ಕನ್ನಡಪ್ರಭ ವಾರ್ತೆ ಶಹಾಪುರ
ತಮ್ಮ ಕೀರ್ತನೆಗಳ ಮುಖಾಂತರ ಜಾತಿವಾದವನ್ನು, ವರ್ಣಭೇದವನ್ನು, ಮೂಢನಂಬಿಕೆಯನ್ನು ಕಟುವಾಗಿ ಖಂಡಿಸಿ, ಕುಲದ ಕತ್ತಲೆ ಕಳೆದು ಸಮಾನತೆಯ ಬೆಳಕು ಬೀರಿದ ಕನಕದಾಸರು ವಿಶ್ವದ ಶ್ರೇಷ್ಠ ಸಂತರಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.ನಗರದಲ್ಲಿ ಸೋಮವಾರ ಕನಕದಾಸರ 537ನೇ ಜಯಂತಿ ಅಂಗವಾಗಿ, ತಾಲೂಕು ಆಡಳಿತ ಹಾಗೂ ನಗರಸಭೆ ಮತ್ತು ತಾಲೂಕು ಕುರುಬರ ಸಂಘದ ವತಿಯಿಂದ ನಡೆದ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಲೋಕದಲ್ಲಿ ದುರ್ಜನರ ಸಂಗ ಬೇಡ. ಸದಾ ಸಜ್ಜನರ ಸಂಗದಲ್ಲಿಯೇ ಬಾಳಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದ ಕನಕದಾಸರು ನಮ್ಮಲ್ಲಿರುವ ಅಹಂಕಾರ, ಡಾಂಭಿಕತೆ ಬಿಟ್ಟು ಎಲ್ಲರೊಂದಿಗೆ ಕೂಡಿ ಬಾಳಬೇಕು ಎನ್ನುವ ಸಂದೇಶವನ್ನು ಜಗತ್ತಿಗೆ ಸಾರಿದ್ದಾರೆ ಎಂದರು.ಕುರುಬರ ಸಂಘದ ತಾಲೂಕಾಧ್ಯಕ್ಷ ಭೀಮಣ್ಣ ಮೇಟಿ ಮಾತನಾಡಿ, ಕವಿಯಾಗಿ, ವಿರಕ್ತನಾಗಿ, ಭಕ್ತನಾಗಿ, ದಾಸನಾಗಿ, ದಾರ್ಶನಿಕನಾಗಿ, ಕೀರ್ತನೆಕಾರನಾಗಿ, ಸಾಂಸ್ಕೃತಿಕ ಚಿಂತಕನಾಗಿ ಜನಪದರಲ್ಲಿ ಒಬ್ಬನಾಗಿ ಕನಕದಾಸರು ಕನ್ನಡ ಸಂಸ್ಕೃತಿ ಮತ್ತು ಮಾನವ ಸಮಾಜಕ್ಕೆ ಅಮೂಲ್ಯ ಕೊಡುಗೆ ಅಪಾರವಾಗಿದೆ ಎಂದರು.
ನಗರಸಭೆ ಅಧ್ಯಕ್ಷ ಮೆಹರೂನ ಬೇಗಂ, ನಗರಸಭೆ ಪೌರಾಯುಕ್ತ ರಮೇಶ್ ಬಡಿಗೇರ್, ಪಿಎಸ್ಐ ಶ್ಯಾಮ್ ಸುಂದರ್ ನಾಯಕ್, ಸಮಾಜದ ಹಿರಿಯ ಮುಖಂಡರಾದ ಬಸವರಾಜಪ್ಪ ವಿಭೂತಿಹಳ್ಳಿ, ಅಯ್ಯಣ್ಣ ಇನಾಮ್ದಾರ್, ಶಾಂತಗೌಡ ನಾಗನಟಿಗಿ, ವಾಲ್ಮೀಕಿ ಸಮಾಜದ ತಾಲೂಕಾಧ್ಯಕ್ಷ ಮರೆಪ್ಪ ಪ್ಯಾಟಿ, ಕೋಲಿ ಸಮಾಜದ ಮುಖಂಡ ಸಣ್ಣನಿಂಗಣ್ಣ ನಾಯ್ಕೋಡಿ, ಕುರುಬ ಸಂಘದ ತಾಲೂಕು ಕಾರ್ಯದರ್ಶಿ ಶರಬಣ್ಣ ರಸ್ತಾಪುರ್, ರಾಯಪ್ಪ ಚಲುವಾದಿ, ರವಿ ರಾಜಪುರ ಸೇರಿದಂತೆ ಕುರುಬ ಸಮಾಜ ಹಾಗೂ ವಿವಿಧ ಸಮಾಜದ ಮುಖಂಡರು ಭಾಗವಹಿಸಿದ್ದರು.-ಅಧಿಕಾರಿಗಳ ಗೈರು: ಕ್ರಮಕ್ಕೆ ಒತ್ತಾಯ
ನಗರಸಭೆ ಆವರಣದಲ್ಲಿ ನಡೆದ ಭಕ್ತ ಕನಕದಾಸ ಜಯಂತಿ ಆಚರಣೆಗೆ ಅಧಿಕಾರಿಗಳು ಗೈರಾಗುವ ಮೂಲಕ ದಾರ್ಶನಿಕ ಮತ್ತು ಮಹಾತ್ಮರಿಗೆ ಅವಮಾನಿಸಿದ್ದಾರೆ. ಯಾರೇ ಮಹಾತ್ಮರ ಜಯಂತಿ ನಡೆದರೂ, ಕಾರ್ಯಕ್ರಮದಲ್ಲಿ ಬೆರಳೆಣಿಕೆಯಷ್ಟು ಅಧಿಕಾರಿಗಳು ಭಾಗವಹಿಸುತ್ತಾರೆ. ಬಹಳಷ್ಟು ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಗೈರಾಗುವುದು ಇಲ್ಲಿ ಸರ್ವೇ ಸಾಮಾನ್ಯವಾಗಿದೆ. ಇಂಥವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ತಾಲೂಕು ಕುರುಬ ಸಮಾಜ ಮುಖಂಡರು ತಹಸೀಲ್ದಾರ್‌ಗೆ ಒತ್ತಾಯಿಸಿದರು.-ನಿಯಮ ಉಲ್ಲಂಘಿಸಿದ ಖಾಸಗಿ ಶಾಲೆಗಳ ವಿರುದ್ಧ ಕ್ರಮಕ್ಕೆ ಒತ್ತಾಯ
