ಸಂಕಟ ಎದುರಿಸುವ ಸಾಮರ್ಥ್ಯ ಕನ್ನಡಕ್ಕಿದೆ

KannadaprabhaNewsNetwork |  
Published : Nov 03, 2025, 02:15 AM IST
ಕಾರ್ಯಕ್ರಮವನ್ನ ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಉದ್ಘಾಟಿಸಿದರು. | Kannada Prabha

ಸಾರಾಂಶ

ಕನ್ನಡ ಭಾಷೆ, ಸಂಸ್ಕೃತಿಗೆ ಬಹುಕಾಲದ ಇತಿಹಾಸ ಇದೆ. ಆಯಾ ಕಾಲಘಟ್ಟದಲ್ಲಿ ಸಂಸ್ಕೃತ, ಉರ್ದು, ಮರಾಠಿ, ತಮಿಳು, ತೆಲುಗು ಭಾಷೆಗಳೊಂದಿಗೆ ಪೈಪೋಟಿ ಎದುರಿಸಿದರು ಕನ್ನಡ ಸತ್ವಯುತವಾಗಿ ಬೆಳೆದಿದೆ.

ಗದಗ:

ಕನ್ನಡ ಭಾಷೆ, ಸಂಸ್ಕೃತಿಗೆ ಬಹುಕಾಲದ ಇತಿಹಾಸ ಇದೆ. ಆಯಾ ಕಾಲಘಟ್ಟದಲ್ಲಿ ಸಂಸ್ಕೃತ, ಉರ್ದು, ಮರಾಠಿ, ತಮಿಳು, ತೆಲುಗು ಭಾಷೆಗಳೊಂದಿಗೆ ಪೈಪೋಟಿ ಎದುರಿಸಿದರು ಕನ್ನಡ ಸತ್ವಯುತವಾಗಿ ಬೆಳೆದಿದೆ. ಸದ್ಯದ ಪರಿಸ್ಥಿತಿಯಲ್ಲಿ ಇಂಗ್ಲಿಷ್‌ನೊಂದಿಗೆ ಮುಖಾಮುಖಿಯಾಗುತ್ತಿದ್ದರು ಈ ಎಲ್ಲ ಸಂಕಟಗಳನ್ನು ಎದುರಿಸುವ ಸಾಮರ್ಥ್ಯ ಕನ್ನಡಕ್ಕಿದೆ ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ತಿಳಿಸಿದರು.

ನಗರದ ತೋಂಟದ ಸಿದ್ಧಲಿಂಗಶ್ರೀ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ನವೆಂಬರ್‌ ಕನ್ನಡ ತಿಂಗಳಿನ ಅಂಗವಾಗಿ ಜಿಲ್ಲೆಯಾದ್ಯಂತ ಜರುಗುವ ಕನ್ನಡ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವಿನೂತನ ಕಾರ್ಯಕ್ರಮಗಳ ಮೂಲಕ ಜನಸಾಮಾನ್ಯರಲ್ಲಿ ಕನ್ನಡದ ಪ್ರಜ್ಞೆಯನ್ನು ಸದಾ ಜೀವಂತವಾಗಿಡುವ ಪ್ರಯತ್ನ ಮಾಡುತ್ತಿದೆ ಎಂದರು.

ಪ್ರಾಚಾರ್ಯ ಡಾ. ರಮೇಶ ಕಲ್ಲನಗೌಡರ ಶತಮಾನ ಕಂಡ ನಾಡಗೀತೆ ಕುರಿತು ಮಾತನಾಡಿ, ಕುವೆಂಪು ವಿರಚಿತ ಜಯ ಭಾರತ ಜನನಿಯ ತನುಜಾತೆ ಗೀತೆ ರಚನೆಯಾಗಿ ನೂರು ವರ್ಷ ಸಂದಿವೆ. ದೇಶದ ವೈಶಿಷ್ಟ್ಯ ಹೇಳುತ್ತಾ ಕನ್ನಡ ನಾಡಿನ ಹಿರಿಮೆ, ಗರಿಮೆ ಬಿಂಬಿಸುವ ಈ ಗೀತೆ ಸಮಕಾಲೀನ ಸಂದರ್ಭಕ್ಕೆ ಸೂಕ್ತವಾಗಿದೆ. ಸರ್ವಜನಾಂಗ ಶಾಂತಿಯ ತೋಟವನ್ನಾಗಿ ಕರ್ನಾಟಕವನ್ನು ನೋಡುವ ಆಶಯವನ್ನು ಹೊಂದಿದೆ. ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ಹುಯಿಲಗೋಳ ನಾರಾಯಣರಾಯರು ವಿರಚಿತ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಗೀತೆ ಕೂಡಾ ಆ ಕಾಲದಲ್ಲಿ ನಾಡಗೀತೆಯ ಸ್ವರೂಪವನ್ನು ಪಡೆದುಕೊಂಡು ಕನ್ನಡಿಗರೆಲ್ಲರೂ ಒಂದುಗೂಡಿಸುವ ಪ್ರಯತ್ನ ಮಾಡಿತು. ಇದು ಕಾವ್ಯಕ್ಕಿರುವ ಶಕ್ತಿಯಾಗಿದೆ. ಮೈಸೂರು ಅರಸರ ಸಂಸ್ಥಾನವು ಕೂಡಾ ನಾಡಗೀತೆ ಹೊಂದಿತ್ತು ಎಂದು ತಿಳಿಸಿದರು.

ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ನಾಡಗೀತೆ ನಮ್ಮಲ್ಲಿ ಕನ್ನಡಾಭಿಮಾನವನ್ನು ಇಮ್ಮಡಿಗೊಳಿಸುವ ಶಕ್ತಿ ಹೊಂದಿದೆ. ಅದರ ಆಶಯಗಳನ್ನು ಈಡೇರಿಸುವುದು ಪ್ರತಿ ಕನ್ನಡಿಗರ ಕರ್ತವ್ಯವಾಗಿದೆ. ಡೆಪ್ಯುಟಿ ಚನ್ನಬಸಪ್ಪನವರು ಈ ಭಾಗದಲ್ಲಿ ಕನ್ನಡದ ಶಾಲೆಗಳನ್ನು ಪ್ರಾರಂಭಿಸುವ ಮೂಲಕ ಕನ್ನಡವನ್ನು ಗಟ್ಟಿಗೊಳಿಸಿದರು. ಪ್ರತಿ ಕನ್ನಡ ಶಾಲೆಯಲ್ಲಿ ಅವರ ಭಾವಚಿತ್ರ ಅಳವಡಿಸಲು ಶಿಕ್ಷಣ ಇಲಾಖೆ ಮುಂದಾಗಬೇಕೆಂದು ಒತ್ತಾಯಿಸಿದರು.

ಜಿಲ್ಲಾ, ತಾಲೂಕು ಹಾಗೂ ಹೋಬಳಿ ಘಟಕಗಳ ಆಶ್ರಯದಲ್ಲಿ ಜಿಲ್ಲೆಯಾದ್ಯಂತ 70 ಕಾರ್ಯಕ್ರಮಗಳನ್ನು ನವೆಂಬರ್‌ ತಿಂಗಳಲ್ಲಿ ಆಯೋಜಿಸಲಾಗಿದೆ ಎಂದರು.

ಈ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿರೂಪಾಕ್ಷಪ್ಪ ಕ್ಷತ್ರಿ, ಬಸವರಾಜ ಕಡೇಮನಿ, ಶಿವಕುಮಾರಗೌಡ ಪಾಟೀಲ ಅವರನ್ನು ಸನ್ಮಾನಿಸಲಾಯಿತು.

ಕೆ.ಎಚ್. ಬೇಲೂರ, ಚಂದ್ರಶೇಖರ ವಸ್ತ್ರದ, ರಶ್ಮಿ ಅಂಗಡಿ, ಶಿವಪ್ಪ ಕುರಿ, ಸಿ.ಕೆ.ಎಚ್. ಶಾಸ್ತ್ರಿ, ಅಂದಾನೆಪ್ಪ ವಿಭೂತಿ, ಅನ್ನದಾನಿ ಹಿರೇಮಠ, ಪಿ.ಎಚ್. ಕಡಿವಾಲ, ಗಿರಿಜಕ್ಕ ಧರ್ಮರೆಡ್ಡಿ, ರತ್ನಕ್ಕ ಪಾಟೀಲ, ಬೂದಪ್ಪ ಅಂಗಡಿ, ಮಹಾಂತೇಶ ದೊಡ್ಡಮನಿ, ಉಮಾ ಕಣವಿ, ಶಿವಾನಂದ ಭಜಂತ್ರಿ, ಬಿ.ಬಿ. ಪಾಟೀಲ, ಮಹೇಶ ಶಟವಾಜಿ, ನಾಗಪ್ಪ ಸುರಳಿಕೇರಿ, ದಾನಯ್ಯ ಗಣಾಚಾರಿ, ರಮೇಶ ಹುಲಕುಂದ, ದೇವೇಂದ್ರ ನಾಯಕ, ಬಸವರಾಜ ವಾರಿ, ಮಂಜುಳಾ ಹಾಸಲಕರ, ಆರ್.ಜಿ. ಹಾಸಲಕರ, ಎ.ಎಚ್. ಮುದರಡ್ಡಿ, ಜೆ.ಎ. ಪಾಟೀಲ, ಬಿ.ಕೆ. ನಿಂಬನಗೌಡರ, ಕೆ.ಎಸ್. ಪಲ್ಲೇದ, ಶಶಿಕಾಂತ ಕೊರ್ಲಹಳ್ಳಿ, ಜ್ಯೋತಿ ಹೇರಲಗಿ, ಪಾರ್ವತಿ ಬೇವಿನಮರದ, ಎಸ್.ಎ. ಬಾಣದ, ಸುಜಾತಾ ವಾರದ, ನೀಲಮ್ಮ ಅಂಗಡಿ ಸೇರಿದಂತೆ ಇತರರು ಇದ್ದರು.

ದತ್ತಪ್ರಸನ್ನ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಡಿ.ಎಸ್. ಬಾಪುರಿ ವಂದಿಸಿದರು. ಗೌಡಪ್ಪ ಹಾಗೂ ಅಶೋಕ ಹಾದಿ ಕನ್ನಡ ಗೀತೆಗಳನ್ನು ಪ್ರಸ್ತುತಪಡಿಸಿದರು.

PREV

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