ಕನ್ನಡ ಜ್ಯೋತಿ ರಥಯಾತ್ರೆಗೆ ನಾಗಮಂಡಲದಲ್ಲಿ ಅದ್ಧೂರಿ ಸ್ವಾಗತ

KannadaprabhaNewsNetwork | Published : Aug 20, 2024 12:45 AM

ಸಾರಾಂಶ

ಸ್ಥಳೀಯ ಜನಪ್ರತಿನಿಧಿಗಳು, ಕನ್ನಡ ಸಂಘ, ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು, ಕನ್ನಡಾಭಿಮಾನಿಗಳು ರಥಕ್ಕೆ ಹಾರ ಹಾಕಿ ಪುಷ್ಪಾರ್ಚನೆ ಮೂಲಕ ಗೌರವ ನಮನ ಸಲ್ಲಿಸಿದರು. ನಂತರ ಒಂದು ಗಂಟೆಗೂ ಹೆಚ್ಚು ಕಾಲ ವೀರಗಾಸೆ ಕುಣಿತ, ಪೂಜಾ ಕುಣಿತ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಕರ್ನಾಟಕ ಸಂಭ್ರಮ- 50, ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಅಭಿಯಾನದ ಪ್ರಯುಕ್ತ ಹಮ್ಮಿಕೊಂಡಿರುವ ಕನ್ನಡ ಜ್ಯೋತಿ ರಥಯಾತ್ರೆಯನ್ನು ತಾಲೂಕಿನ ಗಡಿಭಾಗ ಮಾಗಡಿ - ಜಲಸೂರು ರಾಜ್ಯ ಹೆದ್ದಾರಿಯ ಕುಡುಗುಬಾಳು ಗ್ರಾಮದ ಬಳಿ ಸೋಮವಾರ ಬೆಳಗ್ಗೆ ತಾಲೂಕು ಆಡಳಿತದ ಅಧಿಕಾರಿಗಳು ಬರಮಾಡಿಕೊಂಡರು.

ಮದ್ದೂರು ತಾಲೂಕಿನ ಕೌಡ್ಲೆ ಗ್ರಾಮದಿಂದ ಸೋಮವಾರ ಬೆಳಗ್ಗೆ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆಗೆ ತಹಸೀಲ್ದಾರ್ ಜಿ.ಎಂ.ಸೋಮಶೇಖರ್, ತಾಪಂ ಇಒ ಸತೀಶ್ ಸೇರಿ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಕನ್ನಡ ಪರ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪೂಜೆ ಸಲ್ಲಿಸಿ, ಹೂ ಮಾಲೆ ಹಾಕಿ ಪುಷ್ಪಾರ್ಚನೆ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು.

ನಂತರ ಶೆಟ್ಟಹಳ್ಳಿಗೆ ಆಗಮಿಸಿದ ರಥಯಾತ್ರೆಯೊಂದಿಗೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಕನ್ನಡ ಬಾವುಟ ಹಿಡಿದು ಹೆಜ್ಜೆ ಹಾಕಿದರು.

ನಂತರ ದೇವಲಾಪುರ ಗ್ರಾಮಕ್ಕೆ ಆಗಮಿಸಿದ ರಥಯಾತ್ರೆಗೆ ಗ್ರಾಪಂ ಅಧ್ಯಕ್ಷ ಗೋವಿಂದರಾಜು, ಪಿಡಿಒ ಲವ ವಿಶೇಷ ಪೂಜೆ ಸಲ್ಲಿಸಿ ಬರಮಾಡಿಕೊಂಡರು. ಈ ವೇಳೆ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು, ಗ್ರಾಪಂ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸ್ಥಳೀಯ ಜನರು ಹಳದಿ, ಕೆಂಪು ಶಾಲು ಧರಿಸಿ ನಾಡಧ್ವಜ ಹಿಡಿದು ಕನ್ನಡ ಪರ ಘೋಷಣೆಯೊಂದಿಗೆ ಕರ್ನಾಟಕ ಪಬ್ಲಿಕ್ ಶಾಲೆ ವರೆಗೆ ಹೆಜ್ಜೆ ಹಾಕಿ ರಥಯಾತ್ರೆಯನ್ನು ಬೀಳ್ಕೊಟ್ಟರು.

