ಕನ್ನಡ ಭವನ ಕ್ಯಾಂಟೀನ್‌ ಬಾಡಿಗೆ 10 ಪಟ್ಟು ಹೆಚ್ಚಳ!

KannadaprabhaNewsNetwork |  
Published : Apr 16, 2024, 02:02 AM ISTUpdated : Apr 16, 2024, 07:09 AM IST
ಕನ್ನಡಭವನ | Kannada Prabha

ಸಾರಾಂಶ

4 ದಶಕಗಳಿಂದ ಕಡಿಮೆ ದರದಲ್ಲಿ ನಡೆಯುತ್ತಿದ್ದ ಕನ್ನಡ ಭವನ ಕ್ಯಾಂಟೀನ್‌ ದರ ಏಕಾಏಕಿ 10 ಪಟ್ಟು ಹೆಚ್ಚಿದೆ. ಹೊಸದಾಗಿ ಕರೆದಿದ್ದ ಟೆಂಡರ್‌ನಲ್ಲಿ 59 ಸಾವಿರಕ್ಕೆ ಟೆಂಡರ್‌ ಆಗಿದೆ.

 ಬೆಂಗಳೂರು :  ನಗರದ ಜೆ.ಸಿ.ರಸ್ತೆಯ ಕನ್ನಡ ಭವನದ ಆವರಣದಲ್ಲಿರುವ ಕ್ಯಾಂಟೀನ್‌ ಬಾಡಿಗೆ ದರವನ್ನು ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದ ಕಾರಂತರ ಕ್ಯಾಂಟೀನ್‌ ಶೀಘ್ರದಲ್ಲೇ ಸ್ಥಗಿತಗೊಳ್ಳಲಿದ್ದು, ಹೊಸದಾಗಿ ಟೆಂಡರ್‌ ಪಡೆದಿರುವ ‘ಶ್ರೀನಿಧಿ ಕೇಟರ್ಸ್‌’ ಕ್ಯಾಂಟೀನ್‌ ಆರಂಭಿಸಲಿದೆ.

ಪ್ರಾರಂಭದಲ್ಲಿ ಅತ್ಯಂತ ಕಡಿಮೆ ಬಾಡಿಗೆ ನಿಗದಿ ಮಾಡಲಾಗಿತ್ತು. 2013ರಲ್ಲಿ ಕ್ಯಾಂಟೀನ್‌ ಮಾಲೀಕರಾದ ಎ.ಪಿ.ಕಾರಂತ ಅವರು, ₹5 ಸಾವಿರ ಬಾಡಿಗೆ ಮತ್ತು ₹500 ಜಿಎಸ್‌ಟಿ ಸೇರಿ ಒಟ್ಟು ₹5,500ಕ್ಕೆ ಲೋಕೋಪಯೋಗಿ ಇಲಾಖೆಯ ಈ ಕ್ಯಾಂಟೀನ್‌ ಕಟ್ಟಡವನ್ನು ಬಾಡಿಗೆಗೆ ಪಡೆದುಕೊಂಡಿದ್ದರು. ಅಲ್ಲಿಂದ ಈವರೆಗೂ ಬಾಡಿಗೆ ದರ ಪರಿಷ್ಕರಣೆ ಮಾಡಿರಲಿಲ್ಲ. ಇತ್ತೀಚೆಗೆ ಈ ಕುರಿತು ದೂರುಗಳು ಬಂದಿದ್ದು, ಆರ್‌ಟಿಐ ಮೂಲಕವೂ ಮಾಹಿತಿ ಕೇಳಲಾಗಿತ್ತು.

ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಲೋಕೋಪಯೋಗಿ ಇಲಾಖೆ ಆನ್‍ಲೈನ್ ಮೂಲಕ ಆಸಕ್ತರಿಗೆ ಅವಕಾಶ ನೀಡಿ ಟೆಂಡರ್ ಕರೆದಿತ್ತು. ಪ್ರಸ್ತುತ ಜೆ.ಸಿ.ರಸ್ತೆಯಲ್ಲಿ ಮಾರುಕಟ್ಟೆ ದರದ ಆಧಾರದಲ್ಲಿ ಜಿಎಸ್‍ಟಿ ಸಹಿತ ಬಾಡಿಗೆಯನ್ನು ₹59 ಸಾವಿರಕ್ಕೆ ನಿಗದಿಪಡಿಸಲಾಗಿತ್ತು. ಕ್ಯಾಂಟೀನ್‍ಗೆ ಬೇಡಿಕೆ ಸಲ್ಲಿಸಿ, ಮೂವರು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಈ ಪೈಕಿ ಹೆಚ್ಚು ಹಣ ಪಾವತಿಸಲು ಮುಂದೆ ಬಂದ ‘ಶ್ರೀನಿಧಿ ಕೇಟರ್ಸ್‌’ಗೆ ಕ್ಯಾಂಟೀನ್‌ ಕಟ್ಟಡ ಲಭ್ಯವಾಗಿದೆ. ಈಗ ಕ್ಯಾಂಟೀನ್ ನಡೆಸುತ್ತಿರುವ ಕಾರಂತ್ ಅವರು ಟೆಂಡರ್‌ನಲ್ಲಿ ಭಾಗವಹಿಸಲಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.ತಿಂಡಿ, ಊಟ ದರ ಹೆಚ್ಚಳ ಸಾಧ್ಯತೆ

ಹೊಸದಾಗಿ ಕ್ಯಾಂಟೀನ್‌ ಆರಂಭಿಸುವವರು ಕಟ್ಟಡವನ್ನು ಒಡೆಯುವಂತಿಲ್ಲ. ಈಗ ಇರುವ ಕಟ್ಟಡದಲ್ಲೇ ಯಥಾಪ್ರಕಾರ ಮುನ್ನಡೆಸಬೇಕು. ಬೇಕಿದ್ದರೆ ಒಳಾಂಗಣದ ವಿನ್ಯಾಸವನ್ನು ಈಗಿನ ಅವಶ್ಯಕತೆಗೆ ತಕ್ಕಂತೆ ಅಲಂಕರಿಸಿಕೊಳ್ಳಬಹುದು ಎಂಬ ನಿಯಮಗಳನ್ನು ಪಾಲಿಸಬೇಕು ಎಂದು ಸೂಚಿಸಲಾಗಿದೆ.

ಹೆಚ್ಚು ಮೊತ್ತಕ್ಕೆ ಕ್ಯಾಂಟೀನ್‌ ಕಟ್ಟಡ ಪಡೆದಿರುವ ಮ್ಯಾನೇಜ್‌ಮೆಂಟ್‌, ಊಟ, ತಿಂಡಿ ಇತ್ಯಾದಿಗಳ ದರವನ್ನು ಹೆಚ್ಚಿಸುವ ಸಾಧ್ಯತೆ ಇದೆ. ಇದರಿಂದ ಬಡ ಕಲಾವಿದರು, ಸಾರ್ವಜನಿಕರು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ ವಿವಿಧ ಅಕಾಡೆಮಿಗಳ ಸಿಬ್ಬಂದಿಗೂ ಸಮಸ್ಯೆಯಾಗಲಿದೆ ಎಂಬ ಹಲವು ಕಲಾವಿದರು ಅಲವತ್ತುಕೊಂಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!