ಕನ್ನಡಪ್ರಭ ವಾರ್ತೆ ಮೈಸೂರು
ತೆರಿಗೆದಾರರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಯೋಜನೆಗಳನ್ನು ಅಧ್ಯಯನ ಮಾಡಿ, ತೆರಿಗೆ ಪಾವತಿದಾರರಿಗೆ ಸೂಕ್ತ ಸಲಹೆ ನೀಡಬೇಕು ಎಂದು ಆದಾಯ ತೆರಿಗೆ ಇಲಾಖೆ ಮೈಸೂರು ಜಂಟಿ ಆಯುಕ್ತ ಕಲ್ಪಲತಾ ರಾಜನ್ ಹೇಳಿದರು.ಕೇಂದ್ರ ಸರ್ಕಾರದ ಆದಾಯ ತೆರಿಗೆ ಇಲಾಖೆ ಕರ್ನಾಟಕ ಮತ್ತು ಗೋವಾ ವಿಭಾಗದ ವತಿಯಿಂದ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಎಸ್‌ಐ ಆರ್‌ಸಿ ಮೈಸೂರು ವಿಭಾಗ, ಇನ್ ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಮೈಸೂರು ವಿಭಾಗ, ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಟ್ಯಾಕ್ಸ್ ಪ್ರಾಕ್ಟೀಷನರ್ಸ್ ಆಫ್ ಇಂಡಿಯಾ ಸಹಯೋಗದಲ್ಲಿ ಆಯೋಜಿಸಿದ್ದ ಆದಾಯ ತೆರಿಗೆ ಕುರಿತು ಸಾರ್ವಜನಿಕ ಜಾಗೃತಿ ಕಾರ್ಯಕ್ರಮ ಹಾಗೂ ತೆರಿಗೆ ಕ್ಲಿನಿಕ್ ಉದ್ಘಾಟಿಸಿ ಅವರು ಮಾತನಾಡಿದರು.
ಆದಾಯ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ತಲೆದೋರುವ ಹಲವು ಕಾನೂನಾತ್ಮಕ ವಿವಾದ ಬಗೆಹರಿಸಿಕೊಳ್ಳಲು ವಿವಾದ ಪರಿಹಾರ ಆಯೋಗ ಹಲವು ಯೋಜನೆ ಜಾರಿಗೆ ತಂದಿದೆ. ಅವುಗಳ ಬಗ್ಗೆ ತೆರಿಗೆ ಸಲಹೆಗಾರರು ಅಧ್ಯಯನ ಮಾಡಿದ ಬಳಿಕ ತೆರಿಗೆ ಪಾವತಿದಾರರಿಗೆ ಸೂಕ್ತ ಸಲಹೆ-ಸೂಚನೆ ನೀಡಬೇಕು ಎಂದು ಅವರು ಹೇಳಿದರು.ಕಾನೂನಾತ್ಮಕವಾಗಿ ಲಭ್ಯವಿರುವುದನ್ನು ನಾವು ಸಮರ್ಪಕವಾಗಿ ಬಳಸಿಕೊಂಡು, ವ್ಯವಸ್ಥೆಯು ಸರಾಗವಾಗಿ ಕಾರ್ಯುನಿರ್ವಹಿಸುವಂತೆ ಮಾಡಬೇಕು. ಆಗ ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ಅನುಕೂಲ ವಮಾಡಿಕೊಡುತ್ತದೆ ಎಂದು ಅವರು ತಿಳಿಸಿದರು.
