ಶಿವಾನಂದ ಮಲ್ಲನಗೌಡ್ರ
ಸೌರಶಕ್ತಿ ಚಾಲಿತ ಕೃಷಿ ಸೈಕಲ್ ಅಭಿವೃದ್ಧಿಪಡಿಸಿದ ಕಾಗಿನೆಲೆಯ ಶ್ರೀ ಕನಕ ಗುರುಪೀಠ ಪ್ರೌಢಶಾಲೆಯ ವಿದ್ಯಾರ್ಥಿ ಹರೀಶ ಶಾನುಭೋಗರ ನವದೆಹಲಿಯಲ್ಲಿ ಅ.12ರಿಂದ ನಡೆಯಲಿರುವ ರಾಷ್ಟ್ರಮಟ್ಟದ ಇನಸ್ಪೈರ್ ಅವಾರ್ಡ್‌ಗೆ ಆಯ್ಕೆಯಾಗಿದ್ದಾನೆ.
ಗ್ರಾಮೀಣ ಪ್ರತಿಭೆಗಳನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಮುಂದಾಗಿರುವ ಆಡಳಿತಾರೂಢ ಸರ್ಕಾರಗಳು ಹತ್ತು ಹಲವು ಸ್ಪರ್ಧಾತ್ಮಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿವೆ, ಅದರಲ್ಲೂ ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಮೂಡಿಸುವಂತಹ ವಿಜ್ಞಾನದ ಆವಿಷ್ಕಾರವುಳ್ಳ ಹೊಸ ಅನ್ವೇಷಣಾ ಪ್ರಯೋಗಗಳು ಸಾಕಷ್ಟು ಮುನ್ನೆಲೆಗೆ ಬರುತ್ತಿದ್ದು, ಅದರಲ್ಲಿ ಪ್ರಸ್ತುತ ಇನಸ್ಪೈರ್ ಅವಾರ್ಡ್ ಮಾನಕ್ ಕೂಡ ಒಂದಾಗಿದ್ದು ಅ.12ರಿಂದ 14ರ ವರೆಗೆ ನವದೆಹಲಿಯ ಪ್ರಗತಿ ಮೈದಾನದಲ್ಲಿ ನಡೆಯುತ್ತಿದೆ.ಕುರಿಗಾರ ಕುಟುಂಬದ ಕುಡಿ: ಹರೀಶ ಶಾನುಭೋಗರ ಮೂಲತಃ ಹಾವೇರಿ ಜಿಲ್ಲೆ ರಾಣಿಬೆನ್ನೂರ ತಾಲೂಕಿನ ಮೆಡ್ಲೇರಿ ಗ್ರಾಮದ ಕುರಿಕಾಯುವ ಕಾಯಕದಲ್ಲಿ ತೊಡಗಿರುವ ಕಾಜಪ್ಪ ಹಾಗೂ ಶಿಲ್ಪಾ ದಂಪತಿಗಳ ಮೂವರು ಮಕ್ಕಳಲ್ಲಿ ಹಿರಿಯ ಮಗನಾಗಿದ್ದಾನೆ, ಪ್ರಾಥಮಿಕ ಶಿಕ್ಷಣವನ್ನೂ ಸಹ ಪೂರ್ಣಗೊಳಿಸದ ದಂಪತಿಗಳಾದರೂ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಕಾಗಿನೆಲೆಯ ಶ್ರೀ ಕನಕಗುರುಪೀಠ ಪ್ರಾಥಮಿಕ ಶಾಲೆಯ 5 ನೇ ತರಗತಿ ಪ್ರವೇಶ ಪಡೆದುಕೊಂಡಿದ್ದಾರೆ, ಅಲ್ಲಿಯೇ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿದ ಹರೀಶ ಪ್ರೌಢಶಿಕ್ಷಣವನ್ನು ಕೂಡ ಅಲ್ಲಿಯೇ ಮುಂದುವರೆಸಿ ಪ್ರಸ್ತುತ 9ನೇ ತರಗರತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.
ಶಿಕ್ಷಕರ ಮಾರ್ಗದರ್ಶನ: ಮುಖ್ಯಶಿಕ್ಷಕ ರವೀಂದ್ರನಾಥ ಆನವೇರಿ ವಿಜ್ಞಾನ ಶಿಕ್ಷಕರಾಗಿದ್ದು, ಇವರ ಮಾರ್ಗದರ್ಶನದಲ್ಲಿ ಶಿಕ್ಷಕರಾದ ಮಾಲತೇಶ ದೊಡ್ಮನಿ, ಸತೀಶ ತಳವಾರ ಇನ್ನುಳಿದ ಸಿಬ್ಬಂದಿಯ ಸಹಕಾರದಿಂದ ಹರೀಶ ಶಾನುಭೋಗರ ಸೌರಶಕ್ತಿ ಚಾಲಿತ ಕೃಷಿ ಸೈಕಲ್ ಅಭಿವೃದ್ಧಿಪಡಿಸಿದ್ದು ಇಂದು ರಾಷ್ಟ್ರಮಟ್ಟದಲ್ಲಿ ಪ್ರದರ್ಶನಗೊಳ್ಳುತ್ತಿದೆ.ಸಾಮಾನ್ಯವಾಗಿ ವಿಜ್ಞಾನ ಪ್ರದರ್ಶನಗಳಿಗೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರವೇಶ ವಿರಳ, ಆದರೆ ಗ್ರಾಮೀಣ ಶಾಲಾ ವಿದ್ಯಾರ್ಥಿಗಳಿಗೆ ಪರಿವರ್ತನಾ ಸೇತುವೆಯಾಗಿ ಇನಸ್ಪೈರ್ ಅವಾರ್ಡ ಕೆಲಸ ನಿರ್ವಹಿಸುತ್ತಿದೆ, ಕುರಿಗಾಹಿಯ ಮಗನೊಬ್ಬ ಇಷ್ಟೊಂದು ಎತ್ತರದ ಸಾಧನೆ ಮಾಡಿದ್ದು ಹರ್ಷವೆನಿಸುತ್ತಿದೆ ಆತನ ಸಾಧನೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಪ್ರದರ್ಶನಗೊಳ್ಳಲಿ ಎಂದು ಶುಭ ಹಾರೈಸುವೆ ಎಂದು ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದ ಶ್ರೀಗಳು ಹೇಳಿದರು.