ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕನಕದಾಸರ ಜಯಂತಿಯನ್ನು ನ.8 ರಂದು ಜಿಲ್ಲಾ ಕೇಂದ್ರದಲ್ಲಿ ಅದ್ಧೂರಿಯಾಗಿ ಆಚರಿಸಲಾಗುವುದು, ಈ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.ಕನಕದಾಸರ ಜಯಂತಿ ಆಚರಣೆ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ಬಾರಿಯೂ ಕನಕದಾಸರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ನ.08 ರಂದು ಜಿಲ್ಲಾ ಕೇಂದ್ರದಲ್ಲಿ ಆಚರಿಸಲಾಗುವುದು. ಸಮಾಜದವರ ಆಶಯದಂತೆ ನಗರದ ಹೊಳಲ್ಕೆರೆ ರಸ್ತೆಯಲ್ಲಿರುವ ಕನಕ ವೃತ್ತ ಬಳಿ ಬೃಹತ್ ವೇದಿಕೆ ನಿರ್ಮಿಸಿ ಸಮಾರಂಭವನ್ನು ಅಂದು ಬೆಳಗ್ಗೆ 11.30ಕ್ಕೆ ನಡೆಸಲಾಗುವುದು.
ಕಾರ್ಯಕ್ರಮದಲ್ಲಿ ಕನಕದಾಸರ ಕೀರ್ತನೆಗಳ ಗೀತ ಗಾಯನ ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ ಏರ್ಪಡಿಸಲಾಗುವುದು. ಅಂದು ಕನಕ ವೃತ್ತ ಬಳಿಯ ಕನಕದಾಸರ ಪುತ್ಥಳಿಗೆ ಹಾಗೂ ಮಾಳಪ್ಪನಹಟ್ಟಿ ರಸ್ತೆಯಲ್ಲಿನ ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಗಣ್ಯರಿಂದ ಮಾಲಾರ್ಪಣೆ ನೆರವೇರಿಸಲಾಗುವುದು. ಹೀಗಾಗಿ ಎರಡೂ ವೃತ್ತಗಳಲ್ಲಿ ನಗರಸಭೆ ವತಿಯಿಂದ ಸ್ವಚ್ಛತೆ ಕೈಗೊಳ್ಳಬೇಕು. ಕನಕ ವೃತ್ತದಲ್ಲಿನ ನೀರಿನ ಕಾರಂಜಿಯನ್ನು ಕಾರ್ಯ ನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು. ಅಲ್ಲದೆ ನಗರದ ಎಲ್ಲ ವೃತ್ತಗಳಲ್ಲಿಯೂ ದೀಪಾಲಂಕಾರ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.ವೇದಿಕೆ ಕಾರ್ಯಕ್ರಮ ಮುಕ್ತಾಯವಾದ ಬಳಿಕ ಕನಕ ವೃತ್ತದಿಂದಲೇ ಕನಕದಾಸರ ಭಾವಚಿತ್ರದ ಮೆರವಣಿಗೆಯನ್ನು ಪ್ರಾರಂಭಿಸಿ, ಪ್ರಮುಖ ರಸ್ತೆಗಳಲ್ಲಿ ಸಾಗಿ, ಕುರುಬರ ಹಾಸ್ಟೆಲ್ ವರೆಗೆ ನೆರವೇರಿಸಲಾಗುವುದು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳನ್ನು ನಿಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಈಗಾಗಲೆ ಜಿಲ್ಲೆಯಲ್ಲಿ ಡಿಜೆ ಯನ್ನು ಶಾಶ್ವತವಾಗಿ ನಿಷೇಧಿಸಲಾಗಿದ್ದು ಸಮಾಜದವರ ಕೋರಿಕೆಯಂತೆ 4 ಸ್ಪೀಕರ್ ಗಳನ್ನೊಳಗೊಂಡ ಧ್ವನಿವರ್ಧಕ ಬಳಕೆಗೆ ಅವಕಾಶ ಮಾಡಿಕೊಡಲಾಗುವುದು. ಅನುಮತಿಸಿದ ಸಾಮರ್ಥ್ಯಕ್ಕಿಂತ ಹೆಚ್ಚಿನ ಡೆಸಿಬಲ್ ಶಬ್ದ ಹೊರಸೂಸುವ ಧ್ವನಿವರ್ಧಕ ಸ್ಪೀಕರ್ ಬಳಸಿದ್ದು ಕಂಡುಬಂದಲ್ಲಿ ಸಂಬಂಧಿಸಿದವರ ವಿರುದ್ಧ ಎಫ್‍ಐಆರ್ ದಾಖಲಿಸಲಾಗುವುದು ಎಂದು ತಿಳಿಸಿದರು.