ಕನ್ನಡ ಹಿತರಕ್ಷಕ ಸಂಘದ 55ನೇ ವಾರ್ಷಿಕೋತ್ಸವ ಸಮಾರಂಭ

KannadaprabhaNewsNetwork |  
Published : Dec 02, 2025, 02:30 AM IST
ಕಂಪ್ಲಿಯಲ್ಲಿ ಕನ್ನಡ ಕನ್ನಡ ಹಿತರಕ್ಷಕ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಸಂಘದ 55ನೇ ವಾರ್ಷಿಕೋತ್ಸವ ಸಮಾರಂಭ ನಡೆಸಲಾಯಿತು.  | Kannada Prabha

ಸಾರಾಂಶ

ಒಂದು ಸಂಘವನ್ನು 55 ವರ್ಷಗಳ ಕಾಲ ನಿರಂತರವಾಗಿ ಚುರುಕು ಕಾರ್ಯಚಟುವಟಿಕೆಯೊಂದಿಗೆ ಸಾಗಿಸುವುದು ದೊಡ್ಡ ಕೆಲಸ.

ಕಂಪ್ಲಿ: ಪಟ್ಟಣದ ವೀರಶೈವ ಸಂಘದ ಆವರಣದಲ್ಲಿ ಕನ್ನಡ ಹಿತರಕ್ಷಕ ಸಂಘದ ವತಿಯಿಂದ ಆಯೋಜಿಸಲ್ಪಟ್ಟ ಕರ್ನಾಟಕ ರಾಜ್ಯೋತ್ಸವ ಹಾಗೂ ಸಂಘದ 55ನೇ ವಾರ್ಷಿಕೋತ್ಸವ ಸಮಾರಂಭ ಇತ್ತೀಚೆಗೆ ಭವ್ಯವಾಗಿ ಜರುಗಿತು.

ಶಾಸಕ ಜೆ.ಎನ್. ಗಣೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಒಂದು ಸಂಘವನ್ನು 55 ವರ್ಷಗಳ ಕಾಲ ನಿರಂತರವಾಗಿ ಚುರುಕು ಕಾರ್ಯಚಟುವಟಿಕೆಯೊಂದಿಗೆ ಸಾಗಿಸುವುದು ದೊಡ್ಡ ಕೆಲಸ. ಕರ್ನಾಟಕ ಏಕೀಕರಣದ ರೂವಾರಿಗಳನ್ನು ಪ್ರತಿನಿತ್ಯ ಸ್ಮರಿಸಿಕೊಳ್ಳಬೇಕು. ಹಲವು ಭಾಷೆಗಳ ನಾಡಾದ ಕರ್ನಾಟಕದಲ್ಲಿ ಇಂದು ಕನ್ನಡಿಗರಿಗೆ ಕೈಗಾರಿಕೆಗಳಲ್ಲಿ ಉದ್ಯೋಗ ದೊರಕದಿರುವುದು ಕಳವಳಕಾರಿ. ಕನ್ನಡ ಶಾಲೆಗಳ ಉಳಿವಿಗೆ ಮಕ್ಕಳನ್ನು ಕನ್ನಡ ಮಾಧ್ಯಮಕ್ಕೆ ಸೇರಿಸುವ ಮನೋಭಾವ ಬೆಳೆಯಬೇಕು. ಅನ್ಯಭಾಷಿಕರಿಗೆ ಕನ್ನಡ ಕಲಿಸುವ ಕಾರ್ಯವೂ ಸಂಘಟನೆಗಳ ಆದ್ಯತೆಯಾಗಬೇಕು ಎಂದರು.

ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸಿದ್ಧರಾಮ ಕಲ್ಮಠ ಕರ್ನಾಟಕ ಏಕೀಕರಣದ ಇತಿಹಾಸವನ್ನು ಸ್ಮರಿಸಿ ಮಾತನಾಡಿ, ಕರ್ನಾಟಕ ಏಕೀಕರಣ ಹೋರಾಟಕ್ಕೆ ಬಳ್ಳಾರಿ ಜಿಲ್ಲೆಯು ಪ್ರಮುಖ ಪ್ರೇರಣೆಯಾಗಿತ್ತು. ಇಂದು ಗಡಿಭಾಗದ ಕನ್ನಡಿಗರು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಭಾವನಾತ್ಮಕ ನಿಲುವಿನ ಮೇಲೆ ಕನ್ನಡವನ್ನು ಕಟ್ಟುವ ಆರೈಕೆ ಎಲ್ಲರಲ್ಲೂ ಮೂಡಬೇಕು. ಇಂಗ್ಲಿಷ್ ಶಾಲೆಗಳ ಅತಿರೇಕದ ಪ್ರದರ್ಶನವನ್ನು ಸರ್ಕಾರ ಮೌನವಾಗಿ ನೋಡುವುದು ನಿಜಕ್ಕೂ ವಿಪರ್ಯಾಸ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸಾಹಿತ್ಯ–ಸಂಸ್ಕೃತಿ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಹಲವು ವ್ಯಕ್ತಿಗಳನ್ನು ಗೌರವಿಸಲಾಯಿತು. ರಂಗಭೂಮಿ ಕಲಾವಿದ ಚಿದಾನಂದ ಗವಾಯಿ, ಬಾಲ ಯೋಗಪಟು ಎಸ್. ಪೂಜಾ, ಲೇಖಕ ಬಂಗಿ ದೊಡ್ಡ ಮಂಜುನಾಥ, ಬುರ್ರಕಥಾ ಕಲಾವಿದೆ ಜಂಬಕ್ಕ, ಪತ್ರಕರ್ತರ ಸಂಘದ ಜಿಲ್ಲಾ ಪದಾಧಿಕಾರಿಗಳಾದ ದ್ಯಾಮನಗೌಡ, ಜಿ. ಚಂದ್ರಶೇಖರಗೌಡ ಮೊದಲಾದವರನ್ನು ಗೌರವಿಸಲಾಯಿತು. ಶಾಲೆ–ಕಾಲೇಜು ವಿದ್ಯಾರ್ಥಿಗಳು ನೃತ್ಯ, ಗೀತೆ, ನಾಟಕ ಮೊದಲಾದ ಸಾಂಸ್ಕೃತಿಕ ಪ್ರದರ್ಶನಗಳಿಂದ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.

ವೀರಶೈವ ಸಂಘದ ತಾಲೂಕು ಅಧ್ಯಕ್ಷ ಪಿ. ಮೂಕಯ್ಯಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಪ್ರಭಾರಿ ಪುರಸಭೆ ಮುಖ್ಯಾಧಿಕಾರಿ ಬಿ. ಮಲ್ಲಿಕಾರ್ಜುನ, ಸಂಘದ ಅಧ್ಯಕ್ಷ ಬೂದಗುಂಪಿ ಅಂಬಣ್ಣ, ಗೌರವಾಧ್ಯಕ್ಷ ಕ.ಮ. ಹೇಮಯ್ಯಸ್ವಾಮಿ, ಪದಾಧಿಕಾರಿಗಳಾದ ಸಿ. ಯಂಕಪ್ಪ, ಮಾ. ಶ್ರೀನಿವಾಸ, ಕ. ಯಂಕಾರೆಡ್ಡಿ, ಕ. ಮೆಹಬೂಬ್ ಹಾಗು ಗಣ್ಯರು ಅಂಬಿಗರ ಮಂಜುನಾಥ, ಎಸ್.ಡಿ. ಬಸವರಾಜ, ಎಲಿಗಾರ ವೆಂಕಟರೆಡ್ಡಿ, ಎಸ್. ಶಾಮಸುಂದರರಾವ್, ಅಶೋಕ ಕುಕನೂರು, ಎಂ. ವಿಜಯಕುಮಾರ್ ಸೇರಿ ಅನೇಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣಕ್ಕೆ ಸಿದ್ಧಗಂಗಾ ಮಠದ ಕೊಡುಗೆ ಅನನ್ಯ
ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಪಾಡಿ