ದಾಂಡೇಲಿ: ಕನ್ನಡ ಕೇವಲ ಒಂದು ಭಾಷೆಯಲ್ಲ, ಇದು ನಮ್ಮ ಸಂಸ್ಕೃತಿಯ ಅಡಿಪಾಯ. ನಮ್ಮ ಭಾವನೆಗಳ ಅಭಿವ್ಯಕ್ತಿ, ನಮ್ಮ ಆದ್ಯತೆಯ ಗುರುತು. ಜಗತ್ತಿನಲ್ಲಿ ಅತ್ಯಂತ ಪ್ರಾಚೀನ ಭಾಷೆಗಳಲ್ಲೊಂದು ಆಗಿರುವ ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ ಎಂದು ಸಾಹಿತಿ ರೋಷನ್ ನೇತ್ರಾವಳಿ ಹೇಳಿದರು.
ಕನ್ನಡ ಕೇವಲ ಭಾಷೆಯಲ್ಲ, ನಮ್ಮ ಮಣ್ಣಿನ ನಾಡಗುಣ, ನಡತೆ, ಸಂಸ್ಕೃತಿ, ಸಂವೇದನೆಗಳು ಎಲ್ಲವನ್ನೂ ಒಳಗೊಂಡಿದೆ. ನಮ್ಮ ನಿತ್ಯಜೀವನದಲ್ಲಿ ಬಳಸುವ ಕನ್ನಡಕ್ಕೆ ಗೌರವ ಕೊಡುವುದು, ಅದನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಇಂದು ಇಂಗ್ಲಿಷ್, ಹಿಂದಿ, ಇತರ ಭಾಷೆಗಳನ್ನು ಕಲಿಯುವುದು ಅಗತ್ಯವಾಗಿದೆ. ಆದರೆ ಅದಕ್ಕಾಗಿ ಕನ್ನಡವನ್ನು ಕಡೆಗಣಿಸುವಂತಿಲ್ಲ. ಮೊದಲಿಗೆ ಕನ್ನಡದಲ್ಲೇ ಕನಸು ಕಾಣಬೇಕು, ಯೋಚಿಸಬೇಕು. ನಂತರ ಬೇರೆಯದ್ದನ್ನೂ ಅರಗಿಸಿಕೊಳ್ಳಬೇಕು. ನಮ್ಮ ಭಾಷೆ ನಮ್ಮ ಹೆಮ್ಮೆ ಎಂಬ ನಂಬಿಕೆಯಿಂದ ನಮ್ಮ ಮನೆಯಲ್ಲೂ, ಶಾಲೆಯಲ್ಲೂ, ಸಮಾಜದಲ್ಲೂ ಕನ್ನಡ ಭಾಷೆಯ ಬಳಕೆ ಹೆಚ್ಚಿಸಿ, ಮುಂದಿನ ಪೀಳಿಗೆಗೂ ಕನ್ನಡದ ಮಹತ್ವ ತಿಳಿಯುವಂತೆ ಮಾಡೋಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಸಾಪ ತಾಲೂಕು ಘಟಕದ ಅಧ್ಯಕ್ಷ ನಾರಾಯಣ ನಾಯ್ಕ ಭಾವನೆಗಳಿಗೆ ಪ್ರಾಮುಖ್ಯತೆ ನೀಡುವ ಈ ಭಾವಗೀತೆಗಳು ಸೂಕ್ಷ್ಮ ಮತ್ತು ಆಳವಾದ ಅರ್ಥವಿರುವ ಗೀತೆಗಳು. ಹಾಡುಗಳು ಸಾಮಾನ್ಯವಾಗಿ ದೇಶಭಕ್ತಿ, ನಾಡು, ಭಾಷೆ, ಪ್ರಕೃತಿ, ಪ್ರೇಮ, ವಿರಹ, ಪರಿಸರ ಪ್ರೀತಿ ಮಾನವೀಯತೆ, ಸಾಂಸ್ಕೃತಿಕ ಮೌಲ್ಯಗಳು ಮುಂತಾದ ವಿಷಯಗಳನ್ನು ಆಳವಾಗಿ ಸ್ಪರ್ಶಿಸುತ್ತವೆ. ಭಾವಗೀತೆಗಳು ಕನ್ನಡಿಗರಲ್ಲಿ ಭಾಷೆಯ ಮೇಲಿನ ಪ್ರೀತಿಯನ್ನು ಹೆಚ್ಚಿಸುವುದಲ್ಲದೆ, ಜನರ ಹೃದಯದಲ್ಲಿ ಭಾಷೆ ಬೇರೂರಲು ಸಹಾಯ ಮಾಡುತ್ತವೆ. ಭಾವಗೀತೆಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ ಎಂದರು.ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ರಾಜ್ಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ನೌಕರರ ಒಕ್ಕೂಟ, ದಾಂಡೇಲಿ ಘಟಕದ ಅಧ್ಯಕ್ಷ ಮಹೇಶ್ ಆದಿವಾಸಿ, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಮುರ್ತುಜಾಹುಸೇನ್ ಆನೆಹೊಸೂರ ಮಾತನಾಡಿದರು.
ದಾಂಡೇಲಿ ತಾಲೂಕು ಕಸಾಪದಿಂದ ಕಾರ್ಯಕ್ರಮದ ದಾಸೋಹಿಗಳ ಪುತ್ರ ಜಯದೇವ ಸಿರಿಗೇರಿಯವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್.ಎಸ್.ಕುರ್ಡೇಕರ, ಎಸ್.ಎಸ್.ಪೂಜಾರ, ಎಂ.ಆರ್. ನಾಯಕ, ಬಾಬು ಜರಿ, ಉಜ್ವಲ ಸದಲಗಿ, ಶೋಭಾ ಮುದ್ದಪ್ಪನವರ, ಸಂಗೀತ ಶಿಕ್ಷಕಿ ಶಶಿಕಲಾ ಭಟ್, ಕಸಾಪ ಸದಸ್ಯ ವೆಂಕಮ್ಮ ಗಾವಂಕರ, ಕಲ್ಪನಾ ಪಾಟೀಲ ಮುಂತಾದವರಿದ್ದರು.