-ಪೂರ್ವಭಾವಿ ಸಭೆಯಲ್ಲಿ ಅದ್ಧೂರಿ ಸ್ವಾಗತ, ಅಗತ್ಯ ಕ್ರಮಕ್ಕೆ ಎಡಿಸಿ ಸೂಚನೆ ರಾಮನಗರ: ಜಿಲ್ಲೆಯಲ್ಲಿ ಆಗಸ್ಟ್ 13ರಿಂದ 17ರವರೆಗೆ ಕನ್ನಡ ಜ್ಯೋತಿ ರಥಯಾತ್ರೆ ಸಂಚರಿಸಲಿದ್ದು, ರಥಯಾತ್ರೆಗೆ ಅದ್ಧೂರಿ ಸ್ವಾಗತ ಕೋರುವುದು ಸೇರಿದಂತೆ ರಥ ಸಂಚರಿಸುವ ಮಾರ್ಗಗಳಲ್ಲಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಚಂದ್ರಯ್ಯ ಜಿಲ್ಲೆಯ ತಹಸೀಲ್ದಾರರಿಗೆ ಸೂಚನೆ ನೀಡಿದರು.
ಕನ್ನಡ ಜ್ಯೋತಿ ರಥ ಆ.13ರಂದು ಮಾಗಡಿ, 14ರಂದು ರಾಮನಗರ, 15ರಂದು ಹಾರೋಹಳ್ಳಿ, 16ರಂದು ಕನಕಪುರ ಮತ್ತು 17ರಂದು ಚನ್ನಪಟ್ಟಣಕ್ಕೆ ಆಗಮಿಸಲಿದೆ. ಜನಪ್ರತಿನಿಧಿಗಳು, ರಥ ಸಂಚಾರದಲ್ಲಿ ಯಾವುದೇ ಸಮಸ್ಯೆಗಳು ಉದ್ಭವಿಸದಂತೆ ಎಲ್ಲಾ ತಹಸೀಲ್ದಾರರು ಎಚ್ಚರಿಕೆ ವಹಿಸಬೇಕು. ರಥ ಸಂಚರಿಸುವ ಮಾರ್ಗವನ್ನು ಮೊದಲೇ ಸಿದ್ಧಪಡಿಸಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ರಥಯಾತ್ರೆ ಸಂಚರಿಸುವ ವೇಳೆ ಖುದ್ದು ತಹಸೀಲ್ದಾರರು ಹಾಜರಿದ್ದು ಜಿಲ್ಲಾಧಿಕಾರಿಗಳ ಕಚೇರಿಗೆ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ಬಾಬು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಟಿ.ನಾಗೇಶ್, ಕನ್ನಡ ಪರ ಸಂಘಟನೆ ಮುಖಂಡರಾದ ರಾಜು, ರವಿ, ಶಿವು, ಜಗದೀಶ್, ಮಾದೇಗೌಡ, ಕಿರಣ್, ಜಯಕುಮಾರ್ ಮತ್ತಿತರರಿದ್ದರು.