ಕನ್ನಡಪ್ರಭ ವಾರ್ತೆ ಕನಕಗಿರಿ
ಇಲ್ಲಿನ ಕನಕಾಚಲಪತಿ ರಥದ ಬಲಭಾಗದ ಚಕ್ರಕ್ಕೆ ಹುಳುಕು, ಬಿರುಕು ಕಾಣಿಸಿಕೊಂಡಿರುವುದನ್ನು ಪರಿಶೀಲಿಸಿರುವ ದೇವಸ್ಥಾನದ ಆಡಳಿತ ಮಂಡಳಿ ತೆಪೆ ಕಾರ್ಯ ಮಾಡಿದೆ.ಬಲಭಾಗದ ಚಕ್ರದ ಹೊರಭಾಗದಲ್ಲಿ ಹುಳುಕು ಹಾಗೂ ಒಳಭಾಗದಲ್ಲಿ ಬಿರುಕು ಕಾಣಿಸಿಕೊಂಡಿರುವ ಕುರಿತು ಕನ್ನಡಪ್ರಭ ಮಾ.24ರಂದು ವಿಸ್ತೃತ ವರದಿ ಪ್ರಕಟಿಸಿದ ಹಿನ್ನೆಲೆ ಎಚ್ಚೆತ್ತುಕೊಂಡ ದೇವಸ್ಥಾನ ಆಡಳಿತ ಮಂಡಳಿಯವರು ತಾತ್ಕಾಲಿಕವಾಗಿ ತೆಪೆ ಕಾರ್ಯ ಮಾಡಿದ್ದಾರೆ. ಐದು ಅಡಿ ಉದ್ದ ಹೊಂದಿದ ಸಾಗುವಾನಿ ಕಟ್ಟಿಗೆ ತುಂಡನ್ನು ತೆಪೆ ಕಾರ್ಯಕ್ಕೆ ಬಳಸಲಾಗಿದೆ.
ರಥೋತ್ಸವ ನಂತರ ಕಾಮಗಾರಿ:ರಥೋತ್ಸವದೊಳಗಾಗಿ ಈ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಸಮಯವಕಾಶ ಬೇಕಾಗಿದ್ದರಿಂದ ರಥೋತ್ಸವದ ನಂತರ ದಿನಗಳಲ್ಲಿ ಈ ಚಕ್ರವನ್ನು ಹೊರ ತೆಗೆದು ಕೆಲಸ ಪೂರ್ಣಗೊಳಿಸುವ ಯೋಚನೆ ದೇವಸ್ಥಾನ ಆಡಳಿ ಮಂಡಳಿಯದ್ದಾಗಿದೆ. ಗಾಲಿಗೆ ಹುಳುಕು, ಬಿರುಕು ಕಾಣಿಸಿಕೊಂಡಿರುವುದು ವರದಿಯಾಗುತ್ತಿದ್ದಂತೆ ತಹಸೀಲ್ದಾರ ಹಾಗೂ ದೇವಸ್ಥಾನ ಕಾರ್ಯನಿರ್ವಾಹಣಾಧಿಕಾರಿಯೂ ಆಗಿರುವ ವಿಶ್ವನಾಥ ಮುರುಡಿ ಗುತ್ತಿಗೆ ನಿರ್ವಹಣೆ ಹೊತ್ತ ಕೊಟ್ಟೂರಿನ ಶ್ರೀ ಸಾಯಿ ಎಂಜಿನಿಯರಿಂಗ್ ವರ್ಕ್ಸ್ ಪರಿಶೀಲಿಸಿದ್ದು, ರಥೋತ್ಸವ ನಡೆಸಲು ಯಾವುದೇ ಸಮಸ್ಯೆಯಿಲ್ಲ. ರಥೋತ್ಸವದ ನಂತರ ದುರಸ್ತಿ ಭರವಸೆ ನೀಡಿದ್ದರಿಂದ ದೇವಸ್ಥಾನ ಆಡಳಿತ ಮಂಡಳಿ ಈ ತೆಪೆ ಕಾರ್ಯ ಮಾಡಿದೆ.ಸೂಕ್ತ ಕ್ರಮಕ್ಕೆ ಮುಂದಾಗುವಂತೆ ಒತ್ತಾಯ:
ಆಸ್ಟ್ರೇಲಿಯನ್ ಹೊನ್ನಿ ಕಟ್ಟಿಗೆ ಗಟ್ಟಿಮುಟ್ಟಾಗಿದ್ದು, ಇದು 10ರಿಂದ 15 ವರ್ಷ ಬಾಳಿಕೆ ಬರುತ್ತದೆ ಎನ್ನುವ ಗುತ್ತಿಗೆದಾರರ ಹಾಗೂ ಅಧಿಕಾರಿಗಳ ಮಾತಿಗೆ ಅಂದು ಭಕ್ತರ ಸಮ್ಮತಿಸಿ ರಥಕ್ಕೆ ಆರು ಗಾಲಿಗೆ ಇದೇ ಕಟ್ಟಿಗೆ ಬಳಸಲಾಗಿತ್ತು. ಆದರೆ ನಾಲ್ಕೇ ವರ್ಷದಲ್ಲಿ ಈ ರೀತಿಯಾಗಿದ್ದು, ದೇವಸ್ಥಾನದ ಹಣ ಸದ್ಭಳಕೆಯಾಗದಂತಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಪರಿಶೀಲಿಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.