ಚನ್ನಪಟ್ಟಣ: ಸಂತ ಶ್ರೇಷ್ಠ ಕನಕದಾಸರು ೧೫-೧೬ನೇ ಶತಮಾನಗಳಲ್ಲಿ ಜನಪ್ರಿಯದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ಕನಕದಾಸರ ಮೂಲ ಹೆಸರು ತಿಮ್ಮಪ್ಪನಾಯಕ. ದಾಸ ಪರಂಪರೆಯಲ್ಲಿ ಬರುವ ೨೫೦ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೆ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನೆಕಾರರು ಮತ್ತು ಪುರಂದರ ದಾಸರೊಂದಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಅಪಾರ ಕೊಡುಗೆ ನೀಡಿದವರು ಎಂದು ಸಾಹಿತಿ ಡಾ. ವಿಜಯ್ ರಾಂಪುರ ತಿಳಿಸಿದರು.
ತಾಲೂಕಿನ ರಾಂಪುರ ಗ್ರಾಮ ಪಂಚಾಯತಿ ಆವರಣದಲ್ಲಿ ಏರ್ಪಡಿಸಿದ್ದ ಸಂತ ಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಾಸ ಸಾಹಿತ್ಯಕ್ಕೆ ವೈಶಿಷ್ಟಪೂರ್ಣ ಮೆರುಗನ್ನು ತಂದುಕೊಟ್ಟ ಪಾಂಡಿತ್ಯಪೂರ್ಣ ಕವಿ ಕನಕದಾಸರು. ಇವರು ಕೀರ್ತನಕಾರರಾಗಿ, ತತ್ವಜ್ಞಾನಿಯಾಗಿ, ಸಂತರಾಗಿ, ದಾರ್ಶನಿಕರಾಗಿ ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಗೆ ಕನಕದಾಸರು ಅನನ್ಯ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.ಕನಕದಾಸರು ದಂಡನಾಯಕರಾಗಿದ್ದು, ಯುದ್ಧದಲ್ಲಿ ಸೋತ ನಂತರ ಅವರಿಗೆ ವೈರಾಗ್ಯ ಉಂಟಾಗಿ ಹರಿಭಕ್ತ ದಾಸರಾದರು ಎಂಬ ಮಾತಿದೆ. ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಭಕ್ತಿ, ವೈರಾಗ್ಯ, ಭಜನೆಗಳಷ್ಟೇ ಅಲ್ಲದೇ ೧೬ನೇ ಶತಮಾನದ ಸಾಮಾಜಿಕ ವ್ಯವಸ್ಥೆಯ ವಿರುದ್ಧ ಸಮರ ಸಾರಿದ್ದಾರೆ. ಸಾಮಾಜಿಕ ಮಡಿವಂತಿಕೆ ಕುರಿತು ತಮ್ಮ ಕೀರ್ತನೆಗಳಲ್ಲಿ ವಿಡಂಬಿಸಿದ್ದಾರೆ. ಅಂದಿನ ಸಮಾಜದ ಸ್ಥಿತಿಗತಿಗಳನ್ನು ತಿದ್ದುವ ಪ್ರಯತ್ನ ಮಾಡಿರುವ ದಾಸರಿವರು. ಕನಕದಾಸರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ ೧೫೦೯ರಲ್ಲಿ ಕುರುಬ ಜನಾಂಗಕ್ಕೆ ಸೇರಿದ ಬಚ್ಚಮ್ಮ ಮತ್ತು ಬೀರಪ್ಪನಾಯಕ ಎಂಬ ದಂಪತಿಗಳ ಮಗನಾಗಿ ಜನಿಸಿದರು. ಕಾಗಿನೆಲೆಯ ಆದಿಕೇಶವನ ಭಕ್ತರಾದ ಕನಕದಾಸರು ಜಾತಿಪದ್ಧತಿಯ ತಾರತಮ್ಯಗಳ ವಿರುದ್ಧ ಹೋರಾಟ ನಡೆಸಿದರು. ಕಾಗಿನೆಲೆಯ ಆದಿಕೇಶವರಾಯ ಎಂಬುದು ಇವರ ಕೀರ್ತನೆಗಳ ಅಂಕಿತನಾಮ. ಕನಕದಾಸರು ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಸುಳಾದಿಗಳು ಮತ್ತು ಉಗಾಭೋಗಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿರುವುದಲ್ಲದೆ, ಸಂಗೀತ ಕ್ಷೇತ್ರಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ಮಂಡಿಗೆಗಳ ರೂಪದಲ್ಲಿ ನೀಡಿದ್ದಾರೆ ಎಂದರು.
ಸುಮಾರು ೩೧೬ ಕೀರ್ತನೆಗಳು ಹಾಗೂ ಇನ್ನಿತರ ಸಾಹಿತ್ಯ ಮಾತ್ರ ಲಭ್ಯವಾಗಿರುವುದನ್ನು ಕಾಣಬಹುದಾಗಿದೆ. ಮೋಹನ ತರಂಗಿಣಿ, ನಳಚರಿತ್ರೆ, ರಾಮಧಾನ್ಯ ಚರಿತ್ರೆ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಇವು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿವೆ ಎಂದರು.ಈ ಸಂದರ್ಭದಲ್ಲಿ ರಾಂಪುರ ಗ್ರಾಪಂ ಅಧ್ಯಕ್ಷ ಯೋಗಲಿಂಗು, ಉಪಾಧ್ಯಕ್ಷೆ ಆರ್.ನಯನ ಅರುಣ್, ಕಾರ್ಯದರ್ಶಿ ಸುದರ್ಶನ್, ಮುಖಂಡ ರಾಂಪುರ ಶಿವರಾಜು, ಸಿಬ್ಬಂದಿ ವರ್ಗದವರಾದ ಕುಮಾರ್, ತಾರಾಮಣಿ ಹಾಗೂ ಗ್ರಾಪಂ ಸದಸ್ಯರು ಹಾಜರಿದ್ದರು.
ಪೊಟೋ೮ಸಿಪಿಟಿ೩: ಕನಕಪುರ ತಾಲೂಕಿನ ರಾಂಪುರ ಗ್ರಾಮ ಪಂಚಾಯತಿ ಆವರಣದಲ್ಲಿ ಕನಕದಾಸರ ಜಯಂತಿ ಆಚರಿಸಲಾಯಿತು.