ಈಗ ಬ್ಯಾಂಕ್ ವಹಿವಾಟು ತಂತ್ರಜ್ಞಾನ ಅವಲಂಬಿಸಿದೆ. ಅಂತೆಯೇ ಆದಾಯ ತೆರಿಗೆ ಪಾವತಿದಾರರು, ತೆರಿಗೆ ಸಲಹೆಗಾರರು ಮತ್ತು ತೆರಿಗೆ ಇಲಾಖೆ ನಡುವೆ ಮುಖಾಮುಖಿ ಸಂವಹನ ಕಡಿಮೆಯಾಗಿದೆ. ಅಂತೆಯೇ ಆದಾಯ ತೆರಿಗೆ ಇಲಾಖೆ ಪ್ರಕ್ರಿಯೆ ಕೂಡ ಸಾಫ್ಟ್‌ವೇರ್‌ತಂತ್ರಜ್ಞಾನವನ್ನು ಅವಲಂಬಿಸಿದೆ ಎಂದು ಅವರು ಹೇಳಿದರು.ಐಸಿಟಿಪಿಐ ರಾಷ್ಟ್ರೀಯ ಅಧ್ಯಕ್ಷ ಶ್ರೀಧರ ಪಾರ್ಥಸಾರಥಿ ಪ್ರಾಸ್ತಾವಿಕ ನುಡಿನಗಳನ್ನಾಡಿದರು. ಮೈಸೂರಿನ ಡಿಸಿಐಟಿ ಎಂ.ಎಚ್. ಹುಸೇನ್ ಆದಾಯ ತೆರಿಗೆಯ ಅನುಷ್ಠಾನ, ಸಂಗ್ರಹ, ವಿತರಣೆ ಮುಂತಾದ ವಿಷಯ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಬಳ್ಳಾರಿಯ ಚಾರ್ಟರ್ಡ್ ಟ್ಯಾಕ್ಸ್ ಪ್ರಾಕ್ಟೀಷನರ್ ಎನ್. ಯಶವಂತ ರಾಜ್ ಅವರಿಗೆ ‘ತೆರಿಗೆ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಕೆ.ಬಿ. ಲಿಂಗರಾಜು, ಗೌರವ ಕಾರ್ಯದರ್ಶಿ ಎ.ಕೆ. ಶಿವಾಜಿರಾವ್, ಬೆಂಗಳೂರಿನ ಸಿಟಿಪಿ ಡಿ.ಎಂ. ಭಟ್ಟದ್, ಎಸ್‌ಐಆರ್‌ಸಿ ಸಿಎ ಉತ್ತಮ್ ಪಡಿವಾಲ್, ಸಿಎ ಕೌಶಿಕ್ ಎ.ರಾಜ್, ಡಾ.ಎನ್. ಸುಬ್ರಮಣಿಯನ್, ವೈಎನ್. ಶರ್ಮ, ಸಿ.ಎ. ರಾಮಚಂದ್ರ, ಎಸ್.ಎನ್. ಪ್ರಸಾದ್ ಮೊದಲಾದವರು ಇದ್ದರು.ಫೋಟೋ- 9ಎಂವೈಎಸ್ 1-
ಮೈಸೂರಿನಲ್ಲಿ ಸೋಮವಾರ ನಡೆದ ಆದಾಯ ತೆರಿಗೆ ಕುರಿತು ಸಾರ್ವಜನಿಕ ಜಾಗೃತಿ ಕಾರ್ಯಕ್ರಮ ಹಾಗೂ ತೆರಿಗೆ ಕ್ಲಿನಿಕ್ ಅನ್ನು ಆದಾಯ ತೆರಿಗೆ ಇಲಾಖೆ ಮೈಸೂರು ಜಂಟಿ ಆಯುಕ್ತ ಕಲ್ಪಲತಾ ರಾಜನ್ ಉದ್ಘಾಟಿಸಿದರು. ಐಸಿಟಿಪಿಐ ರಾಷ್ಟ್ರೀಯ ಅಧ್ಯಕ್ಷ ಶ್ರೀಧರ ಪಾರ್ಥಸಾರಥಿ, ಡಿಸಿಐಟಿ ಎಂ.ಎಚ್. ಹುಸೇನ್, ಎಂಸಿಸಿಐ ಅಧ್ಯಕ್ಷ ಕೆ.ಬಿ. ಲಿಂಗರಾಜು, ಎ.ಕೆ. ಶಿವಾಜಿರಾವ್, ಡಿ.ಎಂ. ಭಟ್ಟದ್ ಮೊದಲಾದವರು ಇದ್ದಾರೆ.