ಕನ್ನಡಪ್ರಭ ವಾರ್ತೆ ಪಾಂಡವಪುರ
ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಧ್ಯೇಯ ವಾಕ್ಯದೊಂದಿಗೆ ರಾಜ್ಯಾದಾದ್ಯಂತ ಸಂಚರಿಸುತ್ತಿರುವ ರಥಯಾತ್ರೆ ಕೆ.ಆರ್.ಪೇಟೆ ಮೂಲಕ ಪಾಂಡವಪುರ ತಾಲೂಕು ಗಡಿ ಪ್ರವೇಶಿಸಿತು. ಮಹಿಳೆಯರ ಪೂರ್ಣಕುಂಭ ಸ್ವಾಗತ ಹಾಗೂ ಮಂಗಳಕರ ವಾದ್ಯಗಳೊಂದಿಗೆ ತಹಸೀಲ್ದಾರ್ ಎಸ್.ಸಂತೋಷ್ ನೇತೃತ್ವದಲ್ಲಿ ಚಿನಕುರಳಿ ಗ್ರಾಪಂ ಆಡಳಿತ ಮಂಡಳಿ ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳು ಪಟಾಕಿ ಸಿಡಿಸಿ, ಕನ್ನಡಾಂಬೆಗೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ರಥಯಾತ್ರೆಗೆ ಅದ್ಧೂರಿ ಸ್ವಾಗತ ಕೋರಿದರು.
ಯಾತ್ರೆಯನ್ನು ಬರಮಾಡಿಕೊಂಡ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಕನ್ನಡಾಂಬೆ ತಾಯಿ ಭುವನೇಶ್ವರಿಗೆ ಗಂಧದ ಕಡ್ಡಿ ಬೆಳಗಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿ, ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸರ್ಕಾರ ರಥಯಾತ್ರೆ ಹಮ್ಮಿಕೊಳ್ಳುವ ಮೂಲಕ 50ರ ಸುವರ್ಣ ಸಂದರ್ಭವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದೆ ಎಂದರು.ನಾವು ಕನ್ನಡಿಗರಾಗಿ ಭಾಷೆ, ನೆಲ, ಜಲ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗುವ ಸಂದರ್ಭ ಬಂದರೆ ಯಾವುದಕ್ಕೂ ಹಿಂಜರಿಯದೆ ಹೋರಾಟ ಮಾಡಬೇಕು. ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡ ೫೦ರ ಸಭ್ರಮದ ಜತೆಗೆ ಮಂಡ್ಯ ಜಿಲ್ಲೆಯಲ್ಲಿ ರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನಾ ನಡೆಯುತ್ತಿರುವುದು ಸಂತಸದ ವಿಷಯ ಎಂದರು.
ರಥಯಾತ್ರೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಸಾವಿರಾರು ಕನ್ನಡಾಭಿಮಾನಿಗಳು ಕನ್ನಡಾಂಬೆಗೆ ಪುಷ್ಪಾರ್ಚನೆ ನೆರವೇರಿಸಿ ನಮನ ಸಲ್ಲಿಸಿದರು. ಬಳಿಕ ರಥಯಾತ್ರೆ ಶಾಲಾ ಮಕ್ಕಳ ಬ್ಯಾಂಡ್‌ಸೆಟ್‌ನೊಂದಿಗೆ ಪಾಂಡವಪುರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಕೆನ್ನಾಳು ಮತ್ತು ರೈಲ್ವೆ ನಿಲ್ದಾಣದ ಮೂಲಕ ಶ್ರೀರಂಗಪಟ್ಟಣಕ್ಕೆ ತೆರಳಿತು.ಈ ವೇಳೆ ತಹಸೀಲ್ದಾರ್ ಎಸ್.ಸಂತೋಷ್, ಶಿರಸ್ತೇದಾರ್ ಮೋಹನ್, ಕಸಾಪ ತಾಲೂಕು ಅಧ್ಯಕ್ಷ ಮೇನಾಗರ ಪ್ರಕಾಶ್, ಸಿಡಿಪಿಒ ಪೂರ್ಣಿಮ, ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಕಿಸಾನ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಸಿ.ಆರ್.ರಮೇಶ್, ಚಿನುಕುರಳಿ ಗ್ರಾಪಂ ಅಧ್ಯಕ್ಷ ಶಿವಕುಮಾರ್, ಸದಸ್ಯ ಸಿ.ಎ.ಲೋಕೇಶ್, ಮೈಕ್ ಮಹದೇವು, ಕೆ.ಬಿ.ರಾಮು, ರಾ.ಸ.ಹನುಮಂತೇಗೌಡ ಇತರರು ಇದ್ದರು.