ಕಲ್ಯಾಣೋತ್ಸವಗಳು ಭಗವಂತನನ್ನು ಸಂತೃಪ್ತಗೊಳಿಸುತ್ತವೆ: ನಂಜಾವಧೂತ ಸ್ವಾಮೀಜಿ

KannadaprabhaNewsNetwork | Published : Feb 24, 2024 2:30 AM

ಸಾರಾಂಶ

ಕಲ್ಯಾಣೋತ್ಸವಗಳು ಭಗವಂತನನ್ನು ಸಂತೃಪ್ತಗೊಳಿಸುತ್ತವೆ, ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಸಂತೃಪ್ತನಾದರೆ ಭಕ್ತರ ಇಷ್ಟಾರ್ಥ ಸಿದ್ಧಿಗೊಳ್ಳಲಿದೆ ಎಂದು ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ

ಕಲ್ಯಾಣೋತ್ಸವಗಳು ಭಗವಂತನನ್ನು ಸಂತೃಪ್ತಗೊಳಿಸುತ್ತವೆ, ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಸಂತೃಪ್ತನಾದರೆ ಭಕ್ತರ ಇಷ್ಟಾರ್ಥ ಸಿದ್ಧಿಗೊಳ್ಳಲಿದೆ ಎಂದು ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಹೇಳಿದರು.

ತಾಲೂಕಿನ ಗೌಡಗೆರೆ ಹೋಬಳಿಯ ಮೊಸರ ಕುಂಟೆ ಗ್ರಾಮದ ಶುಕ್ರವಾರ ನಡೆದ ಪ್ರಸಿದ್ಧ ಲಕ್ಷ್ಮಿ ರಂಗನಾಥ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಜಗತ್ತಿನ ಮನುಕುಲದ ಒಳಿತಿನ ಸಂಕಲ್ಪದೊಂದಿಗೆ ನಡೆಸುವ ಇಂತಹ ಕಲ್ಯಾಣೋತ್ಸವಗಳು ನಾಡು ಮತ್ತು ತಮ್ಮ ತಮ್ಮ ಗ್ರಾಮಗಳಿಗೆ ಸುಭಿಕ್ಷೆ ಕರುಣಿ ಸಲಿದೆ. ಜೀವನ ಕೂಡ ಸಮ ಚಿತ್ತದಿಂದ ಸ್ವೀಕರಿಸಿದಾಗ ಎಲ್ಲವೂ ಸುಲಲಿತ ಅನಿಸಲಿದೆ ಎಂದರು.

ಎಲ್ಲವರು ನಮ್ಮವರೇ ಎಂಬ ಭಾವನೆಯೊಂದಿಗೆ ನಾಡ ಪ್ರಭು ಕೆಂಪೇಗೌಡ ಅವರು ಕಟ್ಟಿದ ಗೌಡ ಸಾಮ್ರಾಜ್ಯ ಜನರಿಗಾಗಿ ಬದುಕುವ ಒಕ್ಕಲಿಗರ ಮನಸ್ಥಿತಿಯನ್ನು ಸಾಕ್ಷಿಕರಿಸುತ್ತದೆ. ಕೆಂಪೇಗೌಡರು ಬೆಂಗಳೂರು ಕಟ್ಟಿದ ಕಾರಣ ಬೆಂಗಳೂರಿಗೆ ವಿಶ್ವಮಟ್ಟದ ಖ್ಯಾತಿ ದೊರೆಕಿದ್ದು, ಸರ್ಕಾರಗಳಿಗೆ ಶೇ.೬೦ರಷ್ಟು ಆದಾಯವನ್ನು ಬೆಂಗಳೂರು ನಗರ ನೀಡುತ್ತಿದೆ ಎಂದರೆ ಅದಕ್ಕೆ ಕೆಂಪೇಗೌಡರ ದೂರದೃಷ್ಟಿ ಯೋಜನೆಗಳೇ ಕಾರಣ, ಪ್ರತಿಯೊಬ್ಬರೂ ದೇಶ ಮತ್ತು ನೆಲಕ್ಕಾಗಿ ದುಡಿಯುವ ಸಂಕಲ್ಪ ಮಾಡಬೇಕು ಎಂದರು.

ಲಕ್ಷ್ಮಿ ರಂಗನಾಥ ಸ್ವಾಮಿ ಕಲ್ಯಾಣೋತ್ಸವದಲ್ಲಿ ರಾಜ್ಯದ ನಾನಾ ಜಿಲ್ಲೆಗಳ ಆಗಮಿಸಿದ್ದ ಸಾವಿರಾರು ಭಕ್ತರು ಕಲ್ಯಾಣೋತ್ಸವ ಕಣ್ತುಂಬಿಕೊಂಡರು. ಕಲ್ಯಾಣೋತ್ಸವದಲ್ಲಿ ಪಾಲ್ಗೊಂಡು ಭಕ್ತರಿಗೆ ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಲಕ್ಷ್ಮಿ ರಂಗನಾಥ ಸ್ವಾಮಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಜಣ್ಣ, ಗೌರವಾಧ್ಯಕ್ಷ ಟಿ. ಶ್ರೀನಿವಾಸ್ ಮೂರ್ತಿ, ತಾವರೆಕೆರೆ ಗ್ರಾಮ ಪಂಚಾಯತಿ ಸದಸ್ಯ ಟಿ. ಶ್ರೀನಿವಾಸ್, ಮುಖಂಡರಾದ ವೆಂಕಟೇಶ್ ಗೌಡ ಸತ್ಯನಾರಾಯಣ ಎಂ.ಟಿ. ರಂಗನಾಥ್, ಬಂಡಿ ಶ್ರೀರಂಗನಾಥ ಸ್ವಾಮಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಟಿ.ಸಿ. ದೇವರಾಜು, ಮುಖಂಡರಾದ ಎಸ್.ಡಿ. ಗೌಡ, ದೊಡ್ಡ ರಂಗಪ್ಪ, ಮಂಜಣ್ಣ, ರಂಗನಾಥಪ್ಪ, ಪುಟ್ಟಣ್ಣ , ಭೂತಣ್ಣ ಸೇರಿದಂತೆ ಸಾವಿರಾರು ಭಕ್ತರು ಉಪಸ್ಥಿತರಿದ್ದರು.

Share this article