ಹಿರಿಯೂರು ತಾಲೂಕು ಕಚೇರಿಯಲ್ಲಿ ನಡೆದ ಕನಕ ಜಯಂತಿಯಲ್ಲಿ ಸಚಿವ ಡಿ.ಸುಧಾಕರ್ ಅಭಿಮತ
ಕನ್ನಡಪ್ರಭ ವಾರ್ತೆ ಹಿರಿಯೂರುಮಾನವ ಕುಲಕ್ಕೇ ಕನಕದಾಸರು ಆದರ್ಶ ವ್ಯಕ್ತಿಯಾಗಿದ್ದಾರೆ. ಭಕ್ತಿ ಯಾವ ಜಾತಿಗೂ ಸೀಮಿತವಲ್ಲ ಎಂಬುದನ್ನು ಕನಕರು ನಿರೂಪಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅಭಿಪ್ರಾಯಪಟ್ಟರು.ನಗರದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಗುರುವಾರ ನಡೆದ ಕನಕ ಜಯಂತಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ, ಮಾತನಾಡಿದರು. ಕುಲದ ನೆಲೆ ಹುಡುಕಬೇಡಿ ಎಂದು ಕನಕದಾಸರು ಅಂದೇ ಹೇಳಿದ್ದರು. ಸಾಮಾಜಿಕ ನ್ಯಾಯ ಹಾಗೂ ನಡುಗನ್ನಡ ಸಾಹಿತ್ಯದ ಹರಿಕಾರರಾಗಿದ್ದ ಕನಕರು ಸಂತ, ತತ್ವಜ್ಞಾನಿ, ಕವಿ, ಕೀರ್ತನಕಾರರಾಗಿದ್ದರು. ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವುಗಳನ್ನು ಪರಿಪಾಲನೆ ಮಾಡಬೇಕು ಎಂದರು.ಇದೀಗ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿರೋಧಿಗಳೇ ಆಶ್ಚರ್ಯಪಡುವಂತಹ ಆಡಳಿತ ನೀಡುತ್ತಿದ್ದಾರೆ. ವಿರೋಧಿಗಳ ಬಾಯಿ ಕಟ್ಟಿ ಹಾಕಿದ್ದಾರೆ. ತಾಲೂಕಿನಲ್ಲಿಯೂ ಸಹ ಈಗಾಗಲೇ ಅಭಿವೃದ್ಧಿ ಕಾರ್ಯಗಳು ಶುರುವಾಗಿದ್ದು, ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದರು.ಉಪನ್ಯಾಸ ನೀಡಿ ಡಾ.ಡಿ. ಧರಣೇoದ್ರಯ್ಯ ಮಾತನಾಡಿ, ಸಾಹಿತ್ಯ ಲೋಕದ ಅದ್ಭುತ ಶಕ್ತಿಯಾಗಿದ್ದ ಕನಕದಾಸರು ಜಾತಿ, ವರ್ಗ ಸಂಘರ್ಷದಿಂದ ಹೊರಬರುವುದರ ಸಂಕೇತವಾಗಿದ್ದರು. ಕನಕದಾಸರು ಜಾತಿ ವ್ಯವಸ್ಥೆಯ ವಿರುದ್ಧ ಸಮರ ಸಾರಿ ದಾಸಶ್ರೇಷ್ಠರಾಗಿದ್ದರು. ತಮ್ಮ ಕೀರ್ತನೆಗಳಲ್ಲಿ ಭಕ್ತಿಯನ್ನು ಬಿತ್ತಿದ್ದ ಅವರು ವರ್ಣ ವ್ಯವಸ್ಥೆಯ ಕಟು ಟೀಕಾಕಾರರಾಗಿದ್ದರು ಎಂದರು.ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು ಮಾತನಾಡಿ, ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಾಡ ಗ್ರಾಮ ಕನಕರ ಜನ್ಮ ಸ್ಥಳವಾಗಿದ್ದು ಮೊದಲಿಗೆ ಕನಕರಿಗೆ ತಿಮ್ಮಪ್ಪ, ತಿಮ್ಮಪ್ಪ ನಾಯಕ, ಕನಕ ನಾಯಕ ಎಂದೆಲ್ಲಾ ಕರೆಯಲಾಗುತ್ತಿತ್ತು. ದಾಸನಾಗು ಎಂಬ ಆಶರೀರ ವಾಣಿಯ ಮತ್ತು ಹಲವು ಸಾವು ನೋವುಗಳಿಂದ ಬೇಸತ್ತು ಎಲ್ಲವನ್ನೂ ತ್ಯಜಿಸಿ ದಾಸರಾಗುತ್ತಾರೆ ಎಂದು ಕನಕದಾಸರ ಇತಿಹಾಸವನ್ನು ಸ್ಮರಿಸಿದರು.ಈ ಸಂದರ್ಭದಲ್ಲಿ ತಾಲೂಕು ಕುರುಬ ಸಂಘದ ಅಧ್ಯಕ್ಷ ಮಹoತೇಶ್, ಇಓ ಸತೀಶ್, ಪೌರಾಯುಕ್ತ ಎಚ್.ಮಹoತೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಲಿಂಗೇಗೌಡ, ಕಂದಿಕೆರೆ ಸುರೇಶ್ ಬಾಬು, ಗೋಡೆ ತಿಪ್ಪೇಸ್ವಾಮಿ, ಜೈರಾಮ್, ಇಂಜಿನಿಯರ್ ಮಂಜಣ್ಣ, ಮಾಜಿ ಸೈನಿಕ ಮುದ್ದಲಿಂಗಪ್ಪ, ಕೋಡಿಹಳ್ಳಿ ತಿಪ್ಪೇಸ್ವಾಮಿ, ವೆಂಕಟೇಶ್, ಸಿದ್ದೇಶ್, ವಿಶಾಲಾಕ್ಷಮ್ಮ, ಕೆಂಪಣ್ಣ, ಭರoಪುರ ರಂಗನಾಥ್, ಶಿವಲಿಂಗಮೂರ್ತಿ, ಮಂಜುನಾಥ್, ಕಾಂತರಾಜ್ ಹುಲಿ, ಮಹಾಸ್ವಾಮಿ, ನಿಜಲಿಂಗಪ್ಪ, ಜಿ.ಎಲ್.ಮೂರ್ತಿ, ದಯಾನಂದ್, ಓoಕಾರಪ್ಪ ಮುಂತಾದವರು ಹಾಜರಿದ್ದರು.