ಬಳಿಕ ತಟ್ಟಹಳ್ಳಿ ಗೇಟ್‌ಗೆ ಆಗಮಿಸಿದ ರಥಯಾತ್ರೆಯೊಂದಿಗೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಕೆಲ ದೂರ ಹೆಜ್ಜೆ ಹಾಕಿದರೆ, ದೇವಲಾಪುರ ಹ್ಯಾಂಡ್ ಪೋಸ್ಟ್‌ಗೆ ರಥ ಯಾತ್ರೆ ಆಗಮಿಸುತ್ತಿದ್ದಂತೆ ಕರಡಹಳ್ಳಿ ಗ್ರಾಪಂ ವತಿಯಿಂದ ಸ್ವಾಗತ ಕೋರಿ ಬರಮಾಡಿಕೊಳ್ಳಲಾಯಿತು. ಈ ವೇಳೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಸರ್ಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ಸರ್ಕಾರಿ ಐಟಿಐ ಕಾಲೇಜು ವಿದ್ಯಾರ್ಥಿಗಳು ಕನ್ನಡ ಧ್ವಜ ಹಿಡಿದು ಕನ್ನಡಪರ ಜಯಘೋಷದೊಂದಿಗೆ ರಥಯಾತ್ರೆಯೊಂದಿಗೆ ಹೆಜ್ಜೆ ಹಾಕಿ ನಾಗಮಂಗಲ ಪಟ್ಟಣದತ್ತ ಬೀಳ್ಕೊಟ್ಟರು.

ನಂತರ ಪಟ್ಟಣದ ಶ್ರೀ ಸೌಮ್ಯಕೇಶವಸ್ವಾಮಿ ದೇವಸ್ಥಾನದ ಮುಂಭಾಗಕ್ಕೆ ಆಗಮಿಸಿದ ರಥಯಾತ್ರೆಗೆ ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ ಮತ್ತು ಸದಸ್ಯರು ಹೂ ಮಾಲೆ ಹಾಕಿ ಪುಷ್ಪಾರ್ಚನೆಗೈದು ಆತ್ಮೀಯವಾಗಿ ಸ್ವಾಗತ ಕೋರಿ ಬರಮಾಡಿಕೊಂಡರು. ನೆರೆದಿದ್ದ ವಿವಿಧ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು 500 ಮೀಟರ್‌ಗೂ ಹೆಚ್ಚು ಉದ್ದದ ಕನ್ನಡ ಬಾವುಟ ಪ್ರದರ್ಶಿಸಿಸುವ ಜೊತೆಗೆ ಕನ್ನಡ ಪರ ಜಯಘೋಷದೊಂದಿಗೆ ಅದ್ಧೂರಿ ಸ್ವಾಗತ ಕೋರಿದರು.

ಸ್ಥಳೀಯ ಜನಪ್ರತಿನಿಧಿಗಳು, ಕನ್ನಡ ಸಂಘ, ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು, ಕನ್ನಡಾಭಿಮಾನಿಗಳು ರಥಕ್ಕೆ ಹಾರ ಹಾಕಿ ಪುಷ್ಪಾರ್ಚನೆ ಮೂಲಕ ಗೌರವ ನಮನ ಸಲ್ಲಿಸಿದರು. ನಂತರ ಒಂದು ಗಂಟೆಗೂ ಹೆಚ್ಚು ಕಾಲ ವೀರಗಾಸೆ ಕುಣಿತ, ಪೂಜಾ ಕುಣಿತ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಬಳಿಕ ಪಟ್ಟಣದ ಚಾಮರಾಜನಗರ - ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿದ ರಥಯಾತ್ರೆ ಕೆ.ಮಲ್ಲೇನಹಳ್ಳಿ, ಕಾಂತಾಪುರ, ಕರಿಕ್ಯಾತನಹಳ್ಳಿ ಮಾರ್ಗವಾಗಿ ಸಂಜೆ ವೇಳೆಗೆ ಬೋಗಾದಿ ಗ್ರಾಮಕ್ಕೆ ಆಗಮಿಸಿದ ವಾಸ್ತವ್ಯ ಹೂಡಿತು.

ಆ.20ರ ಬೆಳಗ್ಗೆ ರಥಯಾತ್ರೆಯನ್ನು ಕೆ.ಆರ್.ಪೇಟೆ ತಾಲೂಕಿಗೆ ಬೀಳ್ಕೊಡಲಾಗುವುದೆಂದು ತಹಸೀಲ್ದಾರ್ ಜಿ.ಎಂ.ಸೋಮಶೇಖರ್ ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಯೋಗೇಶ್, ತಾಲೂಕು ಕಸಾಪ ಅಧ್ಯಕ್ಷ ಸಿ.ಆರ್.ಚಂದ್ರಶೇಖರ್, ಸಿಡಿಪಿಒ ಕೃಷ್ಣಮೂರ್ತಿ, ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಮಂಜೇಶ್, ತಾಪಂ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ಸೇರಿ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Share this article