ಕನಕ ಸಮುದಾಯ ಭವನ ಎಲ್ಲ ಜಾತಿಯವರಿಗೂ ಉಪಯೋಗವಾಗಲಿ-ಯತೀಂದ್ರ ಸಿದ್ದರಾಮಯ್ಯ

KannadaprabhaNewsNetwork |  
Published : Jul 06, 2025, 11:48 PM IST
6ಎಂಡಿಜಿ1. ಮುಂಡರಗಿಯಲ್ಲಿ ಭಾನುವಾರ ಕರ್ನಾಟಕ ಪ್ರದೇಶ ಕುರುಬರ ಸಂಘ ತಾಲೂಕಾ ಘಟಕದ ಆಶ್ರಯದಲ್ಲಿ ಜರುಗಿದ ಕನಕ ಸಮುದಾಯ ಭವನದ ಶಂಕು ಸ್ಥಾಪನೆ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಉದ್ಘಾಟಿಸಿದರು.  | Kannada Prabha

ಸಾರಾಂಶ

ಮುಂಡರಗಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಕನಕ ಸಮುದಾಯ ಭವನವು ಕೇವಲ ಹಾಲುಮತ ಸಮುದಾಯಕ್ಕೆ ಮಾತ್ರ ಮೀಸಲಿರದೇ, ಜಾತ್ಯತೀತವಾಗಿ ಎಲ್ಲ ಜನಾಂಗದವರಿಗೆ ಕಡಿಮೆ ವೆಚ್ಚದಲ್ಲಿ ಬಾಡಿಗೆಗೆ ದೊರೆಯುವಂತಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಮುಂಡರಗಿ: ಮುಂಡರಗಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಕನಕ ಸಮುದಾಯ ಭವನವು ಕೇವಲ ಹಾಲುಮತ ಸಮುದಾಯಕ್ಕೆ ಮಾತ್ರ ಮೀಸಲಿರದೇ, ಜಾತ್ಯತೀತವಾಗಿ ಎಲ್ಲ ಜನಾಂಗದವರಿಗೆ ಕಡಿಮೆ ವೆಚ್ಚದಲ್ಲಿ ಬಾಡಿಗೆಗೆ ದೊರೆಯುವಂತಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಅವರು ಭಾನುವಾರ ಪಟ್ಟಣದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲೂಕು ಘಟಕದ ವತಿಯಿಂದ ನಿರ್ಮಾಣವಾಗುತ್ತಿರುವ ಕನಕ ಸಮುದಾಯ ಭವನ ಕಟ್ಟಡಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

4 ಕೋಟಿ ರು.ಗಳ ವೆಚ್ಚದಲ್ಲಿ ಈ ಕನಕ ಸಮುದಾಯ ಭವನ ನಿರ್ಮಾಣವಾಗುತ್ತಿದ್ದು, ಈಗಾಗಲೇ ಸರ್ಕಾರ1.50 ಕೋಟಿ ರು.ಗಳ ಅನುದಾನ ನೀಡಿದ್ದು, ಅದರಲ್ಲಿ 32 ಲಕ್ಷ ಹಣ ಬಿಡುಗಡೆಯಾಗಿದೆ ಎಂದರು.

ಈ ಕಟ್ಟಡ ಪೂರ್ಣಗೊಳ್ಳಲು ಇನ್ನೂ 2.50 ಕೋಟಿ ರು.ಗಳ ಅನುದಾನ ಅವಶ್ಯವಿದ್ದು, ಈಗಾಗಲೇ ಶಿರಹಟ್ಟಿ ಶಾಸಕರೂ ತಮ್ಮ ಅನುದಾನದಲ್ಲಿ ಹಣ ನೀಡುವುದಾಗಿ ಹೇಳಿದ್ದು, ನಾನು ಸಹ ಪರಿಷತ್ ಸದಸ್ಯನಾಗಿ ನನ್ನ ಶಾಸಕರ ಅನುದಾನದಲ್ಲಿ 25 ಲಕ್ಷ ರು.ಗಳ ಅನುದಾನ ಕೊಡುವುದಾಗಿ ಭರವಸೆ ನೀಡಿದರು. ಉಳಿದ ಹಣವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅದನ್ನು ಸಹ ಇದೇ ಅವಧಿಯಲ್ಲಿ ಬಿಡುಗಡೆ ಮಾಡಿಸಿ ನಮ್ಮ ಸರ್ಕಾರದ ಅವಧಿಯಲ್ಲಿಯೇ ಈ ಸಮುದಾಯ ಭವನ ನಿರ್ಮಾಣವಾಗುವಂತೆ ಮಾಡುವೆ ಎಂದರು.

