ಕನ್ನಡಪ್ರಭ ವಾರ್ತೆ ಬ್ಯಾಡಗಿ
ಯುದ್ಧ ಪರಂಪರೆಯಿಂದ ಸಮಾಜಕ್ಕೆ ಕೊಡುಗೆ ನೀಡಲು ಅಸಾಧ್ಯ. ಹೀಗಾಗಿ ರಾಜಪ್ರಭುತ್ವ ತ್ಯಜಿಸಿ ದಾರ್ಶನಿಕರಾದ ಕನಕದಾಸರು, ಭಕ್ತಿಯನ್ನೇ ಶಕ್ತಿಯನ್ನಾಗಿಸಿಕೊಂಡು ದೇವರನ್ನು ಒಲಿಸಿಕೊಂಡ ಬದುಕಿನ ರೀತಿ ಅನುಕರಣೀಯ ಎಂದು ಶಾಸಕ ಬಸವರಾಜ ಶಿವಣ್ಣನವರ ಬಣ್ಣಿಸಿದರು.ತಾಲೂಕಿನ ಕಾಗಿನೆಲೆ ಮಹಾಸಂಸ್ಥಾನ ಕನಕಗುರು ಪೀಠದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ‘ಭಕ್ತಶ್ರೇಷ್ಠ ಕನಕದಾಸರ ಜಯಂತ್ಯುತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯುದ್ಧಗಳು ಮನುಷ್ಯತ್ವ ಮೀರಿದ ಪ್ರಕ್ರಿಯೆಯಾಗಿವೆ. ಸಾವು-ನೋವುಗಳು ಜೊತೆಗೆ ನಮ್ಮ ಸಾಮ್ರಾಜ್ಯ ವೃದ್ಧಿಯೇ ವಿನಃ, ಸಮಾಜಕ್ಕೆ ಕೊಡುಗೆ ನೀಡಲು ಸಾಧ್ಯವಿಲ್ಲ. ಇದನ್ನರಿತ ಕನಕದಾಸರು ಶಸ್ತ್ರ ತ್ಯಜಿಸಿದರಲ್ಲದೇ ಅಂದು ಬೇರೂರಿದ್ದ ಜಾತಿ-ಮತ-ಪಂಥಗಳಲ್ಲಿನ ವಿಭಿನ್ನವಾದ ನಿಲುವು ಮೌಢ್ಯ ಹಾಗೂ ಏರಿಳಿತಗಳನ್ನು ಸರಿಪಡಿಸುವಲ್ಲಿ ಮಾಡಿದ ಅವಿರತ ಶ್ರಮವನ್ನು ಇಂದು ಇಡೀ ವಿಶ್ವವೇ ಮೆಚ್ಚಿಕೊಂಡಿದೆ ಎಂದರು.ಶತಮಾನಗಳಿಂದಲೂ ಸಮಾಜದಲ್ಲಿ ಜಾತಿ, ಮತ, ಪಂಥದಂತಹ ಬೇಧಗಳನ್ನು ಸ್ವತಃ ಮಾನವನೇ ಸೃಷ್ಟಿಸಿಕೊಂಡು ಅದರಿಂದ ಹೊರಬಲಾರದೇ ಇಂದಿಗೂ ನಲುಗುತ್ತಿದ್ದಾನೆ. ಮಾನವ ಜಾತಿಯೊಂದೇ ಸರ್ವಕಾಲಿಕ ಸತ್ಯ ಎಂಬ ಸಂದೇಶವನ್ನು ನೀಡುವ ಮೂಲಕ ಕನಕದಾಸರು ಸಮಾಜವನ್ನ ಇಂತಹ ಮೌಢ್ಯಗಳಿಂದ ಮೇಲೆತ್ತಲು ಜೀವನ ಮುಡಿಪಾಗಿಟ್ಟಿದ್ದರು ಎಂದರು.
ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿ, ದಾರ್ಶನಿಕರನ್ನು ಜಾತಿಗೆ ಸೀಮಿತಗೊಳಿಸಿ ತಪ್ಪು ಮಾಡುತ್ತಿದ್ದೇವೆ. ಅವರು ಜಗತ್ತಿನ ಆಸ್ತಿ, ಆದರ್ಶ ಮತ್ತು ಚಿಂತನೆಗಳಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ಬಸವ, ಕನಕ, ಬುದ್ಧ ಇವರ ಸಿದ್ಧಾಂತಗಳು ಎಲ್ಲ ಕಾಲಕ್ಕೂ ಪ್ರಸ್ತುತ. ಜಾತಿ ರಹಿತ, ವರ್ಗರಹಿತ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದನ್ನು ನಾವೆಲ್ಲರೂ ಒಪ್ಪಿಕೊಳ್ಳಲೇಬೇಕು. ನಾವೆಲ್ಲರೂ ಒಂದೇ ಎಂಬ ಮನೋಭಾವವನ್ನು ಬೆಳೆಸಿಕೊಳ್ಳೋಣ ಎಂದರು.ಸಾನಿಧ್ಯ ವಹಿಸಿದ್ದ ಕನಕ ಗುರುಪೀಠದ ನಿರಂಜನಾನಂದಪುರಿ ಶ್ರೀ ಮಾತನಾಡಿ, ಕನಕಗುರುಪೀಠ ಎಲ್ಲ ಸಮುದಾಯದ ಜನರ ಆಸ್ತಿಯಾಗಿದೆ. ಕನಕದಾಸರ ಉದ್ದೇಶ ಈಡೇರಿಸುವ ಉದ್ದೇಶದಿಂದ ಗುರುಪೀಠ ನಿರ್ಮಿಸಲಾಗಿದೆ. ಶ್ರೀಮಠವು ಎಂದಿಗೂ ದೇವರು-ಧರ್ಮ-ಜಾತಿಗಳಿಂದ ಜನರನ್ನು ನಿರ್ಬಂಧಿಸುವುದಿಲ್ಲ ಅಥವಾ ನಿಯಂತ್ರಿಸುವುದಿಲ್ಲ. ಮನುಷ್ಯ ಧರ್ಮವೊಂದೇ ಸರ್ವಕಾಲಿಕ ಸತ್ಯ ಎಂಬುದನ್ನು ಜಗತ್ತಿಗೆ ತೋರಿಸುವ ನಿಟ್ಟಿನಲ್ಲಿ ಶ್ರೀಮಠ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಚಿತ್ರದುರ್ಗದ ಮಾದಾರ ಚನ್ನಯ್ಯ ಶ್ರೀ, ಇಮ್ಮಡಿ ಸಿದ್ದರಾಮೇಶ್ವರ ಶ್ರೀ, ಮಾಚಿದೇವ ಶ್ರೀ, ಹೊಸದುರ್ಗದ ಪುರುಷೋತ್ತಮಾ ನಂದಪುರಿ ಶ್ರೀ, ಶಾಂತವೀರ ಸ್ವಾಮೀಜಿ, ಶ್ರೀ ಸೋಮೇಶ್ವರ, ಶ್ರೀ ರೇವಣಸಿದ್ದೇಶ್ವರ, ಶ್ರೀಶರಬಯ್ಯ ಶ್ರೀ ಬಸವೇಶ್ವರ ಶ್ರೀಗಳು ಸಭೆಯ ಸಾನಿಧ್ಯ ವಹಿಸಿದ್ದರು.ವೇದಿಕೆಯಲ್ಲಿ ಕಾಗಿನೆಲೆ ಗ್ರಾಪಂ ಅಧ್ಯಕ್ಷೆ ಗುತ್ತೆವ್ವ ದುರ್ಗಮರ‍್ಗಿ, ಉಪಾಧ್ಯಕ್ಷೆ ಪ್ರೇಮ ಜೋಗುಳ, ಉಪವಿಭಾಗಾಧಿಕಾರಿ ಚನ್ನಪ್ಪ, ಕನಕಗುರುಪೀಠದ ಆಡಳಿತಾಧಿಕಾರಿ ಎಸ್.ಎಫ್.ಎನ್. ಗಾಜಿಗೌಡರ, ಧರ್ಮಾಧಿಕಾರಿ ಶಂಕ್ರಣ್ಣ ಮಾತನವರ, ಮಲ್ಲೇಶಪ್ಪ ಹೊರ ಪೇಟೆ, ಕೆ.ಇ. ಕಾಂತೇಶ ಸೇರಿದಂತೆ ಇತರರಿದ್ದರು, ಪ್ರಾಚಾರ್ಯ ಎಂ. ಬೀರಪ್ಪ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನಿಕಟ್ಟಿ ನಿರೂಪಿಸಿದರು.