧಿಸಿ ಯಾವುದೇ ಕಾಮಗಾರಿ ನಡೆಸುವುದಿಲ್ಲ. ಒಂದು ವೇಳೆ ಮನೆ ಪ್ರದೇಶ ಅರಣ್ಯ ಎಂದಾದಲ್ಲಿ ತಾವೇ ನಿಂತು ತೆರವುಗೊಳಿಸುವುದಾಗಿ ಶಾಸಕ ಹರೀಶ್ ಪೂಂಜ ಅವರಿಂದ ಡಿ.ಸಿ.ಎಫ್. ಅವರು ಲಿಖಿತ ಹೇಳಿಕೆ ಬರೆಸಿಕೊಂಡರು. ಅಲ್ಲಿಗೆ ಪ್ರಕರಣ ಒಂದು ಹಂತಕ್ಕೆ ತಾತ್ಕಾಲಿಕ ಅಂತ್ಯ ಸಿಕ್ಕಂತಾಗಿದೆ. ಮುಂದೆ ಸರ್ವೇ ಕಾರ್ಯ ನಡೆಸಿ ಈ ನಿರ್ಧಾರಕ್ಕೆ ಬರಲಾಗುವುದು ಎಂದು ಡಿ.ಸಿ.ಎಫ್. ಭರವಸೆ ನೀಡಿದರು.