ಕನಕ ಸಮುದಾಯ ಭವನ ಕಟ್ಟಡಕ್ಕೆ ಶಂಕು ಸ್ಥಾಪನೆ ನೆರವೇರಿಸಿ ರೋಣ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಮುಂಡರಗಿ ಪಟ್ಟಣದಲ್ಲಿ ಹಾಲುಮತ ಸಮಾಜ ಬಾಂಧವರು ಜಾಗೆ ಖರೀದಿಸಿ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸುತ್ತಿದ್ದು, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಫಕ್ಕೀರಪ್ಪ ಹೆಬಸೂರ ಅವರು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕನಕ ಸಮುದಾಯ ಭವನ ನಿರ್ಮಾಣಕ್ಕೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದು, ಆ ಪ್ರಕಾರ ಇಂದು ಮುಂಡರಗಿಯಲ್ಲಿ ನಿರ್ಮಾಣಗೊಳ್ಳುತ್ತಿದೆ. ಕೆಲವರು ಸರ್ಕಾರದಲ್ಲಿ ಹಣವಿಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದು, ಸರ್ಕಾರದಲ್ಲಿ ಹಣವಿಲ್ಲದಿದ್ದರೆ ಇಂತಹ ಸಮುದಾಯ ಭವನಗಳಿಗೆ ಹೇಗೆ ಹಣ ಬಿಡುಗಡೆಯಾಗುತ್ತಿತ್ತು ಎಂದರು. ರಚನಾತ್ಮಕ ಕೆಲಸಗಳಿಗೆ ರಾಜ್ಯ ಸರ್ಕಾರದಲ್ಲಿ ಹಣಕಾಸಿನ ಕೊರತೆ ಇಲ್ಲ. 14-15 ಬಜೆಟ್‌ಗಳನ್ನು ಮಂಡಿಸಿದ ಒಬ್ಬ ಅನುಭವಿ, ಧೀಮಂತ ಮುಖ್ಯಮಂತ್ರಿ ನಮ್ಮ ಜತೆಗೆ ಇದ್ದಾರೆ. ಹೀಗಾಗಿ ರಾಜ್ಯದ ಅಭಿವೃದ್ಧಿಗೆ ಎಲ್ಲಿಯೂ ಹಣಕಾಸಿನ ಕೊರತೆ ಆಗುವುದಿಲ್ಲ. ಸಾರ್ವಜನಿಕರು ಇದಕ್ಕೆ ಕಿವಿಗೊಡಬಾರದು ಎಂದರು.

ಅತಿಥಿಯಾಗಿ ಪಾಲ್ಗೊಂಡಿದ್ದ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ನನ್ನ ಕ್ಷೇತ್ರದಲ್ಲಿ ನಿರ್ಮಾಣವಾಗುತ್ತಿರುವ ಹಾಲುಮತ ಸಮಾಜ ಬಾಂಧವರ ಕನಕ ಸಮುದಾಯ ಭವನಕ್ಕೆ ಸರ್ಕಾರ ಅನುದಾನ ನೀಡಿದ್ದಕ್ಕಾಗಿ ನಾನು ಸರ್ಕಾರಕ್ಕೆ ಅಭಿನಂದಿಸುವುದರ ಜತೆಗೆ ಈ ಸಮುದಾಯ ಭವನಕ್ಕೆ ತಮ್ಮ ಶಾಸಕರ ಅನುದಾನದಲ್ಲಿ ಹಣ ನೀಡುವುದಾಗಿ ತಿಳಿಸಿದರು. ನಾನು ಈ ಕ್ಷೇತ್ರದ ಶಾಸಕನಾಗಿ ಯತೀಂದ್ರ ಸಿದ್ದರಾಮಯ್ಯನವರ ಮೂಲಕ ಮುಖ್ಯಮಂತ್ರಿಗಳಿಗೆ ನನ್ನ ಹಾಗೂ ರೋಣ ಕ್ಷೇತ್ರದ ಕೆಲವು ಅಭಿವೃದ್ಧಿ ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದು, ಶಿರಹಟ್ಟಿ, ರೋಣ ಮತ್ತು ಗದಗ ಮೂರು ಮತಕ್ಷೇತ್ರಗಳಲ್ಲಿ ಬರುವ 197 ಕೋಟಿ ರು.ಗಳ ಜಾಲವಾಡಗಿ ಏತ ನೀರಾವರಿ ಯೋಜನೆಯು ಟೆಂಡರ್ ಪ್ರಕ್ರಿಯೆಯಲ್ಲಿದ್ದು, ಅದನ್ನು ತಕ್ಷಣವೇ ಮಾಡಿಸಿಕೊಡಬೇಕು. ಮುಂಡರಗಿ ಪಟ್ಟಣದಲ್ಲಿ ಇದುವರೆಗೂ ಒಂದು ಸರ್ಕಾರಿ ಪ್ರೌಢಶಾಲೆ ಇಲ್ಲದೇ ಇಲ್ಲಿನ ಮಕ್ಕಳಿಗೆ ಸಾಕಷ್ಟು ತೊಂದರೆಯಾಗುತ್ತಿದ್ದು, ತಕ್ಷಣವೇ ಇಲ್ಲೊಂದು ಮಂಜೂರು ಮಾಡಿಸಬೇಕು, ಶಿರಹಟ್ಟಿ, ಮುಂಡರಗಿ ಮತ್ತು ರೋಣ ಕ್ಷೇತ್ರಗಳಿಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನ ಮಂಜೂರು ಮಾಡಿಸಬೇಕೆಂದು ಮನವಿ ಮಾಡಿಕೊಂಡರು.

ಶಿವಲಿಂಗಯ್ಯ ಗುರುವಿನ ಸಾನಿಧ್ಯ ವಹಿಸಿದ್ದರು. ತಾಲೂಕು ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಮಂಜುನಾಥ ಮುಂಡವಾಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಡಿ. ಮೋರನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಫಕ್ಕೀರಪ್ಪ ಹೆಬಸೂರ, ವೈ.ಎನ್. ಗೌಡರ್, ವಾಸಣ್ಣ ಕುರುಡಗಿ, ರಾಮಕೃಷ್ಣ ರೊಳ್ಳಿ, ಚಂದ್ರಹಾಸ ಉಳ್ಳಾಗಡ್ಡಿ, ಶಿವಪ್ಪ ಚಿಕ್ಕಣ್ಣವರ, ಹೇಮಂತಗೌಡ ಪಾಟೀಲ, ಶಾಂತವ್ವ ಬಳ್ಳಾರಿ, ಎಸ್.ಡಿ. ಮಕಾಂದಾರ, ಶೇಖರ ಜುಟ್ಲಣ್ಣವರ, ರುದ್ರಗೌಡ ಪಾಟೀಲ, ಹೇಮಗಿರೀಶ ಹಾವಿನಾಳ, ಎಸ್.ಬಿ. ರಾಮೇನಹಳ್ಳಿ, ಡಾ. ಬಿ.ಎಸ್. ಮೇಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ರಾಘವೇಂದ್ರ ಕುರಿಯವರ ಸ್ವಾಗತಿಸಿ, ಷಣ್ಮುಕ ಕುರಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