ಕನ್ನಡಪ್ರಭ ವಾರ್ತೆ ಕೊಪ್ಪಳ
ಕರ್ನಾಟಕ ಸಂಭ್ರಮ 50ರ ಜ್ಯೋತಿ ರಥಯಾತ್ರೆಯು ಭಾನುವಾರ ಕೊಪ್ಪಳ ತಾಲೂಕಿಗೆ ಪ್ರವೇಶಿಸಿತು. ಬೆಳಗ್ಗೆ ಗಂಗಾವತಿಯಿಂದ ಹೊರಟ ರಥಯಾತ್ರೆ ಬೂದಗುಂಪಾ ಮಾರ್ಗವಾಗಿ ಕೊಪ್ಪಳ ತಾಲೂಕಿಗೆ ಪ್ರವೇಶ ಮಾಡಿತು. ತಾಲೂಕಿನ ಮಾರ್ಗ ಮಧ್ಯೆದ ಜಬ್ಬಲಗುಡ್ಡ ಗ್ರಾಮದಲ್ಲಿ ಬಳಿಯಲ್ಲಿ ರಥಯಾತ್ರೆಯನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಜಬ್ಬಲಗುಡ್ಡ ಸೇರಿದಂತೆ ಸುತ್ತಲಿನ ವಿವಿಧ ಗ್ರಾಮಗಳ ಮಹಿಳೆಯರು ರಥದ ಮುಂದೆ ಕುಂಭ ಹೊತ್ತು ಸಾಗಿದರು. ಕನ್ನಡಪರ ಸಂಘಟನೆಗಳು, ವಿವಿಧ ಸಂಘಟನೆಗಳು, ಮುಖಂಡರು ರಥಯಾತ್ರೆ ಸ್ವಾಗತಿಸಿದರು. ಕನ್ನಡ ಧ್ವಜದ ಶಾಲುಗಳನ್ನು ಹಾಕಿ, ಕನ್ನಡ ಜಯಘೋಷ ಕೂಗುತ್ತಾ ಸಾಲಾಗಿ ಹೆಜ್ಜೆ ಹಾಕಿ ಸಂಭ್ರಮಿಸಿದರು. ರಥಯಾತ್ರೆಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು.ತಹಸೀಲ್ದಾರ ವಿಠ್ಠಲ್ ಚೌಗಲಾ, ತಾಪಂ ಇಒ ದುಂಡಪ್ಪ ತುರಾದಿ, ಗ್ರೇಡ್ 2 ತಹಸೀಲ್ದಾರ ಗವಿಸಿದ್ದಪ್ಪ ಮಣ್ಣೂರ, ಪಿಡಿಒ ಲಕ್ಷ್ಮೀ, ಕೊಪ್ಪಳ ತಹಸೀಲ್ದಾರ್ ಕಚೇರಿಯ ಶಿರಸ್ತೇದಾರ ಮಹಾವೀರಕುಮಾರ ಅಳ್ಳಳ್ಳಿ, ಬಿಸಿಎಂ ಇಲಾಖೆಯ ಅಧಿಕಾರಿ ನಾಗರತ್ನ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿ ವಿಲಾಸ, ತಾಲೂಕಿನ ತಾಲೂಕುಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.
ಕೊಪ್ಪಳ ತಾಲೂಕಿನಲ್ಲಿ ಸಂಚರಿಸಿದ ಬಳಿಕ ಜ್ಯೋತಿ ರಥಯಾತ್ರೆಯು ನ.28, 29ರಂದು ಎರಡು ದಿನಗಳ ಕಾಲ ಕುಕನೂರ ತಾಲೂಕಿನಾದ್ಯಂತ ಸಂಚರಿಸಲಿದೆ. ತಾಲೂಕಿನಲ್ಲಿ ಕನ್ನಡ ಜ್ಯೋತಿಯಾತ್ರೆ ರಥವು ಎರಡು ದಿನಗಳ ಕಾಲ ಇರುವುದರಿಂದ ಸಂಬಂಧಿಸಿದ ತಾಲೂಕಿನ ತಹಶೀಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳು ರಥಯಾತ್ರೆಯು ಸಂಚರಿಸುವ ಮಾರ್ಗವನ್ನು ಎರಡು ದಿನಕ್ಕೆ ನಿಗದಿಪಡಿಸಬೇಕು.
ಕರ್ನಾಟಕ ಸಂಭ್ರಮ-50ರ ಜ್ಯೋತಿ ರಥವು ನಂತರ ಯಲಬುರ್ಗಾ ತಾಲೂಕು, ಕುಷ್ಟಗಿ ತಾಲೂಕು, ಕನಕಗಿರಿ ತಾಲೂಕು ಹಾಗೂ ಕಾರಟಗಿ ತಾಲೂಕುಗಳಲ್ಲಿ ಸಹ ಸಂಚರಿಸಲಿದೆ. ತಾಲೂಕು ಮಟ್ಟದ ಅಧಿಕಾರಿಗಳು ಈಗಿನಿಂದಲೇ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು. ಜ್ಯೋತಿ ರಥಯಾತ್ರೆಯು ತಾಲೂಕಿಗೆ ಆಗಮಿಸುವ ಮಾಹಿತಿಯನ್ನು ಆಯಾ ತಾಲೂಕಿನ ಜನಪ್ರತಿನಿಧಿಗಳಿಗೆ ಮತ್ತು ಸಾಹಿತಿಗಳು ಕಲಾವಿದರು, ಕನ್ನಡಪರ ಸಂಘಟನೆಗಳು, ಮಾಧ್ಯಮದವರಿಗೆ ತಿಳಿಸಬೇಕು. ಕಾರ್ಯಕ್ರಮಕ್ಕೆ ಆಯಾ ತಾಲೂಕಿನಲ್ಲಿ ತಹಶೀಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಮನ್ವಯದಲ್ಲಿ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಬೇಕು ಎಂದು ಡಿಸಿ ತಿಳಿಸಿದ್ದಾರೆ.