ಕೊಪ್ಪಳ: ಕನ್ನಡ ಭಾಷೆ ಹೃದಯದ ಭಾಷೆಯಾಗಿದೆ. ಕನ್ನಡ ಭಾಷೆ ಉಳಿಸಿ, ಬೆಳೆಸುವ ಕಾರ್ಯ ಆಗಬೇಕು. ಯುವಕರು ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಸಿದ್ದೇಶ್ವರ ಮಠದ ಮರುಳಾರಾದ್ಯ ಶಿವಾಚಾರ್ಯರು ತಿಳಿಸಿದರು.ಗ್ರಾಮದ ಸಿದ್ದೇಶ್ವರ ಮಠದಲ್ಲಿ ಜಿಲ್ಲಾ ಹಾಗೂ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್, ಕಸಾಪ ಅಳವಂಡಿ ಹೋಬಳಿ ಘಟಕ, ಸಿದ್ದೇಶ್ವರ ಸಂಸ್ಥಾನ ಮಠ ಅಳವಂಡಿ ಸಹಯೋಗದಲ್ಲಿ ನಡೆದ ಶಿವಾನುಭವ ಕಾರ್ಯಕ್ರಮ ಹಾಗೂ ಕನ್ನಡ ಸಾಹಿತ್ಯದಲ್ಲಿ ಮಠ ಮಾನ್ಯಗಳ ಪಾತ್ರ ಕುರಿತ ಉಪನ್ಯಾಸ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಮಾತನಾಡಿದರು.ಕನ್ನಡ ನಾಡು, ನುಡಿ ಬೆಳವಣಿಗೆಯಲ್ಲಿ ಮಠ-ಮಾನ್ಯಗಳ ಪಾತ್ರ ದೊಡ್ಡದಿದೆ. ಕನ್ನಡ ಸಾಹಿತ್ಯದ ಬೆಳವಣಿಗೆ ಹಾಗೂ ಶಿಕ್ಷಣ ರಂಗದಲ್ಲಿ ಮಠ-ಮಾನ್ಯಗಳು ಕನ್ನಡ ಬೆಳೆಸುವ ಕಾರ್ಯ ಮಾಡುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ಎಲೆ ಮರೆಯ ಕಾಯಿಯಂತೆ ಕನ್ನಡ ಸಾಹಿತ್ಯದ ಅನೇಕ ಪ್ರತಿಭೆಗಳು ಇವೆ ಅವುಗಳನ್ನು ಪ್ರೋತ್ಸಾಹಿಸಿ ಬೆಳೆಸುವ ಕೆಲಸವನ್ನು ಕನ್ನಡದ ಮನಸುಗಳು ಹಾಗೂ ಕಸಾಪ ಮಾಡಬೇಕಿದೆ ಎಂದರು.ಶಿಕ್ಷಕ ಗಿರಿಯಪ್ಪ ಹಾರನಳ್ಳಿ ಮಾತನಾಡಿ. ಕನ್ನಡ ನಾಡು, ನುಡಿಯ ಬೆಳವಣಿಗೆಯಲ್ಲಿ ಮಠಗಳು ಹಾಗೂ ದಾಸ ಶ್ರೇಷ್ಠರು, ಬಸವಾದಿ ಶರಣರು, ವಚನಕಾರರು ಪ್ರಮುಖ ಪಾತ್ರ ವಹಿಸಿದ್ದಾರೆ ಹಾಗೂ ಕನ್ನಡ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ್ದಾರೆ. ಮಠಗಳು ಸಾಹಿತ್ಯದೊಂದಿಗೆ ಅವಿನಾಭಾವ ಸಂಬಂಧ ಹೊಂದಿವೆ. ಪುರಾಣ ಪ್ರವಚನ, ಅದ್ಯಾತ್ಮಿಕ ಕಾರ್ಯಕ್ರಮ ಮುಂತಾದವುಗಳ ಜೊತೆಗೆ ಕನ್ನಡ ಸಾಹಿತ್ಯ ಬೆಳೆಸುತ್ತಿವೆ. ಕನ್ನಡ ಜಗತ್ತಿನ ಹತ್ತು ಪ್ರಮುಖ ಬಾಷೆಗಳಲ್ಲಿ ಸ್ಥಾನ ಪಡೆದಿದೆ. ರಾಜ ಮಹಾರಾಜರು ಕೂಡ ಭಾಷೆ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ರಾಜ್ಯದ ದೊಡ್ಡ ಮಠಗಳು ಭಾಷೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದರು.ಮಾಜಿ ತಾಪಂ ಸದಸ್ಯ ಡಾ.ಸಿದ್ದಲಿಂಗಸ್ವಾಮಿ ಇನಾಮದಾರ ಮಾತನಾಡಿ, ಕನ್ನಡ ಭಾಷೆ ವೈಜ್ಞಾನಿಕ ತಳಹದಿಯ ಮೇಲೆ ರೂಪಿತವಾಗಿದೆ. ಮಾತೃ ಬಾಷೆ ಬಳಕೆ ಬಗ್ಗೆ ಹಿಂಜರಿಕೆ ಬೇಡ. ಮಠ ಮಾನ್ಯಗಳು ಹಿಂದಿನ ಕಾಲದಲ್ಲಿ ಗುರುಕುಲ ಪದ್ದತಿ ಮೂಲಕ ಶಿಕ್ಷಣ ನೀಡುತ್ತಿದ್ದವು. ಈಗಲೂ ಸಹ ಕನ್ನಡ ಭಾಷೆ ಬೆಳಚಣಿಗೆಯಲ್ಲಿ ಮುಂಚೂಣಿಯಲ್ಲಿವೆ. ಕನ್ನಡಿಗರು ಶಾಂತಿಪ್ರಿಯರು. ಎಲ್ಲಾ ಬಾಷೆಗಳ ಜನರನ್ನು ಪ್ರೀತಿಸುತ್ತಾರೆ ಜೊತೆಗೆ ನಮ್ಮ ಭಾಷೆ 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದು ಶ್ರೇಷ್ಠ ಭಾಷೆಯಾಗಿದೆ ಎಂದರು.ಸೋಮನಾಥ ಗವಾಯಿ, ಉಮೇಶರಡ್ಡಿ ಗದ್ದಿಕೇರಿ, ಗಳಿಂದ ಸಂಗೀತ ಕಾರ್ಯಕ್ರಮ ನಡೆಯಿತು. ನಂತರ ಸಾಧಕರನ್ನು ಸನ್ಮಾನಿಸಲಾಯಿತು.ಕಸಾಪ ಅಳವಂಡಿ ಹೋಬಳಿ ಅಧ್ಯಕ್ಷ ಸುರೇಶ ಘಟ್ಟಿರಡ್ಡಿಹಾಳ, ಪ್ರಮುಖರಾದ ರಾಜೇಶಸ್ವಾಮಿ ಇನಾಮದಾರ, ಕಿರಣ ಅಂಗಡಿ, ಜುನುಸಾಬ, ಅಶೋಕ ಬಂಡಿ, ನಾಗಪ್ಪ ಮಾಸ್ತರ, ನೀಲಪ್ಪ ಹಕ್ಕಂಡಿ, ಚಿಕ್ಕವೀರಜ್ಜ, ಬಸವರಾಜ ಟುಬಾಕಿ, ಗವಿಸಿದ್ದಪ್ಪ ಕೊರಗಲ್, ಶರಣಪ್ಪ ಗದ್ದಿಕೇರಿ, ದೇವಪ್ಪ ಕಟ್ಟಿಮನಿ, ಬೀಮರಡ್ಡೆಪ್ಪ ಗದ್ದಿಕೇರಿ, ಜಗನ್ನಾಥರಡ್ಡಿ ದಾಸರಡ್ಡಿ ಇದ್ದರು.