ಕನ್ನಡ ಭಾಷೆ ಕಠಿಣ ಕಾಲದಲ್ಲಿದೆ: ಎಚ್.ಕೆ. ಪಾಟೀಲ

KannadaprabhaNewsNetwork | Published : Jan 21, 2025 12:31 AM

ಸಾರಾಂಶ

ಕನ್ನಡ ಶಾಲೆಗಳಿಗೆ ಸರ್ಕಾರ ಎಷ್ಟೇ ಸೌಲಭ್ಯಗಳನ್ನು ಕಲ್ಪಿಸಿದರೂ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಇದರಿಂದಾಗಿ ಕನ್ನಡ ಶಾಲೆಗಳು ಬಂದ್ ಆಗುತ್ತಿರುವುದು ಅತೀವ ನೋವಿನ ಸಂಗತಿಯಾಗಿದೆ ಎಂದು ಕಾನೂನು, ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಗದಗ: ಸಾರ್ವಜನಿಕರಲ್ಲಿ ಭಾಷೆಯ ಬಗ್ಗೆ ಆಗುತ್ತಿರುವ ಬದಲಾವಣೆಯಿಂದಾಗಿ ಕನ್ನಡಭಾಷೆ ಇಂದು ಅತ್ಯಂತ ಕಠಿಣ ಕಾಲದಲ್ಲಿದೆ. ಕನ್ನಡ ಶಾಲೆಗಳು ಬಂದ್ ಆಗುತ್ತಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ ಎಂದು ಕಾನೂನು, ಪ್ರವಾಸೋದ್ಯಮ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಅವರು ಸೋಮವಾರ ಜಿಲ್ಲೆಯ ಗಜೇಂದ್ರಗಡದ ತೋಂಟದಾರ್ಯ ಸಿಬಿಎಸ್‌ಸಿ ಶಾಲೆಯಲ್ಲಿ ನಡೆದ 10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದರು. ಜನರಲ್ಲಿ ಇಂಗ್ಲಿಷ್‌ ಬಗ್ಗೆ ದಿನೇ ದಿನೇ ವ್ಯಾಮೋಹ ಹೆಚ್ಚುತ್ತಲೇ ಇದೆ. ಇದಕ್ಕೆ ಪ್ರಮುಖ ಕಾರಣ ಇಂಗ್ಲಿಷ್‌ ಕಲಿತರೆ ಉದ್ಯೋಗ ಸಿಗುತ್ತದೆ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಕನ್ನಡ ಶಾಲೆಗಳಿಗೆ ಸರ್ಕಾರ ಎಷ್ಟೇ ಸೌಲಭ್ಯಗಳನ್ನು ಕಲ್ಪಿಸಿದರೂ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಇದರಿಂದಾಗಿ ಕನ್ನಡ ಶಾಲೆಗಳು ಬಂದ್ ಆಗುತ್ತಿರುವುದು ಅತೀವ ನೋವಿನ ಸಂಗತಿಯಾಗಿದೆ. ಕನ್ನಡ ಮಾಧ್ಯಮದಲ್ಲಿ ಕಲಿತರೆ ಉದ್ಯೋಗ ಸಿಗುವುದಿಲ್ಲ ಎನ್ನುವಂತಹ ಮನಸ್ಥಿತಿಗೆ ಪಾಲಕರು ಬಂದಿರುವುದು ಬೇಸರದ ಸಂಗತಿಯಾಗಿದೆ ಎಂದು ಹೇಳಿದರು.

ಇಂಗ್ಲಿಷ್‌ನಲ್ಲಿ ಮಾತನಾಡುವ ಮಕ್ಕಳು ಜಾಣರು ಎನ್ನುವ ಮನಸ್ಥಿತಿಯಿಂದ ಪಾಲಕರು ಹೊರಬರಬೇಕು. ಇದಕ್ಕೆ ಪೂರಕವಾದ ಕ್ರಮಗಳು ಆಗಬೇಕು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ಕನ್ನಡ ಮಾಧ್ಯಮದಲ್ಲಿ ಓದುವ ಮಕ್ಕಳಿಗೆ ಮುಂದೆ ಉದ್ಯೋಗದಲ್ಲಿ ಕೃಪಾಂಕ ನೀಡಬೇಕು. ಈ ಬಗ್ಗೆ ಇಂದಿನ ಸಾಹಿತ್ಯ ಸಮ್ಮೇಳನ ಸರ್ವಾನುಮತದಿಂದ ತೀರ್ಮಾನಿಸಿ, ಶಾಸಕರ ಮೂಲಕ ನನಗೆ ಸಲ್ಲಿಸಿದರೆ ನಾನು, ಈ ಕುರಿತು ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ, ಕನ್ನಡ ಭಾಷೆ ಉಳಿಸುವ ನಿಟ್ಟಿನಲ್ಲಿ ಇದರೊಟ್ಟಿಗೆ ಏನೆಲ್ಲ ಹೊಸ ಆಯಾಮಗಳ ಮೂಲಕ ಭಾಷೆ ಉಳಿಸಲು ಬೇಕಾದ ಕ್ರಮಗಳನ್ನು ಜಾರಿಗೆ ತರಲು ಚರ್ಚಿಸೋಣ ಎಂದು ಹೇಳಿದರು. ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ. ಚಂದ್ರಶೇಖರ ವಸ್ತ್ರದ, ರೋಣ ಶಾಸಕ ಜಿ.ಎಸ್. ಪಾಟೀಲ ಹಾಜರಿದ್ದರು. ಕನ್ನಡ ಕೃಪಾಂಕ:

ರಾಜ್ಯದಲ್ಲಿ ಗ್ರಾಮೀಣ ಭಾಗದಲ್ಲಿ ಓದಿದ ಮಕ್ಕಳಿಗೆ ಹೇಗೆ ಗ್ರಾಮೀಣ ಕೃಪಾಂಕ ನೀಡಲಾಗುತ್ತದೆಯೋ ಹಾಗೆಯೇ ಕನ್ನಡ ಕೃಪಾಂಕ ನೀಡುವಂತಾಗಬೇಕು. ಇದರಿಂದಾಗಿ ಸಹಜವಾಗಿ ಮಕ್ಕಳು ಮತ್ತು ಪಾಲಕರು ಕನ್ನಡ ಮಾಧ್ಯಮದಲ್ಲಿ ಮಕ್ಕಳನ್ನು ಓದಿಸಲು ಆಸಕ್ತಿ ವಹಿಸುತ್ತಾರೆ. ಇದರಿಂದಾಗಿ ಕನ್ನಡವೂ ಉದ್ಯೋಗ ಭಾಷೆಯಾಗಿ ರೂಪಗೊಳ್ಳಲಿದೆ ಎಂದು ಕಾನೂನು ಸಚಿವ ಎಚ್,ಕೆ. ಪಾಟೀಲ ಹೇಳಿದರು.

Share this article