ನ.8ರಂದು ಕನಕದಾಸರ ಜಯಂತಿ ಅಂಗವಾಗಿ ಬೆಳಗ್ಗೆ ಹಾಗೂ ಸಂಜೆ ನಗರದಲ್ಲಿ ಸೂಕ್ತ ಹಾಗೂ ಸುಗಮವಾಗಿ ಸಂಚಾರ ವ್ಯವಸ್ಥೆ ಕೈಗೊಳ್ಳುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಳ್ಳಬೇಕು. ವಾಹನಗಳ ಸಂಚಾರದಲ್ಲಿ ವ್ಯತ್ಯಯವಾಗದ ರೀತಿ ಪರ್ಯಾಯ ಮಾರ್ಗ ಬದಲಾವಣೆ ಕೈಗೊಳ್ಳಬೇಕು. ಎಲ್ಲ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು. ಸರ್ಕಾರ ಕನಕದಾಸರ ಜಯಂತಿ ದಿನದಂದು ರಜೆ ಘೋಷಿಸಿರುವುದು ಕಾರ್ಯಕ್ರಮದಲ್ಲಿ ಭಾಗಿಯಾಗಿ ಅರ್ಥಪೂರ್ಣವಾಗಿ ಆಚರಿಸಲಿ ಎಂದು ಮನೆಯಲ್ಲಿ ಕುಳಿತುಕೊಳ್ಳಲು ಅಲ್ಲ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಕನಕದಾಸರ ಜಯಂತಿ ಸರ್ಕಾರಿ ಕಾರ್ಯಕ್ರಮವಾಗಿರುವುದರಿಂದ, ಅಂದು ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಲ್ಲಿ, ಗ್ರಾಮ ಪಂಚಾಯತಿಗಳಲ್ಲಿ, ನಗರ, ಸ್ಥಳೀಯ ಸಂಸ್ಥೆಗಳಲ್ಲಿ ತಪ್ಪದೆ ಜಯಂತಿ ಆಚರಣೆ ಕೈಗೊಳ್ಳಬೇಕು. ಈ ಕುರಿತಂತೆ ಸಂಬಂಧಪಟ್ಟ ಅಧಿಕಾರಿಗಳು ಸುತ್ತೋಲೆ ಮೂಲಕ ನಿರ್ದೇಶನ ನೀಡಬೇಕು ಎಂದು ಸೂಚನೆ ನೀಡಿದರು.ಸಭೆಯಲ್ಲಿ ಉಪ ವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ, ಡಿಡಿಪಿಐ ಮಂಜುನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಗುರುನಾಥ್, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಶ್ರೀರಾಮ್, ಪ್ರಧಾನ ಕಾರ್ಯದರ್ಶಿ ಬಿ.ಟಿ. ಜಗದೀಶ್, ಖಜಾಂಚಿ ಮೃತ್ಯುಂಜಯ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಾಲತೇಶ್ ಮುದ್ದಜ್ಜಿ ಸೇರಿದಂತೆ ಸಮಾಜದ ಮುಖಂಡರಾದ ಎಸ್.ಬಿ.ಎಲ್. ಮಲ್ಲಿಕಾರ್ಜುನ್, ಓಂಕಾರಪ್ಪ, ಯೋಗೀಶ್ ಸಹ್ಯಾದ್ರಿ, ರಾಜಣ್ಣ, ಉಮೇಶ್, ಕೃಷ್ಣಮೂರ್ತಿ, ರಮೇಶ್, ಮಧು, ಈಶ್ವರಪ್ಪ ಮಾಳಪ್ಪನಹಟ್ಟಿ ಮುಂತಾದವರು ಉಪಸ್ಥಿತರಿದ್ದರು.