ರಾಜ್ಯದಲ್ಲಿ ಕನ್ನಡವೇ ಆಡಳಿತ ಭಾಷೆ: ಸಚಿವ ಮಂಕಾಳ ಎಸ್. ವೈದ್ಯ

KannadaprabhaNewsNetwork | Published : Nov 2, 2024 1:26 AM

ಸಾರಾಂಶ

ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣಗೊಂಡು ಇಂದಿಗೆ 50 ವರ್ಷ ಪೂರ್ಣಗೊಂಡಿರುವ ಶುಭ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕರ್ನಾಟಕ ಸಂಭ್ರಮ-50 ಹೆಸರಿನಲ್ಲಿ ವರ್ಷವಿಡಿ ರಾಜ್ಯಾದ್ಯಂತ ಕನ್ನಡ ತೇರನ್ನು ಎಳೆಯುವ ಕಾರ್ಯಕ್ರಮ ಹಮ್ಮಿಕೊಂಡಿದೆ.

ಕಾರವಾರ: ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ತನ್ನದೇ ಆದ ಸ್ಥಾನಮಾನ ಹೊಂದಿರುವುದರ ಜತೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಸಿಕ್ಕಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಹೇಳಿದರು.

ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಶುಕ್ರವಾರ ನಡೆದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ರಾಜ್ಯದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿದ್ದು, ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಎಲ್ಲ ಕಚೇರಿಗಳಲ್ಲಿ ಹಾಗೂ ಸಾರ್ವಜನಿಕರು ವ್ಯವಹರಿಸುವ ಭಾಷೆಯಾಗಿ ಕನ್ನಡವನ್ನೇ ಬಳಸಲಾಗುತ್ತಿದ್ದು, ಕನ್ನಡ ಭಾಷೆಯ ಬೆಳವಣಿಗೆಗೆ ಸರ್ಕಾರ ಎಲ್ಲ ರೀತಿಯ ಬೆಂಬಲ ನೀಡುತ್ತಿದೆ ಎಂದರು.

ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣಗೊಂಡು ಇಂದಿಗೆ 50 ವರ್ಷ ಪೂರ್ಣಗೊಂಡಿರುವ ಶುಭ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕರ್ನಾಟಕ ಸಂಭ್ರಮ-50 ಹೆಸರಿನಲ್ಲಿ ವರ್ಷವಿಡಿ ರಾಜ್ಯಾದ್ಯಂತ ಕನ್ನಡ ತೇರನ್ನು ಎಳೆಯುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಕನ್ನಡದ ಪ್ರಪ್ರಥಮ ಶಾಸನವಾದ ಹಲ್ಮೀಡಿ ಪ್ರತಿಕೃತಿಯನ್ನು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಅನಾವರಣಗೊಳಿಸುವ ಮೂಲಕ ಕನ್ನಡವನ್ನು ಪಸರಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ರಾಜ್ಯದ ಎಲ್ಲ ವರ್ಗದ ಸಮುದಾಯಗಳಿಗೆ ಸಮಾನವಾಗಿ ಯೋಜನೆಗಳನ್ನು ತಲುಪಿಸುವ ಮೂಲಕ ಜನತೆ ನೆಮ್ಮದಿ ಜೀವನ ಸಾಗಿಸಲು ಹಾಗೂ ಆರ್ಥಿಕವಾಗಿ ಸಬಲರಾಗಲು ಸಹಕಾರಿಯಾಗಿದೆ. ಉಳ್ಳವರು ಆರ್ಥಿಕವಾಗಿ ಸಬಲರಾದವರು ತಮ್ಮ ಸ್ವ ಇಚ್ಛೆಯಿಂದ ಯೋಜನೆಗಳ ಲಾಭ ಪಡೆಯುವುದನ್ನು ಹಿಂದಿರುಗಿಸುವ ಮೂಲಕ ಅವಶ್ಯಕತೆ ಇರುವವರಿಗೆ ಯೋಜನೆಯ ಸದುಪಯೋಗ ಪಡೆಯಲು ಸಹಕರಿಸಬೇಕು. ಉತ್ತರ ಕನ್ನಡ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಅಂದಾಜು ₹2 ಸಾವಿರ ಕೋಟಿಗೂ ಅಧಿಕ ಮೊತ್ತವನ್ನು ಗ್ಯಾರಂಟಿ ಯೋಜನೆಯ ಮೂಲಕ ಫಲಾನುಭವಿಗಳಿಗೆ ತಲುಪಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಎಲ್ಲರಿಗೂ ಅನುಕೂಲವಾಗುವ ರೀತಿಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ರಪ್ತು ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲು ಕಾರವಾರ ಬಂದರು ಮೇಲ್ದರ್ಜೆಗೆ ಏರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಭುವನಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ವಿವಿಧ ಇಲಾಖೆಗಳ ಸ್ತಬ್ಧ ಚಿತ್ರ ಮೆರವಣಿಗೆಗೆ ಚಾಲನೆ ನೀಡಿದರು. ಇದೇ ವೇಳೆ ವಿವಿಧ ಇಲಾಖೆಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಿಬ್ಬಂದಿಯನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಪೊಲೀಸ್, ಅರಣ್ಯ, ಗೃಹ ರಕ್ಷಕ ದಳ, ಎನ್.ಸಿ.ಸಿ., ಸ್ಕೌಟ್ಸ್ ಆ್ಯಂಡ್‌ ಗೈಡ್ಸ್, ಸೇವಾದಳ ತಂಡಗಳಿಂದ ಸಚಿವರು ಗೌರವ ವಂದನೆ ಸ್ವೀಕರಿಸಿದರು. ಬಳಿಕ ಆಕರ್ಷಕ ಪಥ ಸಂಚಲನ ನಡೆಯಿತು. ಶಾಲಾ ವಿದ್ಯಾರ್ಥಿಗಳಿಂದ ನಾಡಿನ ಕಲೆ ಸಾಹಿತ್ಯ ಸಂಸ್ಕೃತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ, ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ್, ಜಿಲ್ಲಾಧಿಕಾರಿ ಕೆ. ಲಕ್ಷ್ಮೀ ಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠ ನಾರಾಯಣ ಎಂ., ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಉಪ ವಿಭಾಗಾಧಿಕಾರಿ ಕನಿಷ್ಕ, ಕೋಸ್ಟ್ ಗಾರ್ಡ್ ಕಮಾಂಡರ್ ಕಿರಣ್ ಕುಮಾರ್ ಸಿನ್ಹಾ ಮತ್ತಿತರರು ಇದ್ದರು.

Share this article