ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದ ಡೊಂಕು ತಿದ್ದಿದವರು. ಬಡವರ ಪರ ಚಿಂತನೆ ಇಟ್ಟುಕೊಂಡು ಕೀರ್ತನೆಗಳನ್ನು ಜಗತ್ತಿಗೆ ಕೊಟ್ಟವರು. ಶೂದ್ರ ಸಮುದಾಯದ ಕೀರ್ತಿಯನ್ನು ತಮ್ಮ ದಾಸವಾಣಿಗಳ ಮೂಲಕ ಜಗತ್ತಿಗೆ ತೋರಿಸಿಕೊಟ್ಟವರು ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.ಪಟ್ಟಣದ ಕೆಪಿಎಸ್ ಶಾಲಾ ಆವರಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಕನಕ ಜಯಂತಿ ಉದ್ಘಾಟಿಸಿ ಮಾತನಾಡಿ, ಬುದ್ಧ, ಬಸವ, ಕನಕಾದಿ ದಾರ್ಶನಿಕರು ಮತ್ತು ಸಮಾಜ ಸುಧಾರಕರು ಸರ್ವ ಸಮಾಜದ ಸ್ವತ್ತು. ನಾಡಿನ ಶ್ರೇಷ್ಠ ದಾರ್ಶನಿಕರ ಕನಸುಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ಮಾಡಬೇಕು ಎಂದರು.
ತಾಲೂಕಿನಲ್ಲಿ ಅರ್ಧಕ್ಕೆ ನಿಂತು ಹೋಗಿರುವ ಕನಕ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿಸಲು ಪ್ರಯತ್ನಿಸಿದ್ದೇನೆ. ರಾಜಕೀಯವನ್ನು ಬದಿಗೊತ್ತಿ ಸಮುದಾಯದ ಹಿತವನ್ನು ಕಾಯಲು ನಾನು ಹಗಲಿರುಳು ಶ್ರಮಿಸುತ್ತೇನೆ. ಕನಕದಾಸರ ಚಿಂತನೆಗಳನ್ನು ಸಾಕಾರಗೊಳಿಸಲು ಸದಾ ಸಮುದಾಯದ ಜೊತೆಯಲ್ಲಿ ನಿಲ್ಲುತ್ತೇನೆ ಎಂದರು.ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್, ಕನಕರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ಸಮಾಜದ ಎಲ್ಲಾ ವರ್ಗ ಜನರೂ ಒಗ್ಗೂಡಿ ಮಹನೀಯರ ಜಯಂತ್ಯೋತ್ಸವ ಆಚರಿಸುವ ವ್ಯವಸ್ಥೆ ರೂಪುಗೊಳ್ಳಬೇಕು. ಕನಕರ ಚಿಂತನೆ ಮತ್ತು ಆದರ್ಶಗಳ ನೆರಳಿನಲ್ಲಿ ಸಮ ಸಮಾಜದ ನಿರ್ಮಾಣವಾಗಬೇಕು ಎಂದರು.
ಹುಣಸೂರಿನ ಕೊತ್ತತ್ತಿ ಗ್ರಾಮದ ಪ್ರೌಢಶಾಲಾ ಶಿಕ್ಷಕ ಮಹದೇವ್ ಕಲ್ಕುಣಿ ಅವರು ಜನಕರ ಚಿಂತನೆಗಳನ್ನು ಜನರಿಗೆ ತಮ್ಮ ಉಪನ್ಯಾಸದ ಮೂಲಕ ಸಾದರಪಡಿಸಿದರು. ಕಾರ್ಯಕ್ರಮಕ್ಕೂ ಮುನ್ನ ಕನಕದಾಸರ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಎಂ.ಹೊಸೂರು ಗ್ರಾಮಸ್ಥರು ವೀರ ಮಕ್ಕಳ ಕುಣಿತವನ್ನು ಹಾಕುವ ಮೂಲಕ ಮೆರವಣಿಗೆಗೆ ಕಳೆ ತಂದರು.ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ತಾಪಂ ಇಒ ಕೆ.ಸುಷ್ಮ, ಸಮಾಜ ಸೇವಕ ಮಲ್ಲಿಕಾರ್ಜುನ್, ಜಿಪಂ ಮಾಜಿ ಸದಸ್ಯರಾದ ರಾಮದಾಸ್, ಎಲ್.ಕೆ.ಮಂಜುನಾಥ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಕೆ.ಕೆ.ಪುರುಷೋತ್ತಮ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶೀಧರ್, ನಿರ್ದೇಶಕರಾದ ಕೆ.ಸಿ.ಮಂಜುನಾಥ್, ಪ್ರಸನ್ನಕುಮಾರ್, ಒಕ್ಕಲಿಗರ ಸಂಘದ ಅಧ್ಯಕ್ಷ ಆರ್.ಎಸ್.ಶಿವರಾಮೇಗೌಡ, ವೀರಶೈವ ಮಹಾಸಭಾದ ಮಾಜಿ ಅಧ್ಯಕ್ಷ ತೋಂಟಪ್ಪಶೆಟ್ಟಿ, ಲಕ್ಷ್ಮಿಪುರ ಪ್ರಸನ್ನ, ಪುರಸಭಾ ಸದಸ್ಯರಾದ ಕೆ.ಆರ್.ರವೀಂಧ್ರಬಾಬು, ಡಿ.ಪ್ರೇಮಕುಮಾರ್, ಟಿಎಪಿಸಿಎಂಎಸ್ ನಿರ್ದೇಶಕ ನಾಗರಘಟ್ಟ ದಿಲೀಪ್, ತಾಲೂಕು ಕಾಳಿದಾಸ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಂಜೇಗೌಡ, ಕಾರ್ಯದರ್ಶಿ ಕೆ.ಎಸ್.ಚಂದ್ರು ಸೇರಿದಂತೆ ಹಲವರಿದ್ದರು.