ಭಕ್ತ ಕನಕದಾಸರ ಜಯಂತಿ ಅಂಗವಾಗಿ ಸರ್ಕಾರ ಸಾರ್ವತ್ರಿಕ ರಜೆ ಘೋಷಣೆ ಮಾಡಿದೆ. ಆದರೆ, ಸರ್ಕಾರದ ನಿಯಮ ಉಲ್ಲಂಘಿಸಿ ನಗರದಲ್ಲಿ ಕೆಲವು ಖಾಸಗಿ ಶಾಲೆಗಳು ಮಕ್ಕಳಿಗೆ ರಜೆ ನೀಡದೆ ಶಾಲೆ ನಡೆಸಿರುವುದು ಕಂಡು ಬಂದಿದೆ. ಸರ್ಕಾರದ ಮತ್ತು ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ತಮಗೆ ಇಚ್ಛೆ ಬಂದಂತೆ ಶಾಲೆಗಳನ್ನು ನಡೆಸುತ್ತಾರೆ. ಅಕ್ಟೋಬರ್ ತಿಂಗಳು ಶಾಲೆಗೆ ಸರ್ಕಾರ ರಜೆ ಘೋಷಿಸಿ, ಆದೇಶ ನೀಡಿದ್ದರೂ, ಕೆಲ ಖಾಸಗಿ ಶಾಲೆಗಳು ಕಾಟಾಚಾರಕ್ಕೆ ಒಂದೆರಡು ದಿನಗಳ ರಜೆ ನೀಡಿ ಶಾಲೆ ಪ್ರಾರಂಭಿಸಿದ್ದಾರೆ. ಕಾನೂನು ಉಲ್ಲಂಘಿಸಿ ಶಾಲೆ ನಡೆಸಿದ ಕಾಶಿಗೆ ಶಾಲೆಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವೇ ಪ್ರತಿ ಶಾಲೆಗೆ 1 ಲಕ್ಷ ರು.ಗಳು ದಂಡ ವಿಧಿಸಬೇಕು ಎಂದು ದಲಿತ ಮತ್ತು ಮೈನಾರಿಟಿಸ್ ಸೇನೆಯ ಜಿಲ್ಲಾ ಮುಖಂಡ ಮೊಹ್ಮದ್ ಇಸ್ಮಾಯಿಲ್ ತಿಮ್ಮಾಪುರಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ಒತ್ತಾಯಿಸಿದ್ದಾರೆ.ಕನಕದಾಸರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಿ: ಹಳ್ಳೆ
ಶಹಾಪುರ: ನಗರಸಭೆ ಆವರಣದಲ್ಲಿ ನಡೆದ ಕನಕದಾಸರ ಜಯಂತಿಯ ಕಾರ್ಯಕ್ರಮವನ್ನು ತಹಸೀಲ್ದಾರ್ ಉಮಾಕಾಂತ್ ಹಳ್ಳೆ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕನಕದಾಸರ ಭಕ್ತಿ, ಆಚಾರ, ವಿಚಾರ, ಕೀರ್ತನೆಗಳನ್ನು ಕೇವಲ ಓದಿಗೆ ಸೀಮಿತಗೊಳಿಸಬಾರದು. ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಅವುಗಳಿಗೆ ಅರ್ಥ ಬರುತ್ತದೆ. ಕನಕದಾಸರು ತಮ್ಮ ಕೀರ್ತನಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಜತೆಗೆ ಅನೇಕ ಆದರ್ಶಗಳನ್ನು ಸಮಾಜಕ್ಕೆ ತೋರಿಸಿಕೊಟ್ಟರು. ಅವರ ತತ್ವ ಆದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿ ಕೊಂಡಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದರು.