ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ತಹಸೀಲ್ದಾರ್
ಕನ್ನಡಪ್ರಭ ವಾರ್ತೆ ಕಂಪ್ಲಿಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಬುಧವಾರ ಕಲ್ಯಾಣ ಕರ್ನಾಟಕ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ತಹಸೀಲ್ದಾರ್ ಜೂಗಲ ಮಂಜುನಾಯಕ ರಾಷ್ಟ್ರೀಯ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಧ್ವಜಾರೋಹಣದ ನಂತರ ಮಾತನಾಡಿದ ತಹಸೀಲ್ದಾರ್, ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಸಾಧನೆಗೆ ಯುವಕರ ಪಾತ್ರ ಅತ್ಯಂತ ಪ್ರಮುಖ. ಸರ್ಕಾರ ನೀಡುತ್ತಿರುವ ಸೌಲಭ್ಯಗಳು ಮತ್ತು ವಿಶೇಷ ಹಕ್ಕುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ, ಯುವಜನತೆ ಉತ್ತಮ ಶೈಕ್ಷಣಿಕ ಅವಕಾಶಗಳನ್ನು ಪಡೆದು ಸೂಕ್ತ ಹುದ್ದೆಗಳಲ್ಲಿ ಸೇವೆ ಸಲ್ಲಿಸಬಹುದು. ಕಲ್ಯಾಣ ಕರ್ನಾಟಕವನ್ನು ಹಿಂದುಳಿದ ಭಾಗವೆಂದು ಕಾಣದೆ, ಅಭಿವೃದ್ಧಿಯ ದಾರಿಯಲ್ಲಿ ಮುನ್ನಡೆಸುವ ಜವಾಬ್ದಾರಿ ಯುವಕರ ತೆಗೆದುಕೊಳ್ಳಬೇಕು ಎಂದರು.ಚಿಕ್ಕಜಾಯಿಗನೂರಿನ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಮುದುಕಪ್ಪ ನೆಲಜೇರಿ, ಕಲ್ಯಾಣ ಕರ್ನಾಟಕ ವಿಮೋಚನೆಯ ಇತಿಹಾಸ ಕುರಿತಂತೆ ಉಪನ್ಯಾಸ ನೀಡಿ 371 (ಜೆ) ವಿಧಾನದಡಿ ಕಲ್ಯಾಣ ಕರ್ನಾಟಕಕ್ಕೆ ದೊರೆಯುತ್ತಿರುವ ಸೌಲಭ್ಯಗಳು ಈ ಭಾಗದ ಅಭಿವೃದ್ಧಿಗೆ ವರದಾನ. ಯುವಕರು ಶಿಕ್ಷಣ, ಉದ್ಯೋಗ ಮತ್ತು ಉದ್ಯಮಶೀಲತೆಯ ಕಡೆ ಹೆಚ್ಚು ಗಮನ ಹರಿಸಿ ಈ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡರೆ, ಕಲ್ಯಾಣ ಕರ್ನಾಟಕವನ್ನು ಶ್ರೀಮಂತ ಪ್ರದೇಶವನ್ನಾಗಿ ರೂಪಿಸಬಹುದು. ಕಲ್ಯಾಣ ಕರ್ನಾಟಕವು ಹಿಂದುಳಿದ ಭಾಗವಲ್ಲ, ಕಲ್ಯಾಣ, ಸಂಸ್ಕೃತಿ ಮತ್ತು ಶ್ರೀಮಂತಿಕೆಯ ನೆಲೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಗ್ರೇಡ್-2 ತಹಸೀಲ್ದಾರ್ ಎಂ.ಆರ್. ಷಣ್ಮುಖ, ತಾಪಂ ಇಒ ಆರ್.ಕೆ. ಶ್ರೀಕುಮಾರ್, ಎಡಿ ಕೆ.ಎಸ್. ಮಲ್ಲನಗೌಡ, ಶಿರಸ್ತೇದಾರರಾದ ಜಿ.ಪಂಪಾಪತಿ, ಎಸ್.ಡಿ. ರಮೇಶ್, ಕಂದಾಯ ಅಧಿಕಾರಿ ವೈ.ಎಂ. ಜಗದೀಶ್, ಇಸಿಒಗಳಾದ ಟಿ.ಎಂ. ಬಸವರಾಜ, ಎಂ. ರೇವಣ್ಣ, ನಿಲಯಪಾಲಕ ಕೆ. ವಿರುಪಾಕ್ಷಪ್ಪ ಹಾಗೂ ಪ್ರಮುಖರಾದ ಕೆ.ಎಂ. ಹೇಮಯ್ಯಸ್ವಾಮಿ, ಕರೇಕಲ್ ಮನೋಹರ, ಕಾಳಿಂಗವರ್ಧನ ಹಾದಿಮನಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.