ಕಂಡಂಗಾಲ ಹಾಕಿ: ಅಪ್ಪಂಡೇರಂಡ ಹ್ಯಾಟ್ರಿಕ್ ಚಾಂಪಿಯನ್

KannadaprabhaNewsNetwork |  
Published : Dec 27, 2024, 12:47 AM IST
ಚಿತ್ರ : 26ಎಂಡಿಕೆ2 :  ಕೊಂಗಂಡ  ತಂಡ ರನ್ನರ್ಸ್ ಪ್ರಶಸ್ತಿ ಗಳಿಸಿತು.  | Kannada Prabha

ಸಾರಾಂಶ

ಕಂಡಂಗಾಲ ಹಾಕಿ ಕೂಟದಲ್ಲಿ ಸತತ ಮೂರನೇ ವರ್ಷ ಅಪ್ಪಂಡೇರಂಡ ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿ ಹ್ಯಾಟ್ರಿಕ್‌ ಸಾಧನೆ ಮಾಡಿದೆ.

ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ

ಕಂಡಂಗಾಲ ಹಾಕಿ ಕೂಟದಲ್ಲಿ ಸತತ ಮೂರನೇ ವರ್ಷ ಅಪ್ಪಂಡೇರಂಡ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿ ಹ್ಯಾಟ್ರಿಕ್‌ ಸಾಧನೆ ಮಾಡಿದೆ. ಕೊಂಗಂಡ ವಿರುದ್ಧದ ಫೈನಲ್‌ ಪಂದ್ಯದಲ್ಲಿ ಶೂಟೌಟ್‌ನಲ್ಲಿ 6-4 ಗೋಲುಗಳಿಂದ ಗೆಲುವು ಸಾಧಿಸಿತು.

ವಿರಾಜಪೇಟೆ ಸಮೀಪ ಕಂಡಂಗಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕ್ರೀಡಾ ಸಮಿತಿ ಆಶ್ರಯದಲ್ಲಿ ಶಾಲಾ ಮೈದಾನದಲ್ಲಿ ನಡೆದ ಪಂದ್ಯದ ನಿಗದಿತ ಅವಧಿಯಲ್ಲಿ ಉಭಯ ತಂಡಗಳು 2- 2 ಗೋಲುಗಳಿಂದ ಸಮಬಲ ಸಾಧಿಸಿದ್ದವು. ಆದ್ದರಿಂದ ಫಲಿತಾಂಶಕ್ಕಾಗಿ ಶೂಟ್ ಔಟ್ ಮೊರೆ ಹೋಗಲಾಯಿತು. ಶೂಟೌಟ್‌ನಲ್ಲಿ ಅಪ್ಪಂಡೇರಂಡ ತಂಡವು 6-4 ಗೋಲುಗಳಿಂದ ಜಯಗಳಿಸಿ ಪ್ರಶಸ್ತಿ ಜಯಿಸಿತು.

ಮಧ್ಯಾಹ್ನ 3 ಗಂಟೆಗೆ ಆರಂಭಗೊಂಡ ಪಂದ್ಯದ 20ನೇ ನಿಮಿಷದಲ್ಲಿ ನ್ಯೂನ್ ನಾಚಪ್ಪ ಆಕರ್ಷಕ ಫೀಲ್ಡ್ ಗೋಲು ಹೊಡೆದು ಕೊಂಗಂಡ ತಂಡಕ್ಕೆ 1-0 ಅಂತರದ ಆರಂಭಿಕ ಮುನ್ನಡೆ ಒದಗಿಸಿದರು.

ಅಪ್ಪಂಡೇರಂಡ ತಂಡದ ಪರ ಲಿಖಿತ್ 30ನೇ ನಿಮಿಷ ಮಿಂಚಿನ ಗೋಲ್‌ ಸಿಡಿಸುವ ಮೂಲಕ ಪಂದ್ಯವನ್ನು 1-1 ಸಮನಾಗಿಸಿದರು. 36ನೇ ನಿಮಿಷದಲ್ಲಿ ಕೊಂಗಂಡ ತಂಡದ ರಚನ್ ಉತ್ತಪ್ಪ ಗೋಲು ಹೊಡೆದು ಮತ್ತೆ ತಂಡಕ್ಕೆ ಮುನ್ನಡೆ ಒದಗಿಸಿದರು.

ಈ ನಡುವೆ ಅಪ್ಪಂಡೇರಂಡ ತಂಡಕ್ಕೆ ಪೆನಾಲ್ಟಿ ಸ್ಟೋಕ್ ದೊರೆತರೂ ತಂಡದ ಮುನ್ನಡೆ ಆಟಗಾರ ಮಾಚಯ್ಯ ವ್ಯರ್ಥಗೊಳಿಸಿದರು. ಪಂದ್ಯಾಟದ ಮುಕ್ತಾಯಕ್ಕೆ 6 ನಿಮಿಷ ಇರುವಾಗ ಮತ್ತೆ ಅಪ್ಪಂಡೇರಂಡ ತಂಡದ ಲಿಖಿತ್ ತಮ್ಮ ವೈಯಕ್ತಿಕ ದ್ವಿತೀಯ ಗೋಲನ್ನು ಬಾರಿಸುವ ಮೂಲಕ ನಿಗದಿತ ಅವಧಿಯಲ್ಲಿ 2-2 ಗೋಲುಗಳಿಂದ ಸಮನಾಗಿಸಿದರಲ್ಲದೆ ಶೂಟ್ ಔಟ್‌ನಲ್ಲಿ ತಂಡ 6-4 ಗೋಲುಗಳಿಂದ ಗೆಲ್ಲಲು ಪ್ರಮುಖ ಕಾರಣರಾದರು.

ಶೂಟ್ ಔಟ್‌ನಲ್ಲಿ ಅಪ್ಪಂಡೇರಂಡ ಪರ ಸೂರ್ಯ, ಮಾಚಯ್ಯ, ಸಾತ್ವಿಕ್, ಲಿಖಿತ್ ಗೋಲು ಹೊಡೆದರೆ, ಕೊಂಗಂಡ ತಂಡದ ಪರ ಯತೀಶ್ ಕುಮಾರ್ ಮತ್ತು ಚಿರಂತ್ ಸೋಮಣ್ಣ ಮಾತ್ರ ಗೋಲು ಗಳಿಸುವ ಶಕ್ತರಾದರು.

ಪ್ರಶಸ್ತಿ ಪ್ರದಾನ: ಕೆಂಜಂಗಡ ತಂಡ ಶಿಸ್ತು ಬದ್ಧ ತಂಡ ಪ್ರಶಸ್ತಿ ಗೆದ್ದುಕೊಂಡಿತು. ಅಪ್ಪಂಡೇರಂಡ ವಿನೀಶ್ ಪೂವಯ್ಯ ಅತ್ಯುತ್ತಮ ಭವಿಷ್ಯದ ಆಟಗಾರ ಪ್ರಶಸ್ತಿ, ಕುಪ್ಪಂಡ ತಂಡದ ಸೆಲ್ವರಾಜ್ ಅತ್ಯಧಿಕ ಗೋಲು ಸ್ಕೋರರ್, ಅತ್ಯುತ್ತಮ ಹಾಫ್ ಮೂಕಚಂಡ ತಂಡದ ಹರ್ಪಾಲ್, ಅತ್ಯುತ್ತಮ ಗೋಲ್ ಕೀಪರ್ ಮೂಕಚಂಡ ತಮ್ಮಯ್ಯ, ಅತ್ಯುತ್ತಮ ಮುನ್ನಡೆ ಆಟಗಾರ ಪ್ರಶಸ್ತಿಯನ್ನು ಕುಪ್ಪಂಡ ತಂಡದ ಅತಿಥಿ ಆಟಗಾರ ಸೆಲ್ವರಾಜ್ ಗಳಿಸಿದರು. ಮಹಿಳಾ ಆಟಗಾರ್ತಿ ಪ್ರಶಸ್ತಿ ಕಾಳೇಂಗಡ ಅಶ್ವಿನ್ ಹಾಗೂ ಪಂದ್ಯದ ಪುರುಷೋತ್ತಮನಾಗಿ ಅಪ್ಪಂಡೇರಂಡ ತಂಡದ ಲಿಖಿತ್ ಬಿ.ಎಂ. ಪ್ರಶಸ್ತಿ ಪಡೆದರು.

ಹಗ್ಗಜಗ್ಗಾಟ: ಮಹಿಳೆಯರ ಹಗ್ಗ ಜಗ್ಗಾಟ ಪಂದ್ಯಾಟದಲ್ಲಿ ಒಟ್ಟು 7 ತಂಡಗಳು ಭಾಗವಹಿಸಿದ್ದು, ಕಡೇಮಾಡ ತಂಡವು ಬಲ್ಲಡಿಚಂಡ ಮಹಿಳಾ ತಂಡದ ವಿರುದ್ಧ 2-0 ಅಂತರದಿಂದ ಜಯಗಳಿಸಿ ಪ್ರಶಸ್ತಿ ಗೆದ್ದುಕೊಂಡಿತು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