ಬ್ಯಾಡಗಿ: ಕಾಗಿನೆಲೆಯ ಶ್ರೀ ಕನಕ ಗುರುಪೀಠದಲ್ಲಿ ನ. 17ರಂದು ಕನಕದಾಸರ ಜಯಂತ್ಯುತ್ಸವ ಸಂಸ್ಕೃತಿ, ಸಾಹಿತ್ಯ ಹಾಗೂ ಧಾರ್ಮಿಕ ಜಾಗೃತಿಯೊಂದಿಗೆ ಅರ್ಥಪೂರ್ಣವಾಗಿ ಆಚರಿಸುವಂತೆ ಕನಕ ಗುರುಪೀಠದ ಜಗದ್ಗುರು ನಿರಂಜನಾನಂದಪುರಿ ಶ್ರೀಗಳು ಭಕ್ತ ಸಮೂಹಕ್ಕೆ ಕರೆ ನೀಡಿದರು.
ಈ ಬಾರಿಯ ಕನಕ ಜಯಂತ್ಯುತ್ಸವವನ್ನು ಹಾವೇರಿ ತಾಲೂಕು ಕುರುಬರ ಸಂಘ, ತಾಲೂಕು ಕನಕ ನೌಕರರ ಸಂಘ ಹಾಗೂ ಕಾಗಿನೆಲೆಯ ಕನಕ ಗುರುಪೀಠದ ಸಂಯುಕ್ತ ಆಶ್ರಯದಲ್ಲಿ ಆಚರಿಸಲಾಗುವುದು. ಜಯಂತ್ಯುತ್ಸವದ ಯಶಸ್ಸಿಗೆ ಅಗತ್ಯವಾದ ಸಿದ್ಧತೆಗಳನ್ನು ಪೂರ್ವಭಾವಿಯಾಗಿ ಕೈಗೊಳ್ಳಬೇಕು ಎಂದು ತಿಳಿಸಿದರು.
ಜನಜಾಗೃತಿ ಮೂಡಿಸುವ ಕಾರ್ಯಕ್ರಮ: ಕನಕ ಜಯಂತ್ಯುತ್ಸವದ ಅಂಗವಾಗಿ ಹಾವೇರಿ ತಾಲೂಕಿನ ಆಯ್ದ ಗ್ರಾಮಗಳಲ್ಲಿ ದುಶ್ಚಟಗಳ ವಿರುದ್ಧ ಜನಜಾಗೃತಿ ಮೂಡಿಸುವ ಕಾರ‍್ಯಕ್ರಮ ಹಮ್ಮಿಕೊಳ್ಳಲಾಗುವುದು. ರೇವಣಸಿದ್ದೇಶ್ವರರ ಜೋಳಿಗೆ ಹಿಡಿದು ಭಿಕ್ಷಾಟನೆ ನಡೆಸುವ ಮೂಲಕ ಗ್ರಾಮೀಣ ಜನರಲ್ಲಿ ದುಶ್ಚಟಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಗುವುದು ಎಂದರು.ಸಾಂಸ್ಕೃತಿಕ ಕಾರ್ಯಕ್ರಮಗಳು: ಶ್ರೀ ಮಠದಲ್ಲಿ ದಾನಮ್ಮ ದೇವಿಯ ಪುರಾಣ, ಪ್ರವಚನ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ‍್ಯಕ್ರಮಗಳನ್ನು ಆಯೋಜಿಸಿ ಭಕ್ತಿ, ಧರ್ಮ ಹಾಗೂ ಸಾಮಾಜಿಕ ಜಾಗೃತಿಯನ್ನು ಮೂಡಿಸುವುದರ ಜೊತೆಯಲ್ಲಿ ಕನಕದಾಸರ ತತ್ವಾದರ್ಶಗಳು, ಸಮಾನತೆ, ಮಾನವೀಯತೆ ಹಾಗೂ ಸಾಮಾಜಿಕ ಸಾಮರಸ್ಯದ ಸಂದೇಶವನ್ನು ಜನರಿಗೆ ತಲುಪಿ ಸುವ ನಿಟ್ಟಿನಲ್ಲಿ ಜಯಂತ್ಯುತ್ಸವವನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ ಜನಜಾಗೃತಿಯ ಕಾರ್ಯಕ್ರಮವನ್ನಾಗಿ ರೂಪಿಸಬೇಕು ಎಂದರು.
ಜಿಲ್ಲಾ ಕುರುಬರ ಸಂಘದ ಪದಾಧಿಕಾರಿಗಳಾದ ಅಶೋಕ ಬಣಕಾರ, ರಾಜೇಂದ್ರ ಹಾವೇರಣ್ಣನವರ, ಸಿದ್ದಣ್ಣ ಲಿಂಗಮ್ಮನವರ, ಹನಮಂತಗೌಡ ಗಾಜಿಗೌಡರ, ಶಂಕ್ರಣ್ಣ ಮಾತನವರ, ನಿಂಗಪ್ಪ ತುಕ್ಕಣ್ಣನವರ, ರಾಜು ಶಿವಣ್ಣನವರ, ಶಿವರಾಜ ಅಮರಾಪೂರ, ಚಿಕ್ಕಣ್ಣ ಹಾದಿಮನಿ, ಮಹೇಶ ಪವಾಡ, ಮೃತ್ಯುಂಜಯ್ಯ ಗುದಗೇರ, ಶಿವಪುತ್ರಪ್ಪ ಅಗಡಿ, ಬಸವರಾಜ ಕಂಬಳಿ, ಪರಶುರಾಮ ಬಗಾಡೆ ಸೇರಿದಂತೆ ಹಲವು ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.