ಕನಕಗಿರಿ ಕಲೆ, ಸಾಹಿತ್ಯ, ಸಂಸ್ಕೃತಿಯ ತವರೂರು: ಸಾಹಿತಿ ಪವನಕುಮಾರ ಗುಂಡೂರು

KannadaprabhaNewsNetwork | Published : Mar 3, 2024 1:31 AM

ಸಾರಾಂಶ

ಕನಕಗಿರಿ ಉತ್ಸವದ ನಿಮಿತ್ತ ಡಾ.ಪಂಡಿತ ಪುಟ್ಟರಾಜ ಗವಾಯಿಗಳ ವೇದಿಕೆಯಲ್ಲಿ ಏರ್ಪಡಿಸಿದ್ದ ವಿಚಾರಗೋಷ್ಠಿಯಲ್ಲಿ ಕನಕಗಿರಿ ಕಲೆ ಹಾಗೂ ಸಾಹಿತ್ಯ ಪರಂಪರೆ ಕುರಿತು ವಿಷಯ ಮಂಡಿಸಿದರು.

ರಾಮಮೂರ್ತಿ ನವಲಿ

ಕನಕಗಿರಿ: ಕನಕಗಿರಿ ಐತಿಹಾಸಿಕವಾಗಿ ಪ್ರಸಿದ್ಧವಾಗಿರುವ ಕ್ಷೇತ್ರ. ಇದು ಕಲೆ, ಸಾಹಿತ್ಯ, ಸಂಸ್ಕೃತಿಯ ತವರೂರು ಎಂದು ಸಾಹಿತಿ ಪವನಕುಮಾರ ಗುಂಡೂರು ಹೇಳಿದರು.

ಕನಕಗಿರಿ ಉತ್ಸವದ ನಿಮಿತ್ತ ಡಾ.ಪಂಡಿತ ಪುಟ್ಟರಾಜ ಗವಾಯಿಗಳ ವೇದಿಕೆಯಲ್ಲಿ ಏರ್ಪಡಿಸಿದ್ದ ವಿಚಾರಗೋಷ್ಠಿಯಲ್ಲಿ ಕನಕಗಿರಿ ಕಲೆ ಹಾಗೂ ಸಾಹಿತ್ಯ ಪರಂಪರೆ ಕುರಿತು ವಿಷಯ ಮಂಡಿಸಿದರು.

ಕನಕಗಿರಿಯು ಐತಿಹಾಸಿಕ ಪ್ರಸಿದ್ಧವಾಗಿದ್ದಲ್ಲದೆ ತಾಲೂಕಿನ ಕೆಲ ಗ್ರಾಮಗಳಲ್ಲಿಯೂ ಐತಿಹಾಸಿಕ ಪ್ರಸಿದ್ಧವಾಗಿರುವ ಸ್ಥಳಗಳು ಜತೆಗೆ ಸಾಹಿತಿಗಳು ಇದ್ದಾರೆ ಎಂದರು.

ಕನಕಗಿರಿಯಲ್ಲಿ ಜಯತೀರ್ಥ ರಾಜಪೂರೋಹಿತ, ವಡಕಿ ಗ್ರಾಮದಲ್ಲಿ ತಾತಾಪ್ಪಜ್ಜ, ಹೇರೂರು ಗ್ರಾಮದಲ್ಲಿ ವಿರುಪಣ್ಣ ತಾತಾನವರು, ಕನಕಗಿರಿಯಲ್ಲಿ ಗಜಲ್ ಸಾಹಿತಿ ಅಲ್ಲಾಗಿರಿರಾಜ್ ರವರಂತಹ ಸಾಹಿತಿಗಳು ಇದ್ದಾರೆ ಎಂದರು.

ಕನಕಗಿರಿಯು ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಜತೆಗೆ ವಿವಿಧ ದೇವಸ್ಥಾನಗಳು ಇವೆ ಎಂದರು.

ಕೊಪ್ಪಳದ ಗವಿಸಿದ್ದೇಶ್ವರ ಮಹಾವಿದ್ಯಾಲಯದ ಪ್ರಾಧ್ಯಾಪಕ ಶರಣಬಸಪ್ಪ ಬಿಳಿಎಲಿ ಗಂಗಾವತಿ, ಕನಕಗಿರಿ, ಕಾರಟಗಿ ತಾಲೂಕುಗಳ ಅಭಿವೃದ್ಧಿ ಅವಲೋಕನ ಕುರಿತು ವಿಷಯ ಮಂಡಿಸಿದರು.

ಜಿಲ್ಲೆಯಲ್ಲಿ 7 ತಾಲೂಕುಗಳು ಭಿನ್ನವಾಗಿವೆ. ಅಖಂಡ ಗಂಗಾವತಿ ತಾಲೂಕು ಸಂಪನ್ಮೂಲ ಕ್ರೋಡೀಕರಿಸುವ ಕೇಂದ್ರವಾಗಿದ್ದು, ಗಂಗಾವತಿ ಮತ್ತು ಕಾರಟಗಿ ತಾಲೂಕು ಶೇ.80 ಆದಾಯ ತರುವ ತಾಲೂಕಗಳಾಗಿವೆ ಎಂದರು.

ಡಾ.ಬದರಿ ಪ್ರಸಾದ ಜಿಲ್ಲೆಯ ಕೃಷಿ ನೀರಾವರಿ ಹಾಗೂ ತೋಟಗಾರಿಕೆ ಅಭಿವೃದ್ಧಿ ಅವಲೋಕನ ಕುರಿತು ವಿಷಯ ಮಂಡಿಸಿದರು.

ಡಾ.ಶರಣಬಸಪ್ಪ ಕೋಲ್ಕಾರ್ ಅಧ್ಯಕ್ಷತೆ ವಹಿಸಿದ್ದರು. ಕೆ. ಚೆನ್ನಬಸಯ್ಯಸ್ವಾಮಿ, ದುರ್ಗಾದಾಸ್ ಯಾದವ, ಡಾ. ನಾರಾಯಣ ಕಂದಗಲ್, ತಾಲೂಕು ಕಸಾಪ ಅಧ್ಯಕ್ಷ ಮೆಹಬೂಬು ಹುಸೇನ್ ಇದ್ದರು.ಹೆಸರು ತಿರುಚುವ ಕೆಲಸ ಬೇಡ:ಡಾ.ಇಮಾಮಸಾಹೇಬ್ ಹಡಗಲಿ ಕನಕಗಿರಿ ಚರಿತ್ರೆ ವಾಸ್ತುಶಿಲ್ಪ ಹಾಗೂ ರಂಗಭೂಮಿ ಪರಂಪರೆ ಕುರಿತು ವಿಷಯ ಮಂಡಿಸುವ ವೇಳೆ ಕನಕಗಿರಿ ಸುವರ್ಣಗಿರಿ ಅಲ್ಲ ಎಂದು ಹೇಳುತ್ತಿದ್ದಂತೆಯೇ ವೇದಿಕೆ ಮೇಲಿದ್ದ ಚಿಂತಕ ದುರ್ಗಾದಾಸ್ ಯಾದವ ತರಾಟೆಗೆ ತೆಗೆದುಕೊಂಡು ಸ್ಕಂದ ಪುರಾಣದಲ್ಲಿ ಸುವರ್ಣಗಿರಿ ಎಂದು ಹೆಸರು ಇದೆ. ಹೆಸರು ತಿರುಚುವ ಕೆಲಸ ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

Share